ಮೈಸೂರಲ್ಲಿ ಪೇಜಾವರ ಶ್ರೀಗಳ ಕೊನೇ ಚಾತುರ್ಮಾಸ್ಯ ನೆನಪು
ಮೈಸೂರು

ಮೈಸೂರಲ್ಲಿ ಪೇಜಾವರ ಶ್ರೀಗಳ ಕೊನೇ ಚಾತುರ್ಮಾಸ್ಯ ನೆನಪು

December 30, 2019

ಮೈಸೂರು,ಡಿ.29- ಪೇಜಾವರ ಮಠದ ವಿಶ್ವೇಶತೀರ್ಥ ಪಾದಂಗಳ ಶ್ರೀಗಳು ತಮ್ಮ ಕಡೆಯ ಚಾತುರ್ಮಾಸ್ಯದ ವ್ರತವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಿದ್ದು ಇನ್ನು ನೆನಪು ಮಾತ್ರ. ಅವರೇ ಅಧ್ಯಕ್ಷರಾಗಿದ್ದ ಮೈಸೂರಿನ ಸರಸ್ವತಿಪುರಂನಲ್ಲಿ ರುವ ಕೃಷ್ಣಧಾಮದಲ್ಲಿ ಇಂದು ನೀರವ ಮೌನ ಆವರಿಸಿದೆ. ಇದೇ ಸ್ಥಳದಲ್ಲಿ ಅವರು ಮೂರು ಬಾರಿ ಚಾತುರ್ಮಾಸ್ಯ ವ್ರತ ಆಚರಿಸಿದ್ದರು. ಆ ಮೂರು ಬಾರಿಯೂ ನಾಲ್ಕು ತಿಂಗಳ ಕಾಲ ಮೈಸೂರಿನಲ್ಲಿದ್ದುಕೊಂಡೇ ವ್ರತದ ಜೊತೆ ಕೃಷ್ಣನ ಆರಾಧನೆ ಮಾಡುತ್ತಾ ಜನರಿಗೆ ಉಪನ್ಯಾಸಗಳನ್ನು ನೀಡಿದ್ದರು.

