ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಕೊಡಗು

ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ

September 29, 2018

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಸುರಿದ ಅತಿವೃಷ್ಠಿಯಿಂದಾಗಿ ಉಂಟಾದ ನೆರೆಹಾವಳಿ ಮತ್ತು ಭೂ ಕುಸಿತಕ್ಕೆ ಸಿಲುಕಿ ಸಂತ್ರಸ್ತರಾದ ಗ್ರಾಮಗಳು ಮತ್ತು ಅಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಕೊಡಗು ಪ್ರಾಕೃತಿ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವು.

ನಗರದ ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಪ್ರತಿಭಟನಾ ಜಾಥಾ ತೆರಳಿದ ಸಂತ್ರಸ್ತರು ಮತ್ತು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದರು. ಭೂಕುಸಿತ ಮತ್ತು ನೆರೆಯಿಂದ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ 7 ಗ್ರಾಮ ಪಂಚಾಯತ್ ವ್ಯಾಪ್ತಿಯ 38 ಗ್ರಾಮಗಳು ತತ್ತರಿಸಿವೆ. ಈ ಗ್ರಾಮಗಳ ಪುನರ್ ನಿರ್ಮಾಣ ಮತ್ತು ಅಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ವಿಶೇಷ ಪರಿಹಾರ ಪ್ಯಾಕೆಜ್ ನೀಡಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಆಗ್ರಹಿಸಲಾಯಿತು. ಭೂಕುಸಿತದಿಂದ ಮನೆ ಕಳೆದುಕೊಂಡವರು ಮತ್ತು ಭಾಗಶ ಹಾನಿ ಸಂಭವಿಸಿರುವ ಮನೆಗಳಿಗೂ ಸಂಪೂರ್ಣ ಪರಿಹಾರ, ಮನೆ ಹಾಗೂ ಜಾಗವನ್ನು ನೀಡಬೇಕೆಂದು ಪ್ರತಿಭಟನಾನಿರತ ಸಂತ್ರಸ್ಥರು ಒತ್ತಾಯಿಸಿದರು.

38 ಗ್ರಾಮಗಳ ಎಲ್ಲಾ ರೈತರು, ಕೃಷಿಕರು ಸಂಕ ಷ್ಟದಲ್ಲಿರುವ ಹಿನ್ನೆಲೆಯಲ್ಲಿ ಅವರ ಎಲ್ಲಾ ರೀತಿಯ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವುದಲ್ಲದೇ, ಕೃಷಿ ಕಾರ್ಯ ಕೈಗೊಳ್ಳಲು ಮುಂದಿನ 5 ವರ್ಷ ಗಳವರೆಗೆ ಬಡ್ಡಿ ರಹಿತ ಸಾಲ ನೀಡುವಂತೆ ಸಂತ್ರ ಸ್ಥರು ಒತ್ತಾಯಿಸಿದರು. ಕೃಷಿ, ತೋಟಗಾರಿಕೆ ಸೇರಿ ದಂತೆ ಸಂಬಾರ ಬೆಳೆಗಳಿಗಾದ ನಷ್ಟಕ್ಕೆ ಮಾರುಕಟ್ಟೆ ಧಾರಣೆ ಆಧರಿಸಿ ಪರಿಹಾರ ವಿತರಿಸುವಂತಾಗ ಬೇಕು ಒತ್ತಾಯಿಸಿದರು. ಭೂಕುಸಿತದಿಂದ ಭಾರಿ ಪ್ರಮಾಣದ ತ್ಯಾಜ್ಯ ವಸ್ತುಗಳು ಹಾರಂಗಿ ಹಿನ್ನೀರು ಪ್ರದೇಶ ಮತ್ತು ಜಲಾಶಯದ ಉಪನದಿಗಳಲ್ಲಿ ಸೇರಿಕೊಂಡಿದ್ದು, ತಕ್ಷಣವೇ ಅವುಗಳನ್ನು ತೆರವು ಮಾಡುವಂತೆ ಒತ್ತಾಯಿಸಲಾಯಿತು.

