ಮೇದರ ಸಮುದಾಯದ ಕುಲದೇವತೆ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ
ಮೈಸೂರು

ಮೇದರ ಸಮುದಾಯದ ಕುಲದೇವತೆ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ

February 13, 2019

ಮೈಸೂರು: ಮೈಸೂರಿನ ಧನ್ವಂತರಿ ರಸ್ತೆಯಲ್ಲಿನ ಮೇದರ ಸಮುದಾಯದ ಕುಲದೇವತೆ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರೆ ಮಹೋತ್ಸವ ವೈಭವಯುತವಾಗಿ ಮಂಗಳವಾರ ಸಂಜೆ ನೆರವೇರಿತು.

ಮೈಸೂರು ನಗರ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘವು ಅಖಿಲ ಕರ್ನಾಟಕ ಶ್ರೀ ಗುರು ಮೇದರ ಕೇತೇಶ್ವರ ಟ್ರಸ್ಟ್, ಅಖಿಲ ಕರ್ನಾಟಕ ಮೇದ ಗಿರಿಜನಾಂಗದ ಕಲ್ಯಾಣ ಸೇವಾ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಾತ್ರಾ ಮಹೋತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುತ್ತೂರು ಮಠದ ಕಿರಿಯ ಶ್ರೀಗಳಾದ ಜಯರಾಜೇಂದ್ರ ಸ್ವಾಮೀಜಿಯವರು ಚಾಲನೆ ನೀಡಿದರು.

ಫೆ.10ರಿಂದ ಫೆ.15ರವರೆಗೆ ಜರುಗುತ್ತಿರುವ ದೇವಿಯ ಜಾತ್ರೆಗೆ ರಾಜ್ಯ, ಅಂತರ ರಾಜ್ಯಗಳಿಂದ ಆಗಮಿಸಿರುವ ಮೇದರ ಕುಲಬಾಂಧವರು ಅಮ್ಮನವರ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರೆ, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಮೇದರು ತಮ್ಮ ಕುಲದೇವತೆ ಆರಾಧನೆಯಲ್ಲಿ ಸಂಭ್ರಮಿಸಿದರು.

ಚೆನ್ನಗಿರಿ ಬಳಿಯ ಚೋಳದಾಳಿನಲ್ಲಿ ನೆಲೆಸಿರುವ ಕುಕ್ವಾಡಮ್ಮನ ದೇವಾಲಯ ಹಾಗೂ ಉತ್ಸವ ಮೂರ್ತಿಗಳು ಮೇದ ರರು ನೆಲೆಸಿರುವ ರಾಜ್ಯದ ಬಹುತೇಕ ಕಡೆ ಇದ್ದು, ತುಮಕೂರಿನ ಕೊರಟಗೆರೆ, ಮಧುಗಿರಿ, ಕ್ಯಾತಸಂದ್ರ ಹಾಗೂ ಭದ್ರಾವತಿ ಯಿಂದ ಕರೆತರಲಾಗಿದ್ದ ಉತ್ಸವ ಮೂರ್ತಿ ಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು.

ಧನ್ವಂತರಿ ರಸ್ತೆ, ಶಿವಶರಣ ಮೇದರ ಕೇತೇಶ್ವರ ಮಹಾದ್ವಾರದಿಂದ ಹೊರಟ ದೇವಿಯ ಮೆರವಣಿಗೆ ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ ಮೂಲಕ ವಸ್ತುಪ್ರದರ್ಶನ ಮೈದಾನ ಸೇರಿತು. ಮೈಸೂರು ಸೇರಿದಂತೆ ಹುಬ್ಬಳ್ಳಿ, ಧಾರವಾಡ, ಅಥಣಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ತುಮಕೂರು, ಪುನಾ, ಬಾಂಬೆ, ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ಕಡೆ ಗಳಿಂದ ಆಗಮಿಸಿದ್ದ ಮೇದರರು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡರು.

ಚಿತ್ರದುರ್ಗ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದರ ಕೇತಯ್ಯ ಸ್ವಾಮೀಜಿಯವರು ಕುಳಿತ ಸಾರೋಟಿನ ಮುಂದೆ ಆರತಿ, ಕಳಸ ಹೊತ್ತ ಮಹಿಳೆಯರು ಸಾಗಿದರು. ಕೊರಟಗೆರೆಯ ನಾರಾಯಣ್, ಭದ್ರಾವತಿಯ ವಿಶ್ವನಾಥ್, ಮಹದೇವ್, ದಿನೇಶ್, ಮಧುಗಿರಿಯ ಸ್ವಾಮಿ, ಲೋಕೇಶ್, ಬಾರಂದೂರಿನ ಸೋಮಣ್ಣ, ಕ್ಯಾತಸಂದ್ರದ ರಾಮಣ್ಣ, ಪುಜಾರಿಗಳಾದ ಆರ್.ರಾಮರಾವ್, ರವಿಕುಮಾರ್, ಮೂರ್ತಿ ಮೊದಲಾದವರು ಉತ್ಸವ ಮೂರ್ತಿಗಳನ್ನು ಮುನ್ನೆಡೆಸಿದರು.

ಜಾತ್ರೆಯ ಉದ್ಘಾಟನೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ನಗರ ಮೇದ ಜನಾಂಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಮಂಜುನಾಥ್ ಕುಮಾರ್, ನಗರ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು, ಸಮಾಜ ಸೇವಕ ಕೆ.ಹರೀಶ್‍ಗೌಡ, ಅಖಿಲ ಕರ್ನಾಟಕ ಮೇದಗಿರಿ ಜನಾಂಗದ ಕಲ್ಯಾಣ ಸಂಘ ಅಧ್ಯಕ್ಷ ಯ.ಕಾ.ಹಳೇಪೇಟೆ, ಗೌರವಾಧ್ಯಕ್ಷ ಶೀಗೇ ಹಳ್ಳಿ, ವೇದ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಆನಂದ್, ಸಮುದಾಯದ ಮುಖಂಡರಾದ ಶ್ರೀನಿವಾಸ್, ಯೋಗೇಶ್, ನರೇಂದ್ರ ಮತ್ತಿತರರು ಭಾಗವಹಿಸಿದ್ದರು.

Translate »