ಕೇರಳ ಬಂದ್: ರಾಜ್ಯ ಸಾರಿಗೆ ಬಸ್ ಸಂಚಾರ ಸಂಜೆವರೆಗೆ ಸ್ಥಗಿತ
ಮೈಸೂರು

ಕೇರಳ ಬಂದ್: ರಾಜ್ಯ ಸಾರಿಗೆ ಬಸ್ ಸಂಚಾರ ಸಂಜೆವರೆಗೆ ಸ್ಥಗಿತ

January 4, 2019

ಮೈಸೂರು: ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿ ಬ್ಬರು ಪ್ರವೇಶಿಸಿದ್ದನ್ನು ಖಂಡಿಸಿ ಕೆಲ ಸಂಘಟನೆ ಗಳು ಕೇರಳ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನಿಂದ ಕೇರಳಕ್ಕೆ ತೆರಳಬೇಕಾ ಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರವನ್ನು ಸಂಜೆವರೆಗೂ ತಡೆಹಿಡಿಯಲಾಗಿತ್ತು.

ಅಯ್ಯಪ್ಪಸ್ವಾಮಿ ದೇವಾಲಯ ಹಿತರಕ್ಷಣಾ ಸಮಿತಿ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೇರಳ ಬಂದ್‍ಗೆ ಕರೆ ನೀಡಿತ್ತು. ಹಾಗಾಗಿ ಮೈಸೂರು ನಗರದಿಂದ ಕೇರಳದ ವಿವಿಧೆಡೆ ತೆರಳಬೇಕಾಗಿದ್ದ ಕರ್ನಾಟಕ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 50ಕ್ಕೂ ಹೆಚ್ಚು ಬಸ್‍ಗಳ ಸಂಚಾರ ವನ್ನು ಸಂಜೆವರೆಗೆ ರದ್ದುಗೊಳಿಸಲಾಗಿತ್ತು. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಮುಂಜಾನೆ 5 ಗಂಟೆಯಿಂದಲೇ ಕ್ಯಾಲಿಕಟ್, ತ್ರಿವೇಂಡ್ರಮ್, ತ್ರಿಚೂರು, ಕೋಯಿಕ್ಕೋಡ್, ಕಲ್ಪೆಟ್ಟ, ವೈನಾಡ್ ಸೇರಿದಂತೆ ಕೇರಳದ ಇನ್ನಿತ ರೆಡೆ ಹೋಗಬೇಕಾದ ಬಸ್‍ಗಳ ಸಂಚಾರ ರದ್ದು ಮಾಡಲಾಯಿತು. ಹಾಗಾಗಿ ಪ್ರಯಾಣಿಕರು ಪರ ದಾಡುವಂತಾಗಿತ್ತು.

ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‍ಗಳನ್ನೂ ಬನ್ನಿಮಂಟಪದ ಡಿಪೋದಲ್ಲಿ ನಿಲ್ಲಿಸಲಾಗಿತ್ತು. ಮಧ್ಯಾಹ್ನ 3.30ರ ನಂತರ ಕೇರಳಕ್ಕೆ ಹೋಗುವ ಬಸ್‍ಗಳು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿದವು. ಸಂಜೆ 4 ಗಂಟೆ ನಂತರವಷ್ಟೇ ಬಸ್, ಇನ್ನಿತರೆ ವಾಹನಗಳ ಸಂಚಾರ ಆರಂಭವಾಯಿತು.

ರಸ್ತೆಬದಿ ಕಾಲ ಕಳೆದ ಅಯ್ಯಪ್ಪ ಭಕ್ತರು: ಮೈಸೂರು, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದೆಡೆಯಿಂದ ಶಬರಿಮಲೆಗೆ ಹೊರಟಿದ್ದ ಮಾಲಾಧಾರಿಗಳು ಕೇರಳ ಬಂದ್ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ದಿನದೂಡುವಂತಾಗಿತ್ತು. ಇವರಲ್ಲಿ ಹಲವರು ಮೈಸೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದರು. ಕೆಲವರು ನಂಜನಗೂಡು, ಗುಂಡ್ಲುಪೇಟೆಯಲ್ಲಿ ರಸ್ತೆ ಬದಿ ಸಂಜೆವರೆಗೂ ಕಾಲ ಕಳೆದರೆ, ಮತ್ತೆ ಕೆಲವರು ವಿವಿಧ ಕಲ್ಯಾಣಮಂಟಪಗಳಲ್ಲಿ ವಿಶ್ರಾಂತಿ ಪಡೆದರು. ಬೆಳಿಗ್ಗೆ ಕೇರಳಕ್ಕೆ ಹೋಗುವ ಅಯ್ಯಪ್ಪ ಭಕ್ತರ ವಾಹನಗಳು ಊಟಿಯತ್ತ ಪ್ರಯಾಣ ಬೆಳೆಸಿದ್ದವು. ಬೆಳಿಗ್ಗೆ 11 ಗಂಟೆಯ ನಂತರ ಕೇರಳಕ್ಕೆ ಹೊಂದಿಕೊಂಡಂತೆ ಇರುವ ತಮಿಳುನಾಡಿನ ಗೂಡಲೂರಿ ನಲ್ಲೂ ಅಯ್ಯಪ್ಪಸ್ವಾಮಿ ದೇವಾಲಯ ಉಳಿಸಿ ಸಮಿತಿಯ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದರಿಂದ ಅಯ್ಯಪ್ಪ ಭಕ್ತರಿದ್ದ ವಾಹನಗಳನ್ನು ಕರ್ನಾಟಕದ ಗಡಿಯಲ್ಲಿಯೇ ತಡೆಯಲಾಯಿತು. ಗುಂಡ್ಲುಪೇಟೆಯಲ್ಲಿ ಬೀಡುಬಿಟ್ಟಿದ್ದ ಅಯ್ಯಪ್ಪಸ್ವಾಮಿ ಭಕ್ತರ ವಾಹನಗಳು ಸಂಜೆ 5.30ರ ನಂತರ ಕೇರಳದತ್ತ ಪ್ರಯಾಣ ಬೆಳೆಸಿದವು.

ಈ ನಡುವೆ ಕಳೆದ ಎರಡು ದಿನಗಳ ಹಿಂದೆಯೇ ಕೇರಳಕ್ಕೆ ಹೋಗಿದ್ದ ಅಯ್ಯಪ್ಪಸ್ವಾಮಿ ಭಕ್ತರು, ಪ್ರವಾಸಿಗರಿಗೆ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕೇರಳದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಬಂದ್ ವೇಳೆ ರಾಜ್ಯದ ಭಕ್ತರಿಗೆ ಸಮುದಾಯ ಭವನದಲ್ಲಿ ಆಶ್ರಯ ನೀಡಿ ಭದ್ರತೆ ಕಲ್ಪಿಸಲಾಗಿತ್ತು. ಕೇರಳಕ್ಕೆ ತೆರಳಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಿಗೆ ಅಲ್ಲಿನ ಬಸ್ ಡಿಪೋಗಳಲ್ಲಿ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿತ್ತು.

Translate »