ಇಲಾಖಾ ಅಧಿಕಾರಿಗಳಿಂದ ಸ್ಪಷ್ಟತೆ ಕೊರತೆ: ಶಿಕ್ಷಕರು ಕಂಗಾಲು
ಮೈಸೂರು

ಇಲಾಖಾ ಅಧಿಕಾರಿಗಳಿಂದ ಸ್ಪಷ್ಟತೆ ಕೊರತೆ: ಶಿಕ್ಷಕರು ಕಂಗಾಲು

June 25, 2019

ಮೈಸೂರು,ಜೂ.24(ಎಸ್‍ಪಿಎನ್)- ಕಳೆದ 3 ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಉದ್ಭವಿಸಿರುವ ಆಡಳಿತಾತ್ಮಕ ಹಾಗೂ ವರ್ಗಾವಣೆ ಗೊಂದಲಗಳಿಗೆ ಉತ್ತರಿಸುವವರೇ ಇಲ್ಲದಂತಾಗಿದೆ..!?.

ಶಿಕ್ಷಕರ ವರ್ಗಾವಣೆ, ಶಿಕ್ಷಕರ ಮಾಹಿತಿ ತಂತ್ರಾಂಶದಲ್ಲಿ(ಟಿಡಿಎಸ್) ಗೊಂದಲ, ಸೇವಾನಿರತ ಶಿಕ್ಷಕರಲ್ಲಿ ಪದವೀಧರರನ್ನು ಗುರುತಿಸಿ ಬಡ್ತಿ ನೀಡದಿ ರುವುದು ಸೇರಿದಂತೆ ಕಳೆದ ಮೂರು ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಎದ್ದಿರುವ ಗೊಂದಲಗಳಿಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

2018ರ ಅಕ್ಟೋಬರ್‍ನಲ್ಲಿ ಸ್ಥಗಿತಗೊಂಡಿದ್ದ ವರ್ಗಾವಣೆ ಪ್ರಕ್ರಿಯೆ ಮತ್ತೆ ಜೂನ್ ತಿಂಗಳಲ್ಲಿ ಆರಂಭ ವಾಗಿದೆ. ಈ ನಡುವೆ `ಎ’ ವಲಯದ ಶಿಕ್ಷಕರಿಗೂ `ಸಿ’ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಸಂಬಂಧ ದಿನದಿಂದ ದಿನಕ್ಕೆ ಗೊಂದಲ ಮೂಡುತ್ತಿವೆ. ಶಿಕ್ಷಕರ ಸಮಸ್ಯೆಗಳಿಗೆ ಹೋರಾಟ ಮಾಡಬೇಕಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲೇ ಒಡಕು ಮೂಡಿ, ನಗರ ಮತ್ತು ಗ್ರಾಮೀಣ ಹೆಸರಿನಲ್ಲಿ ಶಿಕ್ಷಕರ ಸಂಘಗಳು ಉದಯವಾಗಿವೆ. ಇವೆರಡು ಸಂಘದ ಪದಾಧಿಕಾರಿಗಳು ತಮ್ಮತಮ್ಮ ಬೇಡಿಕೆ ಪಟ್ಟಿಗಳನ್ನು ಸರ್ಕಾರಕ್ಕೆ ಪ್ರತ್ಯೇಕವಾಗಿ ಸಲ್ಲಿಸುತ್ತಿದ್ದಾರೆ.

ಒಟ್ಟಿನಲ್ಲಿ ನಗರ ಮತ್ತು ಗ್ರಾಮಾಂತರ ಶಿಕ್ಷಕರಿಗೆ ಸಮಾನ ವರ್ಗಾವಣೆ ಅವಕಾಶ ಕಲ್ಪಿಸಲು ನಗರ ಶಿಕ್ಷಕರನ್ನು ಗ್ರಾಮೀಣಕ್ಕೆ ಹಾಗೂ ಗ್ರಾಮೀಣ ಶಾಲಾ ಶಿಕ್ಷಕರನ್ನು ನಗರ ಪ್ರದೇಶಕ್ಕೆ ತರಲು ಸರ್ಕಾರ ಎ,ಬಿ,ಸಿ ವಲಯ ಎಂದು ವಿಂಗಡಿಸಿ, ವರ್ಗಾವಣೆ ಪ್ರಕ್ರಿಯೆ ಆರಂಭಿಸಿದರೂ ಗೊಂದಲ ಮಾತ್ರ ಮುಗಿದಿಲ್ಲ.

