ಕುವೆಂಪುಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು
ಮೈಸೂರು

ಕುವೆಂಪುಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು

December 30, 2019

ಮೈಸೂರು,ಡಿ.29(ಆರ್‍ಕೆಬಿ)- ಕುವೆಂಪು ಅವರಿಗೆ ಅಂದೇ ನೊಬೆಲ್ ಪುರಸ್ಕಾರ ಸಿಗಬೇಕಿತ್ತು. ಆದರೆ ಅವರ ಕಾವ್ಯ, ಬರಹ ಗಳು ಇಂಗ್ಲಿಷ್ ಭಾಷೆಗೆ ಭಾಷಾಂತರ ಗೊಳ್ಳದಿರುವುದು ಅವರಿಗೆ ನೊಬೆಲ್ ಸಿಗದಿ ರಲು ಕಾರಣವಾಯಿತು. ಅಂದೇ ಅವರ ಕಾವ್ಯ, ಬರಹಗಳು ಭಾಷಾಂತರಗೊಂಡಿ ದ್ದರೆ, ರವೀಂದ್ರನಾಥ್ ಠಾಗೂರ್ ಅವರಿಗಿಂತ ಮೊದಲೇ ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯತ್ತಿತ್ತು ಎಂದು ಬೆಂಗಳೂ ರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಕುವೆಂಪು ಅವರ116ನೇ ಜನ್ಮ ದಿನಾ ಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾ ನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಬಿಎಂಶ್ರೀ ಸಭಾಂಗಣದಲ್ಲಿ ಭಾನು ವಾರ ಆಯೋಜಿಸಿದ್ದ `ಕುವೆಂಪು ಚಿಂತನೆಗಳ ಅನುಸಂಧಾನ’ ವಿಚಾರ ಸಂಕಿರಣದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ, ಅವರು ಮಾತನಾಡಿದರು.

ಕುವೆಂಪು ಕಾವ್ಯ ಮತ್ತು ನಾಟಕಗಳು ಅಂದು ಇಂಗ್ಲೀಷ್‍ಗೆ ಭಾಷಾಂತರಗೊಂಡಿ ದ್ದರೆ ನೊಬೆಲ್ ಪ್ರಶಸ್ತಿಗೆ ಅವರು ಅಂದೇ ಭಾಜನರಾಗುತ್ತಿದ್ದರು. ಹಲವು ದಶಕಗಳ ಹಿಂದೆಯೇ ಕುವೆಂಪು ಮಾನವ ಧರ್ಮದ ಕಹಳೆ ಮೊಳಗಿಸಿದ್ದರು. ಇದು ಭಾರತದ ಚರಿತ್ರೆಯಲ್ಲಿ ಬಹಳ ದೊಡ್ಡದು ಎಂದರು.

ಕುವೆಂಪು ಬರವಣಿಗೆ, ಚಿಂತನೆ ವಾಸ್ತವ ವಾಗಿ ಭಾರತವನ್ನು ಬದಲಾಯಿಸಬೇಕು ಎಂಬ ದೂರದೃಷ್ಟಿ ಅವರದ್ದಾಗಿತ್ತು. ಭಾರತದ ಸಂಪ್ರದಾಯದ ಶ್ರೇಣಿಕೃತ ಜಾತಿ, ಒಡೆದು ಹೋದ ಸಮಾಜ, ಮನುಷ್ಯ ಸಂಬಂಧ ದಲ್ಲಿ ಪುರೋಹಿತಶಾಹಿಯನ್ನು ಮೊಟ್ಟ ಮೊದಲ ಬಾರಿಗೆ ತೊಡೆದು ಹಾಕುವ ಚಿಂತನೆ ನಡೆಸಿದ್ದ ಕುವೆಂಪು ಅವರು ಬೆಂಗ ಳೂರು ವಿವಿಯ ಘಟಿಕೋತ್ಸವದಲ್ಲಿ ಗುಡಿ ಗೋಪುರಗಳನ್ನು ಬಿಟ್ಟು ಬನ್ನಿ ಎಂದು ತರುಣರಿಗೆ ಮೊಟ್ಟ ಮೊದಲ ಬಾರಿಗೆ ಕರೆ ನೀಡಿದ್ದರು ಎಂದು ಹೇಳಿದರು.

ದರ್ಶನವೇ ಅವರ ಕಾವ್ಯ ಭಾಷೆಯಾ ಗಿತ್ತು. ದರ್ಶನ ಮತ್ತು ಕಾವ್ಯ ಒಂದಾಗುವ ಪರಿಭಾಷೆಯನ್ನು ಕುವೆಂಪು ಮಾಡಿದ್ದಾರೆ. ಅವರ ಬರಹಗಳೆಲ್ಲವೂ ಒಂದಲ್ಲ ಒಂದು ಸಾಮಾಜಿಕ ಬದಲಾವಣೆಗೆ ಪ್ರೇರೇಪಿ ಸುವಂತಿದ್ದವು ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಎನ್. ಬೋರಲಿಂಗಯ್ಯ ಮುಖ್ಯ ಅತಿಥಿಯಾಗಿ ದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ. ತಳ ವಾರ್, ಪ್ರೊ. ನಂಜಯ್ಯ ಹೊಂಗನೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Translate »