ಕೆಎಸ್‍ಆರ್‍ಟಿಸಿ ಅಕೌಂಟ್ಸ್ ಸೂಪರ್‍ವೈಸರ್ ಎಸಿಬಿ ಬಲೆಗೆ
ಮೈಸೂರು

ಕೆಎಸ್‍ಆರ್‍ಟಿಸಿ ಅಕೌಂಟ್ಸ್ ಸೂಪರ್‍ವೈಸರ್ ಎಸಿಬಿ ಬಲೆಗೆ

July 11, 2019

ಮೈಸೂರು,ಜು.10(ಆರ್‍ಕೆ)-ಬಾಕಿ ಹಣದ ಚೆಕ್ ನೀಡಲು ಬಸ್ ಚಾಲಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಮೈಸೂರಿನ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗದ ಡಿಪೋ ಅಕೌಂಟ್ಸ್ ಸೂಪರ್‍ವೈಸರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ಮೈಸೂರಿನ ಬನ್ನಿಮಂಟಪದಲ್ಲಿರುವ ಕೆಎಸ್‍ಆರ್‍ಟಿಸಿ ಗ್ರಾಮಾಂತರ ವಿಭಾಗದ ಡಿಪೋ ಅಕೌಂಟ್ಸ್ ಸೂಪರ್‍ವೈಸರ್ ಮಂಜುನಾಥ್ ಎಸಿಬಿ ಬಲೆಗೆ ಬಿದ್ದವರು. ಕೆಎಸ್‍ಆರ್‍ಟಿಸಿ ಡ್ರೈವರ್ ಬಸವರಾಜು ಅವರಿಂದ 10,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಇಂದು ಸಂಜೆ 6 ಗಂಟೆ ವೇಳೆಗೆ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ರಶ್ಮಿ ನೇತೃತ್ವದ ಅಧಿಕಾರಿಗಳು ಮಂಜುನಾಥ್ ಅವರನ್ನು ಹಣದ ಸಮೇತ ಬಂಧಿಸಿದರು.ಬಸವರಾಜು ಅವರಿಗೆ ಬರಬೇಕಾಗಿದ್ದ 1,03,617 ರೂ. ಬಾಕಿ ಹಣದ ಚೆಕ್ ನೀಡಲು ಮಂಜುನಾಥ್ ಅವರು 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಬಸವ ರಾಜು ಅವರು ಮೈಸೂರು ಎಸಿಬಿ ಎಸ್ಪಿ ಕಚೇರಿಗೆ ದೂರು ನೀಡಿದ್ದರು. ದೂರಿನನ್ವಯ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್ 7ರಡಿ ಪ್ರಕರಣ (ಸಿಆರ್ ನಂ. 06/2019) ರೀತ್ಯಾ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಂದು ಸಂಜೆ ಬನ್ನಿಮಂಟಪದಲ್ಲಿರುವ ಕೆಎಸ್‍ಆರ್‍ಟಿಸಿ ಡಿಪೋದ ವಿಭಾಗೀಯ ನಿಯಂತ್ರಕರ ಕಚೇರಿಯಲ್ಲಿ 10,000 ರೂ. ಲಂಚ ಸ್ವೀಕರಿಸುತ್ತಿ ದ್ದಾಗ ಹಣದ ಸಮೇತ ಮಂಜುನಾಥ್‍ರನ್ನು ಬಂಧಿಸಿದರು. ಎಸಿಬಿ ಇನ್ಸ್‍ಪೆಕ್ಟರ್ ಶೇಖರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿ ಮಂಜುನಾಥ್ ಹಾಗೂ ಹಣ ವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾತ್ರಿ ಅವರನ್ನು ನ್ಯಾಯಾ ಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Translate »