ಮೈಸೂರು,ಜು.7(ಎಸ್‍ಪಿಎನ್)-ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಮುಖ ಘಟ್ಟವಾಗಿ ಜಿಲ್ಲಾಡಳಿತ ಹಾಗೂ ಭೂ ಮಾಲೀಕ ರೊಂದಿಗೆ ಶನಿವಾರ ನಡೆದ ಭೂಮಿ ದರ ನಿಗದಿ ಸಭೆ ಯಾವುದೇ ಒಪ್ಪಂದಕ್ಕೆ ಬರಲಾಗಲಿಲ್ಲ.
ಮೈಸೂರು-ಹುಣಸೂರು ರಸ್ತೆಯಲ್ಲಿ ರುವ ತೋಟಗಾರಿಕೆ ಇಲಾಖೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಧ್ಯಸ್ಥಿಕೆಯಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಭೂ ಮಾಲೀಕರೊಂದಿಗೆ ನಡೆಸಿದ ಮಾತು ಕತೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.
ಈ ಹಿಂದೆ 2 ಬಾರಿ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಭೆ ಸೇರಿ ಎಕರೆಗೆ 2 ಕೋಟಿ ರೂ. ನಿಗದಿಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿ ಕಳುಹಿಸಿಕೊಡಲಾಗಿತ್ತು. ಆದರೆ, ಕೆಐಎಡಿಬಿ ಆಕ್ಟ್ ಪ್ರಕಾರ ಇಷ್ಟು ಮೊತ್ತದ ಹಣ ಭರಿಸಲು ಸಾಧ್ಯವಿಲ್ಲ ಎಂಬ ಹಿಂಬ ರಹದೊಂದಿಗೆ ವರದಿ ವಾಪಸ್ಸು ಬಂದಿತ್ತು. ಇಂದು ಮತ್ತೆ ಸಭೆ ಸೇರಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು, ಎಕರೆಗೆ 1.20 ಕೋಟಿ ರೂ. ನೀಡುವ ಬಗ್ಗೆ ಪ್ರಸ್ತಾ ವನೆ ಮುಂದಿಟ್ಟರು. ಈ ಪ್ರಸ್ತಾವನೆಯನ್ನು ಭೂ ಮಾಲೀಕರು ತಿರಸ್ಕರಿಸಿ, 2 ಕೋಟಿ ನೀಡುವಂತೆ ಮತ್ತೆ ಪಟ್ಟು ಹಿಡಿದಿದ್ದಾರೆ.
ಕೊನೆಗೆ ಭೂ ಮಾಲೀಕರು ಸ್ವಲ್ಪ ಚೌಕಾಸಿ ನಡೆಸಿ 1.80 ಕೋಟಿ ರೂ. ನಿಗದಿಪಡಿಸು ವಂತೆ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೊಪ್ಪದ ಕೆಐಎಡಿಬಿ ಅಧಿಕಾರಿಗಳು ಅಂತಿಮವಾಗಿ 1.50 ಕೋಟಿ ರೂ. ನೀಡುವು ದಾಗಿ ತಿಳಿಸಿದರು. ಈ ಪ್ರಸ್ತಾಪ ಒಪ್ಪದ ರೈತರು, 1.80 ಕೋಟಿ ರೂ. ಕೊಟ್ಟರೆ ಮಾತ್ರ ಒಪ್ಪಿಗೆ ಪತ್ರಕ್ಕೆ ಸಹಿ ಹಾಕುವುದಾಗಿ ತಿಳಿಸಿ ದ್ದಾರೆ. ಅಧಿಕಾರಿಗಳು, ರೈತರ ಸಲಹೆಯನ್ನು ತಿರಸ್ಕರಿಸಿದ್ದರಿಂದ ಇಂದಿನ ಸಭೆಯೂ ವಿಫಲ ವಾಗಿದೆ ಎಂದು ಮಾಹಿತಿ ನೀಡಿದರು.
