ನೆರೆ ಸಂತ್ರಸ್ತ ಮಹಿಳೆ ಹೃದಯಾಘಾತದಿಂದ ಸಾವು
ಕೊಡಗು

ನೆರೆ ಸಂತ್ರಸ್ತ ಮಹಿಳೆ ಹೃದಯಾಘಾತದಿಂದ ಸಾವು

August 28, 2018

ಗುಡ್ಡೆಹೊಸೂರು: ಮಡಿಕೇರಿ ತಾಲೂಕಿನ ಹಾಲೇರಿ ಕಾಡನಕೊಲ್ಲಿ ನಿವಾಸಿ ಮಣಿಯಪ್ಪನ ದಿ.ಪೂವಯ್ಯ ಅವರ ಪತ್ನಿ ಚಂದ್ರಾವತಿ(65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಡಿಕೇರಿ ಸುತ್ತಮುತ್ತ ನಡೆದ ಜಲಪ್ರಳಯದಲ್ಲಿ ತಮ್ಮ ಮನೆ ಮತ್ತು 8 ಎಕರೆ ಕಾಫಿ ತೋಟ ಕಳೆದುಕೊಂಡು ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ವಾಸಕ್ಕೆ ಇದ್ದ ಒಂದೇ ಮನೆ ಮತ್ತು ಜಾಗ ಹಾಗೂ ತನ್ನ ಪತಿಯನ್ನು ಕಳೆದುಕೊಂಡಿದ್ದ ಚಂದ್ರಾವತಿ ಅತೀವ ನೋವಿನಿಂದ ಇದೀಗ ಹೃದಯಾಘಾತವಾಗಿ ಇಂದು ಬಸವನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ. ತನ್ನ ತಾಯಿ, ತಂದೆ, ಮನೆ ಆಸ್ತಿ ಎಲ್ಲವನ್ನು ಕಳೆದುಕೊಂದ 25 ವರ್ಷದ ಮೀಥನ್ ಇದೀಗ ಅನಾಥನಾಗಿದ್ದಾನೆ. ಸರಕಾರದ ವತಿಯಿಂದ ಮೀಥನ್‍ಗೆ ಇದೀಗ ಎಲ್ಲಾ ರೀತಿಯ ಸಹಕಾರ ದೊರೆಯಬೇಕಾಗಿದೆ. ಆ.26ರ ಭಾನುವಾರ ಮೀಥನ್ ತಮ್ಮ ಜಾಗ, ಮನೆಯನ್ನು ನೋಡಿ ಅಲ್ಲಿನ ಪರಿಸ್ಥಿತಿಯನ್ನು ತಾಯಿಗೆ ವಿವರಿಸಿದ್ದಾನೆ. ಈ ವಿಷಯ ತಿಳಿದ ಚಂದ್ರಾವತಿಗೆ ಹೃದಯಾಘಾತವಾಗಿ ಸಾವನ್ನಪಿದ್ದಾರೆ. ತುಂಬಾ ನೋವಿನ ಸಂಗತಿಯೆಂದರೆ ಕೊನೆಗೆ ತಮ್ಮ ಸ್ವಂತ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಕೂಡ ಸಾಧ್ಯವಾಗಿಲ್ಲ.

ಚಂದ್ರಾವತಿಯವರ ಅಂತ್ಯಕ್ರಿಯೆಯನ್ನು ಕುಶಾಲನಗರದ ಗೌಡ ಸಮಾಜದ ರುದ್ರಭೂಮಿ ಯಲ್ಲಿ ಬಂಧುಗಳ ಸಹಕಾರದೊಂದಿಗೆ ನೆರವೇರಿಸಲಾಯಿತು. ಮಡಿಕೇರಿ ಸುತ್ತಾಮುತ್ತಲಿನ ಹಲವಾರು ಗ್ರಾಮಸ್ಥರು ಇದೀಗ ಗುಡ್ಡೆಹೊಸೂರು ಸುತ್ತಾಮುತ್ತಾ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಲ್ಲದೆ ದೂರದ ಮೈಸೂರು, ಬೆಂಗಳೂರಿನಲ್ಲಿಯೂ ತಮ್ಮ ಸಂಬಂಧಿಕರ ಮನೆಗಳಲ್ಲಿ ವಾಸವಿದ್ದು, ಅವರಿಗೂ ಸೂಕ್ತ ಪರಿಹಾರ ದೊರೆಯಬೇಕಾಗಿದೆ.

Translate »