ಶಿಕ್ಷಕರ ವರ್ಗಾವಣೆ ಕಿತ್ತಾಟ: ಒಂದು ಸಂಘ `ಎ’ ವಲಯದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಕಡ್ಡಾಯ(10 ವರ್ಷ ಸೇವಾವಧಿ ಮಿತಿಗೊಳಿಸಿ) ವರ್ಗಾವಣೆ ಮೂಲಕ ವರ್ಗಾವಣೆ ಮಾಡಬಾರದು ಎಂದು ಸರ್ಕಾರದ ಮೇಲೆ ಪ್ರಭಾವ ಬೀರಲು ಪ್ರಯತ್ನಿ ಸುತ್ತಿದ್ದರೆ, ಮತ್ತೊಂದು ಸಂಘ `ಸಿ’ ವಲಯ ಶಿಕ್ಷಕರಿಗೆ `ಎ’ ಕೆಲಸ ಮಾಡುವ ಅವಕಾಶ ನಮಗೂ ಮಾಡಿಕೊಡಿ ಎಂದು ಮನವಿ ಸಲ್ಲಿಸುತ್ತಿದೆ. ಇಲ್ಲವೇ `ಸಿ’ ವಲಯದಲ್ಲಿ ಕೆಲಸ ಮಾಡುವವರಿಗೆ (ರಿಸ್ಕ್ ಸ್ಥಳಗಳಲ್ಲಿ)ಹೆಚ್ಚಿನ ಭತ್ಯೆ ನಿಗದಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರ ಯಾವ ಸಂಘದ ಮನವಿಗೆ ಮನ್ನಣೆ ನೀಡಬೇಕೆಂಬ ಗೊಂದಲದಲ್ಲಿ ಸಿಲುಕಿದೆ.

ಈ ಗೊಂದಲಗಳ ನಡುವೆ ವರ್ಗಾವಣೆಯಲ್ಲಿ ಮಾರ್ಗಸೂಚಿಗಳಿಗೆ ತಿದ್ದುಪಡಿಗೊಳಿಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದರೂ, ಶಿಕ್ಷಕರಲ್ಲಿದ್ದ ಗೊಂದಲ ಹಾಗೆಯೇ ಮುಂದುವರೆದಿದೆ. `ಸಿ’ ವಲಯ ಹಾಗೂ ವಿಶೇಷ ಪ್ರಕರಣ ಗಳಲ್ಲಿ ವರ್ಗಾವಣೆ ಬಯಸುವ ಶಿಕ್ಷಕರಿಗೆ `ಎ’ ವಲಯ ದಲ್ಲಿ ಸ್ಥಳಾವಕಾಶ ಮಾಡಿಕೊಡಲು ಸರ್ಕಾರ ಪ್ರಯತ್ನಿಸಿ ದರೂ ಕೆಲವರು ಅಡ್ಡ ಮಾರ್ಗದಲ್ಲಿ `ಎ’ ಅಥವಾ `ಬಿ’ ವಲಯದಲ್ಲಿ ಉಳಿದುಕೊಳ್ಳುವ ಕಳ್ಳ ಮಾರ್ಗ ಹುಡುಕಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಕಡ್ಡಾಯ ವರ್ಗಾವಣೆ ಪಟ್ಟಿಯಲ್ಲಿರುವ ಶಿಕ್ಷಕರು, ಹಳ್ಳಿಯ ಕಡೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಪರಸ್ಪರ ವರ್ಗಾವಣೆ ನೆಪದಲ್ಲಿ ನಗರ ವ್ಯಾಪ್ತಿಯಲ್ಲೇ ಠಿಕಾಣಿ ಹೂಡುತ್ತಿರುವುದರಿಂದ ಗ್ರಾಮೀಣ ಶಿಕ್ಷಕರಿಗೆ `ಎ’ ವಲಯದಲ್ಲಿ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗು ತ್ತಿದೆ. ಇನ್ನು ಇಲಾಖೆ ಮತ್ತು ಶಿಕ್ಷಕರ ವರ್ಗಾವಣೆ ಗೊಂದಲ ದಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಿಲ್ಲದೆ ವಂಚಿತರಾ ಗುತ್ತಿದ್ದಾರೆ ಎಂಬ ಆರೋಪ ಪೋಷಕರಿಂದ ಕೇಳಿ ಬರುತ್ತಿದೆ.

