ಕುಂಭಮೇಳ ಹಿನ್ನೆಲೆ ತ್ರಿವೇಣಿ ಸಂಗಮ ಪರಿಶೀಲಿಸಿದ ಜಿಲ್ಲಾಧಿಕಾರಿ
ಮೈಸೂರು

ಕುಂಭಮೇಳ ಹಿನ್ನೆಲೆ ತ್ರಿವೇಣಿ ಸಂಗಮ ಪರಿಶೀಲಿಸಿದ ಜಿಲ್ಲಾಧಿಕಾರಿ

January 23, 2019

ಸಿಎಂ ಅನುಮೋದನೆ ಪಡೆದು ಪೂರ್ವ ಸಿದ್ಧತಾ ಕಾರ್ಯ ಆರಂಭ
ತಿ.ನರಸೀಪುರ: ದಕ್ಷಿಣ ಪ್ರಯಾಗ ತಿರುಮಕೂಡಲು ನರಸೀಪುರ ತ್ರಿವೇಣಿ ಸಂಗಮದಲ್ಲಿ ಮುಂದಿನ ಫೆಬ್ರವರಿಯಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಕುಂಭಮೇಳ ನಡೆಯುವುದರಿಂದ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದುಕೊಂಡು ನಂತರ ಪೂರ್ವ ಸಿದ್ಧತಾ ಕಾರ್ಯವನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು

ಕುಂಭಮೇಳದ ಹಿನ್ನೆಲೆಯಲ್ಲಿ ಮಂಗಳವಾರ ತ್ರಿವೇಣಿ ಸಂಗಮಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಂಭಮೇಳ ಉತ್ಸವಕ್ಕೆ ಅಗತ್ಯವಿರುವ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಲು ಭೇಟಿ ನೀಡಿದ್ದೇವೆ. ಧಾರ್ಮಿಕ ಸಮಾರಂಭ ನಡೆಯುವ ವೇದಿಕೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ಫೆ.17, 18 ಹಾಗೂ 19ರ ಮೂರು ದಿನಗಳ ಕಾಲ ಕುಂಭಮೇಳ ನಡೆಯುವುದರಿಂದ ನದಿ ದಾಟಲು ತಾತ್ಕಾಲಿಕ ಸೇತುವೆ ನಿರ್ಮಾಣ, ಕುಡಿಯುವ ನೀರು, ಕುಟೀರಗಳ ನಿರ್ಮಾಣ, ಸ್ನಾನಕ್ಕೆ ನದಿಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಸೇರಿದಂತೆ ಬರುವ ಭಕ್ತಾದಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಂಡಿರುವ ಕಾಮಗಾರಿಗಳ ಅಂದಾಜು ಪಟ್ಟಿ, ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ಪಡೆದು ನಾಳಿನ ಸಿಎಂ ನೇತೃತ್ವದಲ್ಲಿನ ನಡೆಯುವ ಸಭೆಯಲ್ಲಿ ಕುಂಭಮೇಳ ಟ್ರಸ್ಟ್‍ನ ಜನಪ್ರತಿನಿಧಿಗಳು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ರೂಪುರೇಷೆಯನ್ನು ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕುಂಭಮೇಳ ಧಾರ್ಮಿಕ ಉತ್ಸವಕ್ಕೆ ಅಲ್ಪ ಸಮಯವಿರುವುದರಿಂದ ಆಗಬೇಕಿರುವ ಪೂರ್ವ ಸಿದ್ಧತೆಯ ಕೆಲಸಗಳಿಗೆ ಅಗತ್ಯ ಕ್ರಿಯಾ ಯೋಜನೆ ತಯಾರಾಗಿದೆ. ಸಭೆಯ ನಂತರ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳಿಂದ ಭಕ್ತರಿಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟ ಪಡಿಸಿದ ಜಿಲ್ಲಾಧಿಕಾರಿ, ಕಾಮಗಾರಿಯ ಉಪಕರಣಗಳನ್ನು ಒಂದೆಡೆ ಸುರಕ್ಷಿತವಾಗಿಡಿಸಲು ಎಚ್ಚರ ವಹಿಸುವುದರೊಂದಿಗೆ ಸಂಗಮದ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ತ್ರಿವೇಣಿ ಸಂಗಮದ ಮಧ್ಯದಲ್ಲಿ ಕುಟೀರಗಳ ನಿರ್ಮಾಣ ಸ್ಥಳ, ಯಾಗಾ ಮಂಟಪ, ಸಾಂಸ್ಕøತಿಕ ಮತ್ತು ಧಾರ್ಮಿಕ ವೇದಿಕೆ ಹಾಗೂ ಹೋಮ ಸ್ಥಳಗಳು ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿ ನಿಯೋಜಿತ ಇಲಾಖೆಗಳ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿಗಳು ಸಮಾಲೋಚಿಸಿ ಮಾಹಿತಿ ಪಡೆದರು. ಪಟ್ಟಣದ ಕಪಿಲಾ ದಂಡೆಯಿಂದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ನದಿ ದಾಟಲು ಭಕ್ತಾದಿಗಳಿಗೆ ರಬ್ಬರ್ ಬೋಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಚರ್ಚೆ ನಡೆಸಿದರು.

