ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ
ಮೈಸೂರು

ನಾವ್ಯಾರೂ ರಾಜೀನಾಮೆ ಹಿಂಪಡೆಯಲ್ಲ

July 15, 2019

ಮುಂಬೈ,ಜು.14-ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಅವರು ನಮ್ಮನ್ನು ಮನ ಒಲಿ ಸಲು ಬಂದಿದ್ದಾರೆ ಎನ್ನುವ ವಿಚಾರ ಸತ್ಯಕ್ಕೆ ದೂರವಾದದ್ದು. ಅವರು ನಮ್ಮ ಜೊತೆಯೇ ಇರುತ್ತಾರೆ. ನಾವ್ಯಾರೂ ಯಾರ ಮಾತಿಗೂ ಬಗ್ಗಲ್ಲ ಎಂದು ರೆಬಲ್ ಶಾಸಕರು ಒಕ್ಕೊರಲಿನಿಂದ ಸ್ಪಷ್ಟಪಡಿಸಿದ್ದಾರೆ.

ಎಲ್ಲ ಶಾಸಕರ ಪರವಾಗಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ರೆಬೆಲ್ ಶಾಸಕ ಎಸ್.ಟಿ.ಸೋಮಶೇಖರ್, ಕೆಲವು ಮಾಧ್ಯಮ ಗಳು ಹಾಗೂ ಕೆಲವು ನಾಯಕರು ಎಂಟಿಬಿ ನಾಗರಾಜ್ ಅತೃಪ್ತ ಶಾಸಕರನ್ನು ಮನ ವೊಲಿಸಿ ಕರೆತರಲು ಮುಂಬೈ ಹೋಟೆಲ್‍ಗೆ ತೆರಳಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ವಿಚಾರ. ಸ್ವತಃ ಎಂಟಿಬಿ ನಾಗರಾಜ್ ನಮ್ಮೊಂದಿಗೆ ಇದ್ದಾರೆ. ಚಿಕ್ಕಬಳ್ಳಾ ಪುರ ಶಾಸಕ ಸುಧಾಕರ್ ಬೇರೆಡೆ ಇರ ಬಹುದು ಆದರೆ, ಅವರೂ ನಮ್ಮ ನಿಲುವಿಗೆ ಬದ್ಧರಾಗಿದ್ದಾರೆ ಎಂದು ಸ್ಪಷ್ಟಪಡಿಸುವ ಮೂಲಕ ಅತೃಪ್ತ ಶಾಸಕರು ತಮ್ಮ ನಿಲುವನ್ನು ನೇರವಾಗಿ ಹೊರ ಹಾಕಿದ್ದಾರೆ. ನಾವು ಯಾರ ಸಂಪರ್ಕದಲ್ಲೂ ಇಲ್ಲ, ಸಂಪರ್ಕ ಮಾಡುವುದು ಇಲ್ಲ, ಇಲ್ಲಿಗೆ ಬಂದು ಭೇಟಿ ಮಾಡುತ್ತೇನೆ ಎಂದರೂ ಅವಕಾಶ ನೀಡುವುದಿಲ್ಲ. ಈ ಕುರಿತು ಹೋಟೆಲ್‍ನವರಿಗೆ ಸ್ಪಷ್ಟಪಡಿಸಿದ್ದೇವೆ. ಯಾವ ಕಾಂಗ್ರೆಸ್ ನಾಯಕರು ಕೂಗಿದರೂ, ಮನವಿ ಮಾಡಿದರೂ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ನಾವು ಯಾರ ಮನವೊಲಿಕೆಗೂ ಬಗ್ಗಲ್ಲ, ಯಾರ ಮಾತನ್ನೂ ಕೇಳುವುದಿಲ್ಲ. ಡಾ. ಸುಧಾಕರ್ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಅವರಿಗೆ ಅವಮಾನ ಮಾಡಲಾಗಿದೆ. ಅವರು ಜೊತೆ ಇಲ್ಲದಿದ್ದರೂ ನಮ್ಮ ಸಂಪರ್ಕದಲ್ಲಿದ್ದಾರೆ. ಒಟ್ಟು 13 ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಮೈತ್ರಿ ಸರ್ಕಾರದ ಎಲ್ಲ ನಾಯಕರು, ಮುಖಂಡರು ನಾಗರಾಜ್ ಅವರನ್ನು ಒಪ್ಪಿಸಲು ಪ್ರಯತ್ನ ಮಾಡಿದ್ದಾರೆ. ಇದು ಯಾವಗಲೋ ಆಗಬೇಕಿತ್ತು. ಈಗ ಮನ ಒಲಿಸಿದರೆ ಯಾವುದೇ ಪ್ರಯೋಜನವಿಲ್ಲ. ನಾಯಕರು ಮೊದಲೇ ಈ ಕುರಿತು ಅರಿಯಬೇಕಿತ್ತು. ಎಷ್ಟೋ ಬಾರಿ ಮನವಿ ಮಾಡಿದರೂ ಸಹ ಯಾರೂ ಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುಂಪುಗಾರಿಕೆ ಇಲ್ಲ: ಕೆಲವು ಮಾಧ್ಯಮಗಳು ಶಾಸಕರಲ್ಲೇ ಗುಂಪುಗಳಿವೆ, ಗುಂಪುಗಾರಿಕೆ ನಡೆಯುತ್ತಿದೆ ಎಂದು ವರದಿ ಮಾಡುತ್ತಿವೆ. ಆದರೆ, ಇದೆಲ್ಲ ಸುಳ್ಳು ನಾವು ಯಾವುದೇ ರೀತಿಯ ಗುಂಪುಗಾರಿಕೆ ಮಾಡಿಲ್ಲ. ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ. 13 ಶಾಸಕರ ನಿಲುವು ಸಹ ಒಂದೇ ಆಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರ ಬದಲಾಗುವುದಿಲ್ಲ ಎಂದು ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಅಶೋಕ್ ಬಂದಿಲ್ಲ: ಬಿಜೆಪಿ ಮುಖಂಡ ಆರ್.ಅಶೋಕ್ ಅವರು ನಮ್ಮೊಂದಿಗೆ ಬಂದಿಲ್ಲ. ನಾವು ಅವರು ನಮಗೆ ಭೇಟಿಯಾಗಿಲ್ಲ. ನಿತ್ಯ ಹಲವು ರಾಜಕಾರಣಿಗಳು ಮುಂಬೈಗೆ ಬರುತ್ತಾರೆ, ಹೋಗುತ್ತಾರೆ. ಅಶೋಕ್ ಬಂದಿದ್ದರೆ ಇದು ಕಾಕತಾಳೀಯವಿರಬಹುದು. ನಮ್ಮೊಂದಿಗೆ ಯಾರೂ ಬಂದಿಲ್ಲ ಎಂದು ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು. ರಾಮಲಿಂಗಾರೆಡ್ಡಿ ಮನವೊಲಿಸಿದರೆ, ಉಳಿದ ಶಾಸಕರೂ ಬರುತ್ತಾರೆ, ಎಂಟಿಬಿ ಮನವೊಲಿ ಸಿದರೆ, ಹೋಟೆಲ್‍ನಲ್ಲಿರುವ ಶಾಸಕರು ಬರುತ್ತಾರೆ ಎನ್ನುವ ಸುದ್ದಿಗಳು ಪ್ರಕಟವಾಗಿದ್ದವು. ಆದರೆ ಈಗ ಎಲ್ಲರೂ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

Translate »