ಮೈಸೂರು,ಫೆ.22(ಪಿಎಂ)- ದೇಶದ ಮಾಜಿ ರಕ್ಷಣಾ ಸಚಿವ ಕೃಷ್ಣ ಮೆನನ್, ಜವಹರಲಾಲ್ ನೆಹರು ಅವರ ಆತ್ಮೀಯರು ಎಂಬ ಕಾರಣಕ್ಕಷ್ಟೇ ಅಲ್ಲದೇ, ಅವರ ರಾಜ ಕೀಯ ಹಾಗೂ ಸಾಹಿತ್ಯದ ಕೊಡುಗೆಯಿಂದಾಗಿಯೂ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವ್ಯಾಖ್ಯಾನಿಸಿದರು.
ಮೈಸೂರಿನ ಸರಸ್ವತಿಪುರಂನ ರೋಟರಿ ಪಶ್ಚಿಮ ಸಂಸ್ಥೆಯ ಸಭಾಂಗಣದಲ್ಲಿ ಮೈಸೂರು ಲಿಟರರಿ ಅಸೋಸಿ ಯೇಷನ್‍ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜೈರಾಮ್ ರಮೇಶ್ ಅವರ `ಎ ಚೆಕರ್ಡ್ ಬ್ರಿಲಿಯನ್ಸ್: ದಿ ಮೆನಿ ಲೈವ್ಸ್ ಆಫ್ ವಿ.ಕೆ.ಕೃಷ್ಣ ಮೆನನ್’ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿವೃತ್ತ ರಾಯಭಾರಿ ರವಿಜೋಷಿ ಅವರೊಂದಿಗೆ ಸಂವಾದ ನಡೆಸಿದರು.
ಕೃಷ್ಣ ಮೆನನ್ ಅವರನ್ನು ಹೊಗಳಲೋ ಅಥವಾ ತೆಗಳಲೋ ಈ ಪುಸ್ತಕ ಬರೆದಿಲ್ಲ. ಇಲ್ಲಿ ವಾಸ್ತವದ ಮೇಲೆ ಬೆಳಕು ಚೆಲ್ಲಲಾಗಿದೆ ಅಷ್ಟೆ. ಕೃಷ್ಣ ಮೆನನ್ 1930-40ರ ದಶಕದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಇಂಗ್ಲೆಂಡ್ ನಲ್ಲಿ ಪಟ್ಟು ಹಿಡಿದಿದ್ದರು. 1962ರಲ್ಲಿ ಭಾರತ-ಚೀನಾ ಯುದ್ಧದಲ್ಲಿ ದೇಶಕ್ಕೆ ಉಂಟಾದ ಹಿನ್ನಡೆಯಿಂದ ರಕ್ಷಣಾ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಅಂದರೆ 1950ರ ದಶಕದಲ್ಲಿ ವಿಶ್ವಸಂಸ್ಥೆ ಯಲ್ಲಿ ಭಾರತದ ಪರ ಕಾರ್ಯನಿರ್ವಹಿಸಿ ಜಾಗತಿಕ ವಾಗಿ ಗುರುತಿಸಿಕೊಂಡಿದ್ದರು ಎಂದು ನೆನಪಿಸಿದರು.
ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತ ದಲ್ಲಿ ಕೃಷ್ಣ ಮೆನನ್ ಪಾತ್ರ ಬಹು ಮುಖ್ಯವಾದುದು. ಭಾರತದ ಸಂವಿಧಾನದ ಪೀಠಿಕೆಯ ಮೊದಲ ಕರಡು ಸಿದ್ಧಪಡಿಸಿದವರು ಕೃಷ್ಣ ಮೆನನ್. 20ನೇ ಶತಮಾನದ ಭಾರತದ ರಾಜಕೀಯ ಸ್ಥಿತಿಗತಿ ಅರ್ಥೈಸಿಕೊಳ್ಳಲು ನೆಹರು ಹಾಗೂ ಅವರ ಕಾರ್ಯ ವಿಧಾನಗಳನ್ನು ಅರ್ಥ ಮಾಡಿ ಕೊಳ್ಳಬೇಕಾಗುತ್ತದೆ. ಅದೇ ರೀತಿ ನೆಹರು ಅರ್ಥ ಮಾಡಿ ಕೊಳ್ಳಲು ಅವರ ಆತ್ಮೀಯರಾಗಿದ್ದ ಕೃಷ್ಣ ಮೆನನ್ ಅವ ರನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬ್ರಿಟಿಷರು 3 ವಿಭಾಗಗಳಲ್ಲಿ ಅಧಿಕಾರ ಹಂಚಿಕೆ ಮಾಡಲು ಬಯಸಿದ್ದರು. ಸ್ವತಂತ್ರ ಭಾರತ, ಸ್ವತಂತ್ರ ಪಾಕಿಸ್ತಾನ ಹಾಗೂ ಸ್ವತಂತ್ರ ಸಂಸ್ಥಾನಗಳು ಎಂದು ವಿಂಗಡಿಸಿ ಅಧಿಕಾರ ನೀಡಲು ಆಲೋಚಿಸಿದ್ದರು. ಆದರೆ, ದೇಶಾದ್ಯಂತ ಇದ್ದ 550ಕ್ಕೂ ಹೆಚ್ಚಿನ ಸಂಸ್ಥಾನ ಗಳಿಗೂ ಪ್ರತ್ಯೇಕ ಅಧಿಕಾರ ನೀಡುವುದಕ್ಕೆ ವಿರೋಧ ವ್ಯಕ್ತವಾಯಿತು. ಅಂತಿಮವಾಗಿ ಭಾರತ ಮತ್ತು ಪಾಕಿ ಸ್ತಾನ ವಿಭಜನೆಯೊಂದಿಗೆ ಈ ಗೊಂದಲಕ್ಕೆ ಅಂತ್ಯ ಹಾಡಲಾಯಿತು. ಈ ಕಾರ್ಯದಲ್ಲಿ ಕೃಷ್ಣ ಮೆನನ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ (ಕೆಬಿಜಿ), ಮೈಸೂರು ಲಿಟರರಿ ಅಸೋಸಿಯೇಷನ್ ಅಧ್ಯಕ್ಷ ಪ್ರೊ. ಕೆ.ಸಿ.ಬೆಳ್ಳಿಯಪ್ಪ ಸೇರಿದಂತೆ ಅನೇಕ ಗಣ್ಯರು, ಚಿಂತಕರು ಹಾಜರಿದ್ದರು.