ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಮುಖಂಡರ ಕೊನೇ ಕಸರತ್ತು
ಮೈಸೂರು

ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಮುಖಂಡರ ಕೊನೇ ಕಸರತ್ತು

July 15, 2019

ಬೆಂಗಳೂರು, ಜು.14-ಶನಿವಾರ ಇಡೀ ದಿನ ಕಸರತ್ತು ನಡೆಸಿ ಮನವೊಲಿಸಲ್ಪಟ್ಟಿದ್ದ ಹೊಸಕೋಟೆ ಶಾಸಕ ಬೆಳಗಾಗುವುದರೊಳಗೆ ಮುಂಬೈಗೆ ಹಾರಿದ್ದ ರಿಂದ ಮರ್ಮಾಘಾತಕ್ಕೊಳಗಾದ ಮೈತ್ರಿ ಪಕ್ಷದ ಮುಖಂಡರು ಸರ್ಕಾರ ಉಳಿಸಿಕೊಳ್ಳಲು ಕೊನೇ ಕಸರತ್ತಿಗೆ ಮುಂದಾಗಿದ್ದು, ಇಂದು ಶಾಸಕ ರಾಮ ಲಿಂಗಾ ರೆಡ್ಡಿ ಅವರ ಮನವೊಲಿಸಲು ಹರಸಾಹಸ ಪಟ್ಟರು. ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಯವರ ಮನವೊಲಿಸಿದರೆ ಬೆಂಗಳೂರಿನ ನಾಲ್ವರು ಶಾಸಕರು ಹಿಂತಿರುಗುತ್ತಾರೆ ಎಂಬ ವಿಶ್ವಾಸದಲ್ಲಿ ರುವ ಮೈತ್ರಿ ಮುಖಂಡರು ರೆಡ್ಡಿಯವರ ಮನ ವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದರು.

ಇಂದು ಬೆಳಿಗ್ಗೆ ಲಕ್ಕಸಂದ್ರದಲ್ಲಿರುವ ರಾಮ ಲಿಂಗಾ ರೆಡ್ಡಿ ಅವರ ಮನೆಗೆ ತೆರಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರುಗಳು ಸಂಧಾನದ ಮಾತು ಕತೆ ನಡೆಸಿದರು. ಆದರೆ ರಾಮಲಿಂಗಾ ರೆಡ್ಡಿ ಅವರು ಯಾವುದೇ ನಿರ್ದಿಷ್ಟ ಭರವಸೆ ನೀಡದ ಕಾರಣ ಹಿಂತಿರುಗಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್.ಕೆ.ಪಾಟೀಲ್, ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್ ಪಡೆಯುವಂತೆ ರಾಮಲಿಂಗಾ ರೆಡ್ಡಿಯವರಲ್ಲಿ ಮನವಿ ಮಾಡಿದ್ದರು. ಅವರು ನಮ್ಮ ಮನವಿಗೆ ಒಪ್ಪುತ್ತಾರೆ ಎಂಬ ವಿಶ್ವಾಸ ವಿದೆ. ಕಾಂಗ್ರೆಸ್ ಬಗ್ಗೆ ಅವರಿಗೆ ಕಾಳಜಿ ಇದೆ. ಅವರು ನಮ್ಮ ಮನವಿಯನ್ನು ತಿರಸ್ಕರಿಸುವುದಿಲ್ಲ ಎಂದು ನಂಬಿದ್ದೇವೆ. ಸಂಕಷ್ಟ ಕಾಲದಲ್ಲಿ ಅವರು ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಭಾವಿಸಿದ್ದೆವು. ರಾಮಲಿಂಗಾ ರೆಡ್ಡಿ ಮನಸ್ಸು ಮಾಡಿದರೆ ಸರ್ಕಾರ ಉಳಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಶ್ವರ ಖಂಡ್ರೆ ಮಾತನಾಡಿ,ರಾಮಲಿಂಗಾ ರೆಡ್ಡಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಕಾಂಗ್ರೆಸ್‍ಗೆ ಅವರ ಅವಶ್ಯಕತೆ ತುಂಬಾ ಇದೆ. ರಾಜೀನಾಮೆ ವಾಪಸ್ ಪಡೆಯಬೇಕೆಂದು ಮನವಿ ಮಾಡಿ ದ್ದೇವೆ. ಮುಂದೆ ಒಳ್ಳೆಯದಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದು ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ರಾಮಲಿಂಗಾ ರೆಡ್ಡಿಯವರ ಚಂದಾಪುರದಲ್ಲಿರುವ ತೋಟದ ಮನೆಗೆ ತೆರಳಿ ಸಂಧಾನದ ಮಾತುಕತೆ ನಡೆಸಿದರು. ಈ ವೇಳೆ ರಾಮಲಿಂಗಾ ರೆಡ್ಡಿ ತಮಗಾದ ನೋವು ಹಾಗೂ ಅವಮಾನವನ್ನು ವಿವರಿಸಿದರು ಎನ್ನಲಾಗಿದೆ. ಹಲವಾರು ಬಾರಿ ತಾವು ಹೇಳಿದರೂ, ಅದನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದರಿಂದ ಮನಸ್ಸಿಗೆ ನೋವುಂಟಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ಕಾಂಗ್ರೆಸ್‍ನಲ್ಲೇ ಇದ್ದೇನೆ ಎಂದು ಹೇಳಿದ್ದಲ್ಲದೇ, ಸೋಮವಾರದವರೆಗೂ ಯಾವುದೇ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರೆನ್ನಲಾಗಿದೆ. ಇಂದು ರಾಮಲಿಂಗಾ ರೆಡ್ಡಿ ಮನವೊಲಿಸಲು ವಿಫಲರಾದ ಮೈತ್ರಿ ಮುಖಂಡರು ಬರಿಗೈಲಿ ವಾಪಸ್ಸಾದರು.

Translate »