ಮಡಿಕೇರಿ: ಕಾರ್ಮಿಕ ಮುಖಂಡರು ಹಾಗೂ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರಿಗೆ ದೂರವಾಣಿ ಕರೆಯ ಮೂಲಕ ಅನಾಮಧೇಯ ವ್ಯಕ್ತಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸುವಂತೆ ಗ್ರಾಪಂ ನೌಕರರ ಸಂಘದ ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಟಿ.ಜಿ.ಸಚಿತ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.19 ರಂದು ಸಂಜೆ ದೂರವಾಣಿ ಕರೆಯ ಮೂಲಕ ಅನಾಮಧೇಯ ವ್ಯಕ್ತಿ ಭರತ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಅ.20 ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದರು. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಪಿ.ಆರ್.ಭರತ್, ರಾಜಕೀಯ ಕಾರಣಗಳ ಹಿನ್ನೆಲೆಯಲ್ಲಿ ಬೆದರಿಕೆ ಕರೆ ಮಾಡಲಾಗಿದೆ. ಪ್ರಜಾತಂತ್ರ ವ್ಯವಸ್ಥೆಯಡಿ ಕಾರ್ಮಿಕ ಸಮುದಾಯದ ಪರವಾಗಿ ಸಂಘಟನೆ ಮತ್ತು ಹೋರಾಟ ಗಳನ್ನು ನಡೆಸಿಕೊಂಡು ಬಂದಿದ್ದೇವೆ. ಆದರೆ ವ್ಯಕ್ತಿಯೊಬ್ಬ ಕರೆ ಮಾಡಿ ಸಂಘಟನೆಯನ್ನು ಬೇರೆ ರಾಜ್ಯದಲ್ಲಿ ಮಾಡುವಂತೆ ತಿಳಿಸಿದ್ದಲ್ಲದೆ “ಮಟಾಷ್” ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದರು. ಇಂತಹ ಬೆದರಿಕೆ ಕರೆ ಮತ್ತು ಗೂಂಡಾಗಿರಿ ಯಿಂದ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.