ಕುಂಭಮೇಳ ಉತ್ಸವ ನಡೆಯುವ ವೇಳೆ ಸಂಚಾರ ದಟ್ಟನೆ ತಡೆಗಟ್ಟಲು ವಾಹನಗಳಿಗೆ ಕೊಳ್ಳೆಗಾಲ, ನಂಜನಗೂಡು, ಮೈಸೂರು ಹಾಗೂ ಬನ್ನೂರು ರಸ್ತೆಗಳಲ್ಲಿ ತಾತ್ಕಾಲಿಕ ನಿಲ್ದಾಣ ವ್ಯವಸ್ಥೆ ಕಲ್ಪಿಸಿ, ಗಣ್ಯರು ಹಾಗೂ ಸ್ವಾಮೀಜಿಗಳ ವಾಹನಗಳಿಗೆ ಮಾತ್ರ ಪ್ರವೇಶ ನೀಡುವ ಬಗ್ಗೆಯೂ ಪೊಲೀಸ್ ವೃತ್ತ ನಿರೀಕ್ಷಕ ಎಂ.ಆರ್.ಲವ ಇದೇ ವೇಳೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸ್ವಾಮಿನಾಥ್‍ಗೌಡ ಮತ್ತು ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಪೂರ್ವಸಿದ್ಧತಾ ಕಾಮಗಾರಿಗಳಿಗೆ ಕಾಲಮಿತಿ ತೀರಾ ಕಡಿಮೆ ಇರುವುದರಿಂದ ಆದಷ್ಟು ಬೇಗ ಕಾಮಗಾರಿಗಳನ್ನು ಪ್ರಾರಂಭಿಸಿ ಉತ್ಸವ ಯಶಸ್ಸಿಗೆ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ತಹಶೀಲ್ದಾರ್ ನಾಗಪ್ರಶಾಂತ್, ಇಓ ಡಾ.ಬಿ.ಎಸ್.ನಂಜೇಶ್, ವಾರ್ತಾ ಇಲಾಖೆ ನಿರ್ದೇಶಕ ರಾಜು, ಮುಖ್ಯಾಧಿಕಾರಿ ಅಶೋಕ್, ಲೋಕೋಪಯೋಗಿ ಇಇ ಆರ್.ವಿನಯ್‍ಕುಮಾರ್, ಪುರಸಭಾ ಸದಸ್ಯರಾದ ನಂಜುಂಡಸ್ವಾಮಿ, ತುಂಬಲ ಸಿ.ಪ್ರಕಾಶ್, ಹೆಳವರಹುಂಡಿ ಎನ್.ಸೋಮು, ಬಾದಾಮಿ ಮಂಜು, ಆರ್.ನಾಗರಾಜು, ಸಿದ್ದು, ಎಲ್.ಮಂಜುನಾಥ್, ಅಹ್ಮದ್ ಸಯೀದ್, ಮಾಜಿ ಸದಸ್ಯ ರಾಘವೇಂದ್ರ, ಆಲಗೂಡು ನಾಗರಾಜು, ಮುಖಂಡರಾದ ದಿವಾಕರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಇಂದು ಸಿಎಂ ನೇತೃತ್ವದಲ್ಲಿ ಸಭೆ
ತಿ.ನರಸೀಪುರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 11ನೇ ಕುಂಭಮೇಳದ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರದ ವಿಜಯನಗರದಲ್ಲಿರುವ ಶ್ರೀ ಆದಿ ಚುಂಚನಗಿರಿ ಮಠದಲ್ಲಿ ಜ.23ರ ರಂದು ನಡೆಯಲಿದೆ. ಸಭೆಯಲ್ಲಿ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಳಿಸಲಾಗುವುದು.
-ಅಭಿರಾಮ್ ಜಿ.ಶಂಕರ್, ಜಿಲ್ಲಾಧಿಕಾರಿ

Translate »