ಮೈತ್ರಿ ಧರ್ಮ ಪಾಲನೆ ಸಂದೇಶ  ಸಾರುತ್ತಿರುವ ಕೆ.ವಿ.ಮಲ್ಲೇಶ್
ಮೈಸೂರು

ಮೈತ್ರಿ ಧರ್ಮ ಪಾಲನೆ ಸಂದೇಶ ಸಾರುತ್ತಿರುವ ಕೆ.ವಿ.ಮಲ್ಲೇಶ್

April 3, 2019

ಮೈಸೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಬಿಜೆಪಿ ವಿರುದ್ಧ ಹೋರಾಟ ನಡೆಸಲಾಗು ತ್ತಿದೆ. ಆದರೆ ಅಲ್ಲಲ್ಲಿ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಅಸ ಮಾಧಾನ ಹೊರಹಾಕುತ್ತಿರುವುದು ಗೊಂದಲ ಸೃಷ್ಟಿಸಿದೆ. ಈ ಪರಿಸ್ಥಿತಿಯಲ್ಲಿ ಉಭಯ ಪಕ್ಷಗಳ ನಾಯಕರು ಎಲ್ಲಾ ಕಾರ್ಯಕರ್ತರನ್ನೂ ಮೈತ್ರಿ ಧರ್ಮದಡಿ ಒಗ್ಗೂಡಿಸಿಕೊಂಡು, ಚುನಾವಣೆ ನಡೆಸಲು ಕಸರತ್ತು ಮುಂದುವರೆಸಿದ್ದಾರೆ.

ಈ ನಡುವೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡರೊಬ್ಬರು ಮೈತ್ರಿ ಧರ್ಮ ಪರಿ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ದ್ವಿಚಕ್ರ ವಾಹನದಲ್ಲಿ ಪ್ರಚಾರ ಆರಂ ಭಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪರಾಭವಗೊಂಡ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ವಿನೂತನ ರೀತಿಯಲ್ಲಿ ಮೈತ್ರಿ ಸಮನ್ವಯತೆಯ ಸಂದೇಶ ಸಾರುತ್ತಿದ್ದಾರೆ. ಮೈತ್ರಿ ಧರ್ಮ ಪರಿಪಾಲನೆ ಬಗ್ಗೆ ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಅರಿವು ಮೂಡಿಸುವ ಸಲುವಾಗಿಯೇ ತಮ್ಮ ಸ್ಕೂಟರ್ ಅನ್ನು ವಿಶಿಷ್ಟವಾಗಿ ಮಾರ್ಪಾಡು ಮಾಡಿಸಿದ್ದಾರೆ.

ತಮ್ಮ ದ್ವಿಚಕ್ರ ವಾಹನವನ್ನು ಹಸಿರುಮಯಗೊಳಿಸಿ, ಉಭಯ ಪಕ್ಷಗಳ ಚಿಹ್ನೆಯೊಂದಿಗೆ `ಮೈತ್ರಿ ಧರ್ಮ ಪಾಲಿಸೋಣ, ಮೈತ್ರಿ ಅಭ್ಯರ್ಥಿ ಗೆಲ್ಲಿಸೋಣ’ ಘೋಷಣೆಯನ್ನು ಬರೆಸಿದ್ದಾರೆ. ವಾಹನದ ಮುಂಭಾಗದಲ್ಲಿ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇ ಗೌಡರು, ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಭಾವಚಿತ್ರಗಳನ್ನು ಹಾಕಿಸಿದ್ದಾರೆ. ರಾಷ್ಟ್ರ ಆಡಳಿತ ಯಂತ್ರದ ಚಕ್ರಕ್ಕೆ, ಪ್ರತಿಯೊಬ್ಬ ಪ್ರಜೆಯ ಮತದಾನವೇ ಉಸಿರು(ಗಾಳಿ) ಎಂಬುದರ ಪ್ರತೀಕವಾಗಿ ಈ ಸ್ಕೂಟರ್ ಮುಂಭಾಗದ ಚಕ್ರದ ರಕ್ಷಾ ಕವಚದ ಮೇಲೆ ಸಂಸತ್ ಭವನದ ಚಿತ್ರವನ್ನು ಅಂಟಿಸಲಾಗಿದೆ. ಮೈತ್ರಿ ಅಭ್ಯರ್ಥಿಗಳಾದ ಮೈಸೂರು-ಕೊಡಗು ಕ್ಷೇತ್ರದ ಸಿ.ಹೆಚ್.ವಿಜಯಶಂಕರ್, ಚಾಮರಾಜನಗರದ ಆರ್.ಧ್ರುವನಾರಾಯಣ್, ಶಿವಮೊಗ್ಗದ ಮಧು ಬಂಗಾರಪ್ಪ, ರಾಮನಗರದ ಡಿ.ಕೆ.ಸುರೇಶ್, ಹಾಸನದ ಪ್ರಜ್ವಲ್ ರೇವಣ್ಣ ಹಾಗೂ ಮಂಡ್ಯದ ನಿಖಿಲ್ ಕುಮಾರಸ್ವಾಮಿಯ ಭಾವಚಿತ್ರಗಳನ್ನೂ ಅಳವಡಿಸಲಾಗಿದೆ.

ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿರುವ ಶ್ರೀಗಣಪತಿ ದೇವಾಲಯದ ಬಳಿ ಮಂಗಳವಾರ ಕೆ.ವಿ.ಮಲ್ಲೇಶ್, ತಮ್ಮ ವಿಶಿಷ್ಟ ದ್ವಿಚಕ್ರ ವಾಹನಕ್ಕೆ ಪೂಜೆ ಮಾಡಿಸಿ, ಕ್ಷೇತ್ರ ಪ್ರವಾಸ ಆರಂಭಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೈತ್ರಿ ಧರ್ಮ ಪಾಲಿಸುವುದು ಉಭಯ ಪಕ್ಷಗಳ ಎಲ್ಲರ ಕರ್ತವ್ಯವಾಗಿದೆ. ಎರಡೂ ಪಕ್ಷಗಳ ವರಿಷ್ಠರು ಹಾಗೂ ನಾಯಕರು ಮೈತ್ರಿ ಅಭ್ಯರ್ಥಿಗಳ ಪರವಾಗಿ ಒಮ್ಮತದಿಂದ ಕಾರ್ಯ ನಿರ್ವಹಿ ಸಬೇಕೆಂದು ಸೂಚನೆ ನೀಡಿದ್ದಾರೆ. ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಾತ್ಯಾತೀತ ತತ್ವದಡಿ ಮೈತ್ರಿಯಾಗಿರುವ ಪಕ್ಷಗಳ ಗೆಲುವಿಗೆ ದುಡಿಯಬೇಕೆಂದು ತಿಳಿಸಿದ್ದಾರೆ. ಜನರಲ್ಲೂ ಮೈತ್ರಿ ಆಡಳಿತದ ಬಗ್ಗೆ ವಿಶ್ವಾಸವಿದೆ. ಹಾಗಾಗಿ ಹೀಗೆ ದ್ವಿಚಕ್ರ ವಾಹನದಲ್ಲಿ ಮತದಾರರ ಬಳಿ ತೆರಳಿ, ಬೆಂಬಲ ಕೋರುತ್ತಿದ್ದೇನೆ ಎಂದು ತಿಳಿಸಿದರು.

Translate »