ಬೇರೆ ಜಿಲ್ಲೆ/ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ದಂಪತಿಗೆ ಅಥವಾ ವಿಶೇಷ ಪ್ರಕರಣಗಳಿಗೆ ಅನುಕೂಲ ಕಲ್ಪಿಸಲು ಇಲಾಖೆ ಅವಕಾಶ ಕಲ್ಪಿಸಿದೆ. ಇದನ್ನೂ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲ ಶಿಕ್ಷಕರು ಒಂದೇ ತಾಲೂಕಿನಲ್ಲಿದ್ದು ಸಂಜೆ ಮನೆ ಸೇರುತ್ತಿದ್ದರೂ ಪತಿ-ಪತ್ನಿ ವರ್ಗಾವಣೆಯಡಿ ಅಕ್ಕ-ಪಕ್ಕದ ಕ್ಲಸ್ಟರ್‍ಗಳಿಗೆ ಹಾಕಿಸಿಕೊಳ್ಳುತ್ತಿದ್ದಾರೆ. ಇದರಿಂದ ಸೀಮಿತ ಮಿತಿ ಮುಗಿದ ಕಾರಣ ಇತರೆ ಜಿಲ್ಲೆ/ತಾಲೂಕಿನಲ್ಲಿ ದುಡಿಯುತ್ತಿರುವ ಶಿಕ್ಷಕ ದಂಪತಿಗಳಿಗೆ ಈ ಸೌಲಭ್ಯ ಸಿಗದಂತಾಗಿದೆ. ಇದರಿಂದ ಅನೇಕ ವರ್ಷಗಳಿಂದ ವರ್ಗಾವಣೆ ಸಿಗದ ಶಿಕ್ಷಕಿಯರ ಕುಟುಂಬಗಳಲ್ಲಿ ಸಮಸ್ಯೆಗಳು ಕೌಟುಂಬಿಕ ಸಮಸ್ಯೆಗಳು ಉಲ್ಭಣಿಸುತ್ತಿವೆ ಎಂಬ ಕೂಗು ಕೇಳಿ ಬರುತ್ತಿದೆ.

ಹೈ-ಕ ಭಾಗದ ಶಿಕ್ಷಕರಿಗೆ ವರ್ಗಾವಣೆ ಭಾಗ್ಯವಿಲ್ಲ: ಶಿಕ್ಷಣ ಇಲಾಖೆಯ ಮಾನದಂಡಗಳನ್ನು ಕೆಲ ಶಿಕ್ಷಕರು ತಮಗೆ ಬೇಕಾದಂತೆ ಪರಿವರ್ತಿಸಿಕೊಂಡು ಅರ್ಹ ಶಿಕ್ಷಕರಿಗೆ ಇಲಾಖೆಯ ಸೌಲಭ್ಯ ಸಿಗದಂತೆ ಮಾಡು ತ್ತಿದ್ದಾರೆ. ಈ ಕುರಿತು ಎಷ್ಟೇ ಕಠಿಣ ಕಾನೂನು ತಂದರೂ ಪ್ರಯೋಜನವಾಗುತ್ತಿಲ್ಲ ಹಾಗೂ ಹೈದರಾ ಬಾದ್ ಕರ್ನಾಟಕ ಭಾಗದಲ್ಲಿ ಕೆಲಸ ನಿರ್ವಹಿಸು ತ್ತಿರುವ ಹಳೆ ಮೈಸೂರು ಭಾಗದ ಶಿಕ್ಷಕರಿಗೆ ಈ ಕಡೆ ಬರುವ ಅವಕಾಶ ಕಮರಿ ಹೋಗುತ್ತಿದೆ ಎಂಬ ಅಳಲು ಶಿಕ್ಷಕ ವಲಯದಿಂದ ಕೇಳಿ ಬರುತ್ತಿದೆ. ವರ್ಗಾವಣೆ ಸಂಬಂಧ ಗೊಂದಲಗಳಿಗೆ ಉತ್ತರ ಕಂಡುಕೊಳ್ಳಲು ಕೆಲ ಶಿಕ್ಷಕರು ಕೆಎಟಿ ಬಾಗಿಲು ತಟ್ಟುತ್ತಿದ್ದರೆ, ಇನ್ನು ಕೆಲವರು ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ.

Translate »