ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚನ ಹೋಬಳಿ ನಾಗರಘಟ್ಟ ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿದ್ದ ವಕೀಲನ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ವಕೀಲರ ತಮ್ಮನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹತ್ಯೆಗೀಡಾದ ವಕೀಲ ಸತೀಶ್ ಅವರ ತಮ್ಮ ಉಮೇಶ್ ಎಂಬಾತನೇ ತನ್ನ ಅಣ್ಣನನ್ನೇ ದೊಣ್ಣೆಯಿಂದ ಹೊಡೆದು, ಉಸಿರು ಗಟ್ಟಿಸಿ ಹತ್ಯೆ ಮಾಡಿದ ನಂತರ ಯಾರೋ ನಾಲ್ವರು ಹಣಕಾಸಿನ ವಿಚಾರಕ್ಕಾಗಿ ಜಗಳ ಮಾಡಿಕೊಂಡು ತನ್ನ ಅಣ್ಣನನ್ನು ಕೊಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪೇಟೆ ