ಶಾಲಾ ಮಕ್ಕಳ ಬ್ಯಾಗ್ ಭಾರಕ್ಕೆ ಕಡಿವಾಣ
ಮೈಸೂರು

ಶಾಲಾ ಮಕ್ಕಳ ಬ್ಯಾಗ್ ಭಾರಕ್ಕೆ ಕಡಿವಾಣ

May 5, 2019

ಮೈಸೂರು: 2019-20ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಸರ್ಕಾರಿ, ಅನು ದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಹೆಣ ಭಾರ ಕಡಿಮೆ ಮಾಡಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ (ಯೋಜನೆ) ಎನ್‍ಆರ್‍ಎಸ್ ನಾಧನ್ ಅವರು ಮೇ 3ರಂದು ಆದೇಶ ಹೊರಡಿಸಿದ್ದು, ಬ್ಯಾಗ್‍ನ ತೂಕವು ವಿದ್ಯಾರ್ಥಿ ದೇಹದ ಸರಾಸರಿ ತೂಕದ ಶೇ.10 ಮೀರದಂತಿರ ಬೇಕೆಂದು ಸೂಚಿಸಿದ್ದಾರೆ. 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ (ಹೋಂವರ್ಕ್) ನೀಡಬಾರದು, ಅತಿಯಾದ ಹೊರೆಯ ಶಾಲಾ ಬ್ಯಾಗ್‍ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಕಡಿಮೆ ಖರ್ಚಿನ ಹಗುರವಾದ ಶಾಲಾ ಬ್ಯಾಗ್ ಹಾಗೂ ಲೇಖನ ಸಾಮಗ್ರಿ ಬಳಸುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕೆಂದೂ ಸರ್ಕಾರ ಸೂಚಿಸಿದೆ.

ಶಾಲಾ ಗ್ರಂಥಾಲಯಗಳಲ್ಲಿ ಪದಕೋಶ, ಅಟ್ಲಾಸ್, ಜ್ಞಾನ ವಿಜ್ಞಾನಗಳನ್ನು ಪೂರೈಸಬೇಕು, ನೀರು ಕೊಂಡೊ ಯ್ಯುವುದನ್ನು ತಪ್ಪಿಸಲು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಮನೆಯಿಂದ ಶಾಲೆಗೆ ತರುವ ಪಠ್ಯಪುಸ್ತಕ, ನೋಟ್ ಬುಕ್, ಕಲಿಕಾ ಉಪಕರಣಗಳನ್ನು ತರಗತಿಯೊಳಗೇ ಶೇಖರಿಸಿಡಲು ಕ್ರಮವಹಿಸಬೇಕೆಂದೂ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಶಾಲಾ ಮಕ್ಕಳ ಬ್ಯಾಗ್ ಹೊರೆ ತಗ್ಗಿಸುವ ಸಂಬಂಧ 2016-17ನೇ ಸಾಲಿನಲ್ಲಿ ಕೈಗೊಂಡಿದ್ದ ಪ್ರಾಯೋಗಿಕ ಅಧ್ಯ ಯನದಲ್ಲಿ ಮಾರ್ಗದರ್ಶಿ ನಿಯಮಗಳನ್ನು ನೀಡಲಾಗಿದೆ. ಅದರನ್ವಯ ವಿದ್ಯಾರ್ಥಿಗಳು ಅವರ ದೇಹದ ತೂಕದ ಶೇ.10ರಿಂದ 15ರಷ್ಟು ತೂಕದ ಪಠ್ಯ ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ ಎಂಬುದಾಗಿ ಮೂಳೆ ತಜ್ಞರು ಶಿಫಾರಸು ಮಾಡಿರುವುದರಿಂದ ಸರ್ಕಾರ ಈ ಕ್ರಮ ವಹಿಸಿದೆ.

ಬ್ಯಾಗ್ ರಹಿತ ದಿನ: ತಿಂಗಳ 3ನೇ ಶನಿವಾರದಂದು `ಬ್ಯಾಗ್ ರಹಿತ ದಿನ’ವಾಗಿ ಆಚರಿಸಬೇಕು. ಅಂದು ಶಿಕ್ಷಕರು ಪಠ್ಯ ಪುಸ್ತಕ ಅಥವಾ ಇತರೆ ಸಾಮಗ್ರಿಗಳಿಲ್ಲದೆಯೇ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕೆಂದೂ ಆದೇಶದಲ್ಲಿ ತಿಳಿಸಲಾಗಿದೆ. ಬ್ಯಾಗ್ ರಹಿತ ದಿನದಂದು ಕ್ಷೇತ್ರ ಸಂಚಾರ, ವಾರ್ತಾ ಪತ್ರಿಕೆಗಳ ಚಟುವಟಿಕೆಗಳು, ಗಣಿತದ ವಿನೋದ, ಅಬ್ಯಾಕನ್, ವಿಜ್ಞಾನದ ಪ್ರಯೋಗ ಮತ್ತು ಪ್ರದರ್ಶನಗಳು, ಸಾಮಾನ್ಯ ಜ್ಞಾನ, ಶೈಕ್ಷಣಿಕ ಸಂಘದ ಚಟುವಟಿಕೆಗಳು, ಕರಕುಶಲ ಚಟುವಟಿಕೆ, ಚಿತ್ರಕಲೆ, ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ, ಕನ್ನಡ, ಹಿಂದಿ, ಇಂಗ್ಲಿಷ್ ಭಕ್ತಿಗೀತೆ, ದೇಶಭಕ್ತಿಗೀತೆ ಚಟುವಟಿಕೆಗಳು, ನಕ್ಷೆ-ಚಿತ್ರ ಓದುವಿಕೆ ಹಾಗೂ ಒಳಾಂಗಣ ಕ್ರೀಡೆಗಳು, ಶ್ಲೋಕ ಪಠನ, ಶಾಲಾ ಪರಿಸರಕ್ಕನುಗುಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೆ ತರಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಮೈಸೂರಿನ ಶಾಲೆಗಳಲ್ಲಿ ಈಗಾಗಲೇ `ಬ್ಯಾಗ್ ರಹಿತ ದಿನಾಚರಣೆ’

ಮೈಸೂರು: ಸರ್ಕಾರ ಜಾರಿಗೆ ತಂದಿರುವ `ಬ್ಯಾಗ್ ರಹಿತ ದಿನ’ವನ್ನು ಮೈಸೂರಿನ ಕೆಲ ಶಾಲೆಗಳು ಈಗಾಗಲೇ ಆಚರಣೆಗೆ ತಂದಿವೆ. ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ವಿಜಯ ವಿಠಲ ಶಾಲೆ ಪ್ರಿನ್ಸಿಪಾಲ್ ಎಸ್.ಪಿ.ಆಶಾ, ತಾವು ಕಳೆದ ಎರಡು ವರ್ಷ ದಿಂದಲೇ ಈ ಪದ್ಧತಿಯನ್ನು ಅನುಸರಿಸುತ್ತಿದ್ದು, ಪ್ರತೀ ತಿಂಗಳ ಎರಡನೇ ಶನಿವಾರದಂದು `ಬ್ಯಾಗ್ ರಹಿತ’ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರು.ಅಂದು ಕಲೆ, ಕರಕುಶಲತೆ, ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ಕ್ರಿಯಾತ್ಮಕವಾದ ಸಾಮಥ್ರ್ಯ ವೃದ್ಧಿಸುತ್ತಿದ್ದೇವೆ ಎಂದರು.

ಕೌಟಿಲ್ಯ ವಿದ್ಯಾಲಯದ ಸೀನಿಯರ್ ಪ್ರಿನ್ಸಿಪಾಲ್ ಹಾಗೂ ಕಾರ್ಯದರ್ಶಿ ಡಾ.ಎಲ್.ಸವಿತಾ ಕೂಡ ಮಾತನಾಡಿ, ನಮ್ಮ ಶಾಲೆಯಲ್ಲಿ `ನೋ ಬ್ಯಾಗ್ ಡೇ’ ಈಗಾಗಲೇ ಅನು ಷ್ಠಾನದಲ್ಲಿದೆ ಎಂದರು. ಸಾಮಾನ್ಯವಾಗಿ ಶನಿವಾರಗಳಂದು ಮಕ್ಕಳಿಗೆ ಸ್ಕೌಟ್ಸ್, ದೈಹಿಕ ಶಿಕ್ಷಣ, ಸ್ಪೋಕನ ಇಂಗ್ಲಿಷ್, ಕ್ರೀಡೆ ಮತ್ತು ಇತರ ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದೇವೆ. ವೈಜ್ಞಾನಿಕ ಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಮಕ್ಕಳನ್ನು ಕ್ರಿಯಾತ್ಮಕವಾಗಿ ಪ್ರೋತ್ಸಾಹಿಸುತ್ತಿದ್ದೇವೆ ಎಂದರು. ಅಂದು ಬ್ಯಾಗ್ ತರಬೇಕೆಂದೇನು ಮಕ್ಕಳಿಗೆ ಹೇಳುತ್ತಿಲ್ಲ. ಬದಲಾಗಿ ಪಠ್ಯ ಪುಸ್ತಕ ಹಾಗೂ ಬ್ಯಾಗ್ ಅನ್ನು ಕೊಠಡಿಯಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಕ್ಸೆಲ್ ಪಬ್ಲಿಕ್ ಶಾಲೆ ಪ್ರಿನ್ಸಿಪಾಲ್ ಕೆ.ಜಿ.ಮ್ಯಾಥ್ಯೂ ಹೇಳಿದ್ದಾರೆ. ಶನಿವಾರಗಳನ್ನು ಸೃಜನಶೀಲತೆ ಮತ್ತು ಕ್ರೀಡೆಗೆ ಮುಡುಪಾಗಿಡಲಾಗಿದೆ. ನಮ್ಮಲ್ಲಿ ಉತ್ತಮ ಕಫೆಟೇರಿಯಾ ಇದೆ. ಅಲ್ಲಿ ಊಟ, ಶುದ್ಧ ಕುಡಿಯುವ ನೀರನ್ನು ಪೂರೈಸುವ ಮೂಲಕ ಮಕ್ಕಳು ಮನೆಯಿಂದ ಊಟ, ತಿಂಡಿ-ತಿನಿಸು ತರುವುದನ್ನು ತಪ್ಪಿಸಿದ್ದೇವೆ ಎಂದರು.

Translate »