ಮಳೆ ಆರ್ಭಟ ತಗ್ಗಿದೆ… ಮುಂದೇನು ಎಂಬ ಚಿಂತೆ ಕಾಡಿದೆ
ಕೊಡಗು

ಮಳೆ ಆರ್ಭಟ ತಗ್ಗಿದೆ… ಮುಂದೇನು ಎಂಬ ಚಿಂತೆ ಕಾಡಿದೆ

August 31, 2018

ಮಡಿಕೇರಿ: ಕೊಡಗಿನಲ್ಲಿ ಆರ್ಭಟವನ್ನೇ ಸೃಷ್ಟಿಸಿದ ಮಹಾಮಳೆಯ ರೌದ್ರ ನರ್ತನ ತಗ್ಗಿದೆ. ಕುಗ್ಗಿದ ಮನಸ್ಸುಗಳು ಹಿಗ್ಗುವ ಬದಲು ಮುಂದೇನು ಎನ್ನುವ ಚಿಂತೆಯಲ್ಲಿ ಮುಳುಗಿವೆ. ಕಣ್ಮರೆಯಾದ ಊರು ಹೇಗಿರಬಹುದು? ನಾವು ಸಾಕಿದ ಪ್ರಾಣಿಗಳು ಏನಾದವು? ಬದುಕು ಕಟ್ಟಿಕೊಟ್ಟ ಮನೆ ಉಳಿದಿದೆಯೇ? ಎನ್ನುವ ಕುತೂಹಲದ ನೋವು ನಿರಾಶ್ರಿತರನ್ನು ಕಾಡಲು ಆರಂಭಿಸಿದೆ. ಪರಿಹಾರ ಕೇಂದ್ರಗಳಲ್ಲಿ ಊಟ, ಬಟ್ಟೆ, ಹೊದಿಕೆ ಮತ್ತಿತರ ವಸ್ತುಗಳೇನೋ ಸಿಗುತ್ತಿವೆ. ಆದರೆ ಇದು ಎಷ್ಟು ದಿನ ಎಂಬ ಚಿಂತೆ ಎಲ್ಲರನ್ನೂ ಚುಚ್ಚುತ್ತಿದೆ. ಬಹುತೇಕ ಕಾಫಿ ತೋಟಗಳು ಮಣ್ಣಿನಡಿ ಸಿಲುಕಿ ಸರ್ವನಾಶವಾಗಿವೆ. ಇದರಿಂದಾಗಿ ನಿರಾಶ್ರಿತರ ಶಿಬಿರಗಳಲ್ಲಿ ನೆಲೆಸಿರುವ ಕಾರ್ಮಿಕ ವರ್ಗಕ್ಕೆ ಶಾಶ್ವತ ನೆಲೆಯ ಚಿಂತೆಯ ಜೊತೆಗೆ ಮುಂದೆ ದುಡಿದು ತಿನ್ನುವುದು ಹೇಗೆ ಎಂಬ ಚಿಂತೆಯೂ ಕಾಡುತ್ತಿದೆ.

ಸಾಕು ಪ್ರಾಣಿಗಳೂ ಅನಾಥ: ಇದೀಗ ಅನೇಕರಿಗೆ ತಾವು ಬಿಟ್ಟು ಬಂದಿರುವ ಸಾಕು ಪ್ರಾಣಿಗಳನ್ನು ಕಾಣುವ ತವಕವೂ ಹೆಚ್ಚುತ್ತಿದೆ. ಅನೇಕ ಸಾಕು ಪ್ರಾಣಿಗಳು ನೀರಿನಲ್ಲಿ, ಮಣ್ಣಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಆದರೆ ಜೀವಂತ ಇರುವ ಪ್ರಾಣಿಗಳು ನೀರು, ಆಹಾರವಿಲ್ಲದೆ ಸಾಯುತ್ತಿವೆಯಲ್ಲ ಎಂಬ ಕೊರಗು ಅನೇಕರದ್ದಾಗಿದೆ. ಇನ್ನು ಕೆಲವರು ಬೇಡಬೇಡವೆಂದರೂ ತಮ್ಮ ಗ್ರಾಮಗಳತ್ತ ಧಾವಿಸುವ ಪ್ರಯತ್ನದಲ್ಲಿದ್ದಾರೆ. ರಸ್ತೆಯೇ ಇಲ್ಲದ ಊರಿಗೆ ಹೊಸದೊಂದು ಕಾಲುದಾರಿ ಸೃಷ್ಟಿಸಿಕೊಂಡು ಕಣ್ಮರೆಯಾದ ಮನೆಗಳಿಗೆ, ತಮ್ಮ ಒಡನಾಡಿಗಳಾಗಿದ್ದ ಸಾಕು ಪ್ರಾಣಿಗಳ ಹುಡುಕಾಟ ನಡೆಸುವ ಸಾಹಸಕ್ಕೂ ಮುಂದಾಗುತ್ತಿದ್ದಾರೆ.

ಮಹಾಮಳೆಯಿಂದ ಉಂಟಾದ ಪ್ರಕೃತಿ ವಿಕೋಪದ ಪರಿಯನ್ನು ವೀಕ್ಷಿಸಲು ಪ್ರತಿನಿತ್ಯ ಸಚಿವರು, ಜನ ಪ್ರತಿನಿಧಿಗಳು ಮತ್ತಿತರ ಗಣ್ಯರ ಆಗಮನವಾಗುತ್ತಲೇ ಇದೆ. ಬಂದವರು ಶಿಬಿರಗಳಿಗೆ ಭೇಟಿ ನೀಡಿ ಸಾಂತ್ವನದ ಮಾತುಗಳನ್ನಾಡಿ, ಪತ್ರಿಕಾಗೋಷ್ಠಿಗಳನ್ನು ನಡೆಸಿ ಮರೆಯಾಗುತ್ತಿದ್ದಾರೆ. ಆದರೆ ಶಿಬಿರ ಗಳಲ್ಲಿ ನೆಲೆಸಿರುವ ಸಾವಿರಾರು ಮಂದಿ ನಿರಾಶ್ರಿತರ ತಳಮಳ ಮಾತ್ರ ಇನ್ನೂ ನಿಂತಿಲ್ಲ.

ಮನೆ, ಶಿಕ್ಷಣ ಬೇಕು: ನಿರಾಶ್ರಿತರ ಶಿಬಿರಗಳಿಗೆ ಬರುವ ಮಂತ್ರಿ ಮಹೋದಯರಿಗೆ ನಿರಾಶ್ರಿತರು ಹೇಳು ವುದೊಂದೇ ‘ನಮಗೇನೂ ಬೇಡ ಸ್ವಾಮಿ, ವಾಸಕ್ಕೆ ಮನೆ ಕೊಡಿ, ಮಕ್ಕಳಿಗೆ ಶಿಕ್ಷಣ ಕೊಡಿಸಿ, ಎಲ್ಲಾ ದಾಖಲೆಗಳು ಮಣ್ಣು ಪಾಲಾಗಿವೆ. ಅವುಗಳನ್ನು ಮತ್ತೆ ಮಾಡಿಸಿಕೊಡಿ, ಹೇಗೋ ನಮ್ಮ ಬದುಕು ನಾವು ಕಟ್ಟಿಕೊಳ್ಳುತ್ತೇವೆ’ ಎಂದು ಸ್ವಾಭಿಮಾನದಿಂದ ಕಣ್ಣೀರು ಹಾಕುತ್ತಿದ್ದಾರೆ ನಿರಾಶ್ರಿತರು.

Translate »