ಕೆ.ಆರ್.ಪೇಟೆ ಗೆಲುವು ರಾಜ್ಯದಲ್ಲೇ ಅತ್ಯಂತ ತೃಪ್ತಿ, ಸಂತೋಷ ತಂದಿದೆ
ಮಂಡ್ಯ

ಕೆ.ಆರ್.ಪೇಟೆ ಗೆಲುವು ರಾಜ್ಯದಲ್ಲೇ ಅತ್ಯಂತ ತೃಪ್ತಿ, ಸಂತೋಷ ತಂದಿದೆ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ನಮ್ಮ ತಂದೆ ಯಡಿಯೂರಪ್ಪ ಅವರಿಗೆ ಜನ್ಮ ನೀಡಿದ ಊರು ಕೆ.ಆರ್.ಪೇಟೆ. ಕ್ಷೇತ್ರದ ಜನತೆ, ನಾನು ಬಿಎಸ್‍ವೈ ಪುತ್ರ ಎಂದು ಪ್ರಚಾರಕ್ಕೆ ಹೋದಾಗ ತಮ್ಮೂರಿನ ಮಗನಂತೆ ನನ್ನನ್ನು ಸ್ವೀಕಾರ ಮಾಡಿದರು. ಕೆ.ಆರ್.ಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ವಿಶ್ವಾಸ ಉಳಿಸಿದ್ದಾರೆ. ರಾಜ್ಯದ 224 ಕ್ಷೇತ್ರಗಳ ಗೆಲುವಿಗಿಂತ ಅತ್ಯಂತ ಹೆಚ್ಚು ತೃಪ್ತಿ ಹಾಗೂ ಸಂತೋಷ ವನ್ನು ಕೆ.ಆರ್.ಪೇಟೆ ತಂದಿದೆ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. ಅವರಿಗೆ ಮತ ದಾರರು ತಕ್ಕ ಉತ್ತರ ನೀಡಿದ್ದಾರೆ. ಅಭಿವೃದ್ಧಿಯನ್ನು ಬೆಂಬಲಿಸುತ್ತೇವೆ ಎಂಬ ಸಂದೇಶವನ್ನು ಮತದಾರರು ಕೊಟ್ಟಿದ್ದಾರೆ. ಸಂಘಟಿತ ಕಾರ್ಯ, ಬಿಎಸ್‍ವೈ ಅವರ ಅಭಿವೃದ್ಧಿ ಕನಸ್ಸನ್ನು ಜನರಿಗೆ ತಿಳಿಸಿದ ಫಲವಾಗಿ ಬಿಜೆಪಿ ಗೆಲುವು ಸಾಧಿಸಿತು. ರಾಜ ಕೀಯ ಪಕ್ಷಗಳು ಮತದಾರರನ್ನು ಮೂರ್ಖರು ಎಂದು ಭಾವಿಸಬಾರದು. ಎಲ್ಲದಕ್ಕೂ ಮಿತಿ ಇರುತ್ತದೆ. ಚುನಾವಣೆ ಸಮಯದಲ್ಲಿ ನೀಡಿದ ಪ್ರಣಾಳಿಕೆಯಂತೆ ಭರವಸೆಯನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರುತ್ತೇವೆ. ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಸಂಘಟನೆ ಮಾಡುತ್ತೇವೆ ಎಂದರು.

Translate »