ದರ ನಿಗದಿಯಲ್ಲಿ ತಾರತಮ್ಯ ಏಕೆ?: ಮೈಸೂರು-ನಂಜನಗೂಡು ರಸ್ತೆ ಅಭಿ ವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದಿಂದ ವಶಪಡಿಸಿಕೊಂಡ ಭೂಮಿಗೆ 2.5ಕೋಟಿ ರೂ.ಪರಿಹಾರ ಮೊತ್ತ ನೀಡಲಾಗಿದೆ. ಇದೇ ಮಾರ್ಗದಲ್ಲಿರುವ ವಿಮಾನ ನಿಲ್ದಾಣ ವಿಸ್ತರಣೆಗೆÀ ರೈತರಿಂದ ಸ್ವಾಧೀನ ಪಡೆಸಿಕೊಳ್ಳುತ್ತಿರುವ ಭೂಮಿ ಯನ್ನು ಮುಂದೆ ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ. ಇದರಿಂದ ಶಾಶ್ವತ ವಾಗಿ ಭೂಮಿ ಕಳೆದುಕೊಳ್ಳುವ ಮಾಲೀ ಕರಿಗೆ ಒಪ್ಪಿತ ದರ ನಿಗದಿಪಡಿಸುವಂತೆ ಎಂದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣ ಸುತ್ತ ಮುತ್ತಲಿನ ಭೂಮಿ ಬೆಲೆ ಗಗನಕ್ಕೇರಿದ್ದು, ಪ್ರಸ್ತುತ ಇಲ್ಲಿನ ಮಾರುಕಟ್ಟೆ ಬೆಲೆ ಎಕರೆಗೆ 5 ಕೋಟಿ ಇದೆ. ಈ ವಿಷಯ ತಿಳಿದಿದ್ದರೂ ಕೆಐಎಡಿಬಿ ಅಧಿಕಾರಿಗಳು ನಿಗದಿಪಡಿಸಿರುವ ದರ ನಿಗದಿ ತಾರತಮ್ಯದಿಂದ ಕೂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಎಕರೆಗೆ 2.5 ಕೋಟಿ ರೂ. ಕೊಟ್ಟಿರುವಾಗ, ಕೆಐಎಡಿಬಿ ಅಧಿಕಾರಿಗಳು ಮಾತ್ರ ಕಡಿಮೆ ಮೊತ್ತ ನಿಗದಿ ಪಡಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರೈತ ಪರ ವರದಿ: ಮಂಡಕಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಸಂಬಂಧ ಭೂಸ್ವಾ ಧೀನ ಪ್ರಕ್ರಿಯೆಗೆ ದರ ನಿಗದಿಗೊಳಿಸಲು ಮೈಸೂರು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆ ಯಲ್ಲಿ ನಡೆದ ಹಿಂದಿನ ಎರಡೂ ಸಭೆಗಳ ಮಾತುಕತೆಯ ವಿವರವನ್ನು ಮಾಲೀಕರ ಪರವಾಗಿಯೇ ಸರ್ಕಾರಕ್ಕೆ ವರದಿ ಕಳುಹಿಸಿ ಕೊಟ್ಟಿದ್ದರು. ಅದರಂತೆ ಇಂದಿನ ಸಭೆಯಲ್ಲಿ ನಡೆದ ಎರಡು ಕಡೆಯ ಮಾತುಕತೆಯ ವಿವರವನ್ನು ರೈತರ ಪರವಾಗಿ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಮಂಡಕಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಇಲ್ಲಿನ ಭೂ ಮಾಲೀಕರಿಂದ ಯಾವುದೇ ವಿರೋಧವಿಲ್ಲ. ಆದರೆ, ಶಾಶ್ವತವಾಗಿ ಭೂಮಿ ಕಳೆದುಕೊಳ್ಳುವ ಮಾಲೀಕರು, ಹೆಚ್ಚಿನ ದರ ನಿಗದಿಪಡಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಮಂಡಕಳ್ಳಿ ವಿಮಾನ ನಿಲ್ದಾಣ ದಿಂದ ದೊಡ್ಡ ವಿಮಾನಗಳ ಹಾರಾಟಕ್ಕೆ ಈಗಿರುವ 1.7 ಕಿ.ಮೀ. ನಿಂದ 2.7 ಕಿ.ಮೀ.ಗೆ ರನ್‍ವೇ ವಿಸ್ತರಿಸುವ ಆಗತ್ಯವಿದೆ. ರನ್‍ವೇ ವಿಸ್ತರಣೆಗೆ 300ಎಕರೆ ಭೂಮಿ ಅಗತ್ಯತೆ ಇದೆ ಎಂದರು. ಸಭೆಯಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು, ಭೂ ಮಾಲೀಕರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.