ಹಾನಿಗೀಡಾದ ಪ್ರದೇಶಗಳನ್ನು ಭೌಗೋಳಿಕ ಸರ್ವೇಗೆ ಒಳಪಡಿಸಿ ವಾಸಿಸಲು ಮತ್ತು ಕೃಷಿ ಮಾಡಲಾಗದ ಪ್ರದೇಶಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ನೆಲೆ ನಿಂತಿರುವ ಕುಟುಂಬಗಳಿಗೆ ಪುನರ್ ವಸತಿ ಮತ್ತು ಕೃಷಿ ಭೂಮಿ ನೀಡಬೇ ಕೆಂದು ಸಂತ್ರಸ್ಥರು ಮತ್ತು ಬೆಳೆಗಾರರು ಒತ್ತಾಯಿಸಿದರು.

ಈ ಸಂದರ್ಭ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ಥರ ಸಮಿತಿ ಮುಖಂಡ ಮನು ಮೇದಪ್ಪ ಮಾತನಾಡಿ, ಭೂಕುಸಿತ, ನೆರೆ ಹಾವಳಿಯಿಂದ ಸಂತ್ರಸ್ಥರಾದ ಕುಟುಂಬಗಳ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ಮತ್ತು ಪಿಂಚಣಿ ವ್ಯವಸ್ಥೆ ಮಾಡಬೇಕು. ಆ ಕುಟುಂಬಗಳಲ್ಲಿರುವ ವಿದ್ಯಾ ರ್ಥಿಗಳಿಗೆ ತಾವು ಬಯಸಿದ ಶಾಲಾ-ಕಾಲೇಜು ಗಳಲ್ಲಿ ಶಿಕ್ಷಣ ಪಡೆಯಲು ರಾಜ್ಯ ಮತ್ತು ಕೇಂದ್ರ ಸರಕಾರ ನೆರವು ಮತ್ತು ಸಹಕಾರ ನೀಡುವಂತೆ ಒತ್ತಾಯಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಜಿಲೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳು ಪ್ರಕೃತಿ ವಿಕೋಪಕ್ಕೆ ಬೆಳೆಗಾರರು ಕಾರಣ ಎಂದು ವರದಿ ಸಲ್ಲಿಸಿದ್ದು, ಇದನ್ನು ಖಂಡಿಸುವುದಾಗಿ ತಿಳಿಸಿದರು.

ಹಾರಂಗಿ ಹಿನ್ನೀರಿನಲ್ಲಿ ನಿಂತ ನೀರಿನ ಒತ್ತಡದಿಂದ ಭೂಕುಸಿತ ಸಂಭವಿಸಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದ್ದು, ಅದನ್ನು ಕೂಡ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೆಜ್ ಮತ್ತು ನೆರವು ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ರೂಪಿಸುವುದಾಗಿ ಅವರು ಎಚ್ಚರಿಸಿದರು.

ಆ ಬಳಿಕ ಬೆಳೆಗಾರರು ಮತ್ತು ಸಂತ್ರಸ್ಥರು, ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಮತ್ತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರುಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭ ಕೊಡಗು ಪ್ರಾಕೃತಿಕ ವಿಕೋಪ ಮತ್ತು ನೆರೆ ಸಂತ್ರಸ್ಥರ ಸಮಿ ತಿಯ ಕುಕ್ಕೇರ ಜಯಾ ಚಿಣ್ಣಪ್ಪ, ರತನ್ ತಮ್ಮಯ್ಯ, ಬಿ.ಎನ್. ರಮೇಶ್, ಎಸ್.ಕೆ. ಅಚ್ಚಯ್ಯ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್‍ನ ಕೆ.ಕೆ. ವಿಶ್ವನಾಥ್, ಎಂ.ಸಿ. ಕಾರ್ಯಪ್ಪ ಸೇರಿದಂತೆ 38 ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.

Translate »