ಅವರ ನೆಚ್ಚಿನ ತಾಣಗಳಲ್ಲಿ ಮೈಸೂರು ಒಂದಾಗಿದೆ. 2003, 2012 ಮತ್ತು 2019ರಲ್ಲಿ ಅವರು ಮೂರು ಬಾರಿ ಚಾತುರ್ಮಾಸ್ಯ ವ್ರತ ನಡೆಸಿದ್ದಾರೆ. ಚಾತುರ್ಮಾಸ್ಯದ ಸಂದರ್ಭದಲ್ಲಿ ಸಾಂಪ್ರದಾಯಿಕ ವಾಗಿ ತನ್ನ ಸ್ವಸ್ಥಾನವನ್ನು ಬಿಟ್ಟು ಬೇರೆ ಸ್ಥಳದಲ್ಲಿ ಯಾವುದೇ ಪೂರ್ವಾಪರ ವ್ಯವಸ್ಥೆಗಳಿಲ್ಲದೆ ಜೀವನ ನಡೆಸುವುದು ಪದ್ಧತಿ. ಅದಕ್ಕೆ ಪೂರಕವಾಗಿ ವಿಶ್ವೇಶತೀರ್ಥರು ಮೈಸೂರಿನಲ್ಲಿ ಇರುವಂತಹ ಸಂದರ್ಭದಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಚಾತುರ್ಮಾಸ್ಯ ವ್ರತವನ್ನು ಆಚರಿಸಿದ್ದರು. ಅವರ ಆಚರಣೆಗಳ ಜೊತೆ ಅವರ ನೆನಪುಗಳು ಸಹ ಮೈಸೂರಿನ ಕೃಷ್ಣಧಾಮದಲ್ಲಿದೆ. ಶ್ರೀಗಳನ್ನ ಕಳೆದುಕೊಂಡ ಈ ಮಠ ಮೌನಕ್ಕೆ ಶರಣಾಗಿದೆ. ಪೇಜಾವರ ಶ್ರೀಗಳು 5 ಬಾರಿ ಪರ್ಯಾಯ ಆಚರಣೆ ಮಾಡಿದ್ದು ಕೃಷ್ಣಮಠದ ಉಸ್ತುವಾರಿಯನ್ನು ಅತ್ಯಂತ ಶ್ರದ್ದಾಭಕ್ತಿಯಿಂದ ನೆರವೇರಿ ಸಿದ್ದಾರೆ. ಅಷ್ಟೇ ಸಂಪ್ರದಾಯಬದ್ಧವಾಗಿ ಚಾತುರ್ಮಾಸ್ಯ ಆಚರಣೆಯನ್ನು ಮಾಡಿದ್ದಾರೆ. ಪ್ರತಿ ವರ್ಷ ಚಾತುರ್ಮಾಸ್ಯ ಆಚರಿಸುತ್ತಿದ್ದ ಪೇಜಾವರ ಶ್ರೀಗಳು ತಮ್ಮ ಕಡೆಯ ಹಾಗೂ 81ನೇ ಚಾತುರ್ಮಾಸ್ಯ ವ್ರತವನ್ನು ಮೈಸೂರಿನಲ್ಲಿ ನಡೆಸಿದ್ದರು. ಆ ಸಂದರ್ಭ ನಡೆದ ಹಲವು ಘಟನೆಗಳಿಗೆ ಮೈಸೂರಿನಿಂದಲೇ ಸಾಕ್ಷಿಯಾಗಿದ್ದ ಪೇಜಾವರ ಶ್ರೀಗಳು ಎಲ್ಲ ಘಟನೆಗಳಿಗೂ ಮೈಸೂರಿನಿಂದಲೇ ಪ್ರತಿಕ್ರಿಯೆ ನೀಡಿದ್ದರು. ಮೋದಿಯವರ 5 ವರ್ಷದ ಆಡಳಿತದಲ್ಲಿ ಗಂಗಾನದಿ ಶುದ್ಧೀಕರಣ ಹಾಗೂ ವಿದೇಶದಲ್ಲಿನ ಕಪ್ಪುಹಣ ತರುವ ವಿಚಾರದಲ್ಲಿ ಮೋದಿ ಆಡಳಿತ ನನಗೆ ತೃಪ್ತಿ ತಂದಿಲ್ಲ ಎಂದು ಹೇಳಿದ್ದರು. ಶ್ರೀಗಳ ಈ ಮಾತು ದೇಶಾದ್ಯಂತ ಸುದ್ದಿಯಾಗಿತ್ತು. ಅದಾದ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಶುಭಾಶಯ ಕೋರಿ, ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ ಸೋತಿದ್ದಕ್ಕೆ ಬೇಸರ ಕೂಡ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಬಿ.ಎಸ್.ಯಡ್ಯೂ ರಪ್ಪ ನೇತೃತ್ವದ ಎರಡು ದಿನದ ಸರ್ಕಾರಕ್ಕೂ ಶುಭಾಶಯ ಕೋರಿದ್ದರು. ಗೊಲ್ಲಗೇರಿಯಲ್ಲಿ ಸಂಸದ ನಾರಾಯಣಸ್ವಾಮಿ ಅವರನ್ನು ಊರಿನ ಒಳಗಡೆ ಬಿಡದೇ ಇದ್ದ ವಿವಾದಕ್ಕೂ ಪ್ರತಿಕ್ರಿಯಿಸಿದ್ದ ಅವರು, ಇದು ತಪ್ಪು ಎಂದು ಬುದ್ಧಿವಾದ ಹೇಳಿದ್ದರು.

ಚಾತುರ್ಮಾಸ್ಯ ವ್ರತದಲ್ಲಿ ಧರ್ಮಪ್ರಚಾರ ಹಾಗೂ ಸಾಮಾಜಿಕ ಬದ್ದತೆ ಮೆರೆದಿದ್ದ ಶ್ರಿಗಳು ಮೈಸೂರಿನ ಮಂಜುನಾಥ ನಗರದಲ್ಲಿನ ದಲಿತಕೇರಿಯಲ್ಲಿ ಪಾದಯಾತ್ರೆ ನಡೆಸಿದ್ದರು. ಅಂದು ಅತ್ಯಂತ ಜ್ವರದಿಂದ ಬಳಲುತ್ತಿದ್ದ ವಿಶ್ವೇಶತೀರ್ಥರು ಅನಾರೋಗ್ಯ ವಿದ್ದರೂ ಕೊಟ್ಟ ಮಾತು ಉಳಿಸಿಕೊಳ್ಳಲು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡಿದ್ದರು. ನಡೆಯಲಾಗದ ಪರಿಸ್ಥಿತಿಯಲ್ಲಿದ್ದ ಶ್ರೀಗಳನ್ನು ವಿಲ್‍ಚೇರ್‍ನಲ್ಲಿ ಕೂರಿಸಿಕೊಂಡು ದಲಿತರ ಮನೆಗೆ ಪಾದ ಪೂಜೆಗೆ ಕರೆದ್ಯೂಯ್ಯಲಾಗಿತ್ತು. ಅಂದು ಸಹ ಸಂತರು ಸಾಮಾಜಿಕ ಜವಾ ಬ್ದಾರಿಗಳಿಂದ ನುಣುಚಿಕೊಳ್ಳಬಾರದು ಎಂಬ ಸಂದೇಶವನ್ನು ದಲಿತಕೇರಿಯಿಂದಲೇ ದೇಶಕ್ಕೆ ನೀಡಿದ್ದರು. ಚಾತುರ್ಮಾಸ ವ್ರತದ ಸಮಯವನ್ನು ಕೇವಲ ಹಿಂದುತ್ವದ ಪ್ರತಿಪಾದನೆಗೆ ಬಳಸದೆ ಸಮಾಜ ಸುಧಾರಣೆಯ ವಿಷಯಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದು ಎಲ್ಲ ಸಂತರಿಗೆ ಮಾದರಿಯಾಗಿತ್ತು. ಶ್ರೀಗಳ ಚಾತುರ್ಮಾಸ ಕೇವಲ ಪೂಜಾ ಕೈಂಕರ್ಯಗಳಿಂದ ಕೂಡಿರದೆ ನಾನಾ ಆಚರಣೆಗಳ ಸಾಕ್ಷಿಪ್ರಜ್ಞೆಯಾಗಿ ಸಾಮರಸ್ಯದ ಪ್ರತಿಬಿಂಬವಾಗಿತ್ತು. ಹೀಗಾಗಿಯೇ ಮೈಸೂರಿನಲ್ಲಿ ಅವರ ಉಪನ್ಯಾಸ ಕೇಳಲು ನೂರಾರು ಮಂದಿ ನಿತ್ಯ ಕೃಷ್ಣಧಾಮಕ್ಕೆ ಬರುತ್ತಿದ್ದರು. ಮೈಸೂರಿನ ಜೊತೆ ಅವಿನಾ ಭಾವ ಸಂಬಂಧ ಇಟ್ಟಕೊಂಡಿದ್ದ ಶ್ರೀಗಳಿಗೆ ಮೈಸೂರಿನ ಸುತ್ತೂರು ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರಿಗಳು, ಮೈಸೂರಿನ ಗಣಪತಿ ಸಚ್ಚಿದಾನಂದ ಶ್ರೀಗಳು ಸೇರಿದಂತೆ ಅನೇಕ ಮೈಸೂರಿನ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಪೇಜಾವರ ಶ್ರೀಗಳ ಸಾಮಾಜಿಕ ಬದ್ದತೆ ಸಾಂಸ್ಕೃತಿಕ ನಗರಿಯ ಜನರಿಗೆ ಇಷ್ಟವಾಗಿತ್ತು. ಸಾಂಪ್ರದಾಯಿಕ ಮಠದಲ್ಲಿದ್ದರೂ ಮಡಿವಂತಿಕೆಯನ್ನ ಮೀರಿದ್ದ ವಿಶ್ವೇಶ ತೀರ್ಥರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದರು ಅಂತ ಶ್ರೀಗಳನ್ನು ಮೈಸೂರು ನೆನಪಿಸಿಕೊಳ್ಳುತ್ತಿದೆ.

Translate »