ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ತಾಲೂಕು ಕೇಂದ್ರದಲ್ಲಿರಬೇಕಾದ ಎಲ್ಲಾ ಪ್ರಮುಖ ಕಚೇರಿಗಳನ್ನು ಹೊಂದಿರುವ ಹಾಗೂ ಆರ್ಥಿಕ ಹೊರೆಯಿಲ್ಲದೆ ರಚನೆ ಮಾಡಬಹುದಾದ ಕುಶಾಲನಗರವನ್ನು ನೂತನ ತಾಲೂಕುಗಳ ಪಟ್ಟಿಗೆ ಕಾವೇರಿ ತಾಲೂಕು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿಯು ಸೋಮವಾರ ಕರೆ ನೀಡಿದ್ದ ಕುಶಾಲನಗರ ಪಟ್ಟಣದ ಬಂದ್ ಪೂರ್ಣ ಯಶಸ್ವಿಯಾಯಿತು.
ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು. ಖಾಸಗಿ ಬಸುಗಳು, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿಗಳ ಸಂಚಾರ ವಿರಳ ವಾಗಿತ್ತು. ಆಟೋರೀಕ್ಷಾಗಳ ಸಂಚಾರ ಬಹು ತೇಕ ಸ್ಥಗಿತಗೊಂಡಿತು. ಸಿನಿಮಾ ಮಂದಿರ, ಹೋಟೆಲ್‍ಗಳು ಬಂದ್ ಆಗಿದ್ದವು. ಇದರಿಂದ ದೂರಿದ ಊರುಗಳಿಂದ ಆಗಮಿಸಿದ್ದ ಪ್ರವಾಸಿ ಗರು ಊಟ ತಿಂಡಿಗಾಗಿ ಪರದಾಡ ಬೇಕಾಯಿತು. ಔಷಧಿ ಅಂಗಡಿ, ಹಾಲಿನ ಅಂಗಡಿ ಗಳಿಗೆ ಬಂದ್ ನಿಂದ ವಿನಾಯತಿ ನೀಡ ಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಜನ ಸಂಚಾರ ಕೂಡ ವಿರಳವಾಗಿತ್ತು. ಸಾರಿಗೆ ಬಸ್ಸುಗಳ ಸಂಚಾರ ಎಂದಿನಂತೆ ಇದ್ದರೂ ಕೂಡ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿ ಮುಖ ಇತ್ತು. ಬಂದ್ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಕೆಲವು ಖಾಸಗಿ ಶಾಲಾ ಕಾಲೇಜುಗಳು ರಜೆ ನೀಡಿದವು. ಬಹು ತೇಕ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳ ಹಾಜರಾತಿ ಕ್ಷೀಣಿಸಿತ್ತು. ಬ್ಯಾಂಕ್ ಗಳು ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸಿದವು. ಪಟ್ಟಣದಲ್ಲಿ ಹೋಟೆಲ್ ಗಳು ಸಂಪೂರ್ಣ ಮುಚ್ಚಿದ್ದರಿಂದ ಪ್ರಯಾಣಿ ಕರು ಹಾಗೂ ಪ್ರವಾಸಿಗರು ಊಟ ತಿಂಡಿ ಗಾಗಿ ಪರದಾಡುವಂತಾಗಿತ್ತು.
ಪ್ರವಾಸಿ ಕೇಂದ್ರಗಳಾದ ಕಾವೇರಿ ನಿಸರ್ಗ ಧಾಮ, ದುಬಾರೆ, ಹಾರಂಗಿ ಮತ್ತಿತರ ಕಡೆಗಳಲ್ಲಿ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕ್ಷೀಣಿಸಿತ್ತು. ನಿಸರ್ಗಧಾಮದಲ್ಲಿನ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದರು.
ಕಾವೇರಿ ತಾಲೂಕು ಹೋರಾಟ ಕೇಂದ್ರೀಯ ಸಮಿತಿ ಸಂಚಾಲಕ ವಿ,ಪಿ. ಶಶಿಧರ್ ನೇತೃತ್ವದಲ್ಲಿ ಸಮಿತಿ ಪದಾಧಿಕಾರಿ ಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಿಗಿ ಭದ್ರತೆ: ಬಂದ್ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕುಶಾಲನಗರ ಪಟ್ಟಣದಲ್ಲಿ ಡಿವೈಎಸ್ಪಿ ಮುರುಳೀಧರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಕ್ಯಾತೇಗೌಡ, ಜಗದೀಶ್, ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಎಸ್ಪಿ ಭೇಟಿ: ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಕುಶಾಲನಗರಕ್ಕೆ ಭೇಟಿ ನೀಡಿ ದ್ದರು. ಕಾವೇರಿ ತಾಲೂಕಿಗೆ ಒತ್ತಾಯಿಸಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆ ಸುತ್ತಿದ್ದ ವೇಳೆ ಪ್ರತಿಭಟನಕಾರರೊಂದಿಗೆ ಮಾತು ಕತೆ ನಡೆಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸದಂತೆ ಸೂಚನೆ ನೀಡಿದರು.
ಮಾತಿನ ಚಕಮಕಿ: ಕೊಪ್ಪ ಗೇಟ್ ಬಳಿ ಪ್ರತಿಭಟನಾಕಾರರು ಆಟೋರೀಕ್ಷಾಗಳನ್ನು ಬಲವಂತವಾಗಿ ನಿಲ್ಲಿಸಲು ಒತ್ತಡ ಹಾಕು ತ್ತಿದ್ದ ಸಂದರ್ಭ ಡಿವೈಎಸ್ಪಿ ಮುರುಳೀಧರ್ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ತಾಲೂಕು ಹೋರಾಟಗಾರರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಕಲಾಪ ಬಹಿಷ್ಕರ: ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು ನೇತೃತ್ವದಲ್ಲಿ ವಕೀಲರು ಕಾವೇರಿ ತಾಲ್ಲೂಕು ಹೋರಾಟವನ್ನು ಬೆಂಬಲಿಸಿ ತಮ್ಮ ನ್ಯಾಯಾ ಲಯದ ಕಲಾಪವನ್ನು ಬಹಿಷ್ಕರಿಸಿದರು.
ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಸಂಚಾಲಕ ವಿ.ಪಿ.ಶಶಿಧರ್, ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂ ರಾವ್ ಅವರ ಕನಸಿನ ಕೂಸು ಈ ಕಾವೇರಿ ತಾಲ್ಲೂಕು. ಗುಂಡೂರಾಯರೇ ಹಾಕಿಕೊಟ್ಟ ಅಡಿಪಾಯ ಇದಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಹಾಗೂ ಈ ಊರಿ ನೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಈ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ.ಜೀವಿಜಯ ರಾದಿಯಾಗಿ ಎಲ್ಲ ಮುಖಂಡರು ಕಾವೇರಿ ತಾಲೂಕು ಹೋರಾಟದ ಪರವಾಗಿ ಧ್ವನಿಯಾಗ ಬೇಕು ಎಂದು ಮನವಿ ಮಾಡಿದರು.
ಹೋರಾಟ ಸಮತಿ ಪ್ರಧಾನ ಕಾರ್ಯ ದರ್ಶಿ ಆರ್.ಕೆ.ನಾಗೇಂದ್ರ ಬಾಬು ಮಾತ ನಾಡಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೈಬಿಟ್ಟು ಹೋದ ಕಾವೇರಿ ತಾಲೂಕನ್ನು ಸಮ್ಮಿಶ್ರ ಸರ್ಕಾರದಲ್ಲಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರಿಸಿ ಮುಖ್ಯಮಂತ್ರಿಗಳ ಕಚೇರಿಗೆ ಕಡತವನ್ನು ಕಳುಹಿಸಲಾಗಿತ್ತು. ಆದರೆ ಜನಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ರಾಜತಾಂತ್ರಿಕವಾಗಿ ಒತ್ತಡ ಹಾಕುವಂತ ವ್ಯಕ್ತಿಗಳು ಇಲ್ಲದೆ ಹೋದ ಹಿನ್ನೆಲೆಯಲ್ಲಿ ಕಾವೇರಿ ತಾಲೂಕು ರಚನೆಯಾಗಿಲ್ಲ ಎಂದು ನೊಂದು ನುಡಿದರು.
ಈ ಸಂದರ್ಭ ಪಪಂ ಸದಸ್ಯರಾದ ಪ್ರಮೋದ್ ಮುತ್ತಪ್ಪ, ಕಲಿಮುಲ್ಲಾ, ಜಗದೀಶ್, ಜಯಲಕ್ಷ್ಮಿ, ಸುಂದರೇಶ್, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಅಮೃತ್ ರಾಜ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಬಿ.ಎ.ಅಬ್ದುಲ್ ಖಾದರ್, ಕೆ.ಎನ್.ಅಶೋಕ್, ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ನಿರ್ದೇಶಕ ಅಮೃತ್, ಜಯಕರ್ನಾಟಕ ಸಂಘಟನೆ ಕಾರ್ಯಾ ಧ್ಯಕ್ಷ ಮುರುಳೀಧರ್, ಆಟೋಚಾಲಕ ಸಂಘದ ಗೌರವಾಧ್ಯಕ್ಷ ವಿ.ಪಿ.ನಾಗೇಶ್, ಹೋರಾಟ ಸಮಿತಿ ಮುಖಂಡರಾದ ಕೆ.ಎಸ್.ರಾಜಶೇಖರ್, ಎಂ.ವಿ.ನಾರಾಯಣ, ಉಮಾಶಂಕರ್, ಕೆ.ಎಸ್.ನಾಗೇಶ್, ನಂಜುಂಡಸ್ವಾಮಿ, ನವೀನ್ ಕುಮಾರ್, ಸತೀಶ್, ಕೆ.ಎನ್.ದೇವರಾಜ್, ಎಂ.ವಿ. ಹರೀಶ್, ಎಚ್.ಟಿ.ವಸಂತ್, ಎಸ್ಡಿಪಿಐ ಸಂಘಟನೆ ಅಧ್ಯಕ್ಷ ಕರೀಂ, ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ಆರ್.ಜಗದೀಶ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಬಿ.ರಾಜು ಸೇರಿದಂತೆ ವಿವಿಧ ರಾಜ ಕೀಯ ಪಕ್ಷಗಳ ಹಾಗೂ ಸಂಘ ಸಂಸ್ಥೆ ಗಳ ಮುಖಂಡರು ಪಾಲ್ಗೊಂಡಿದ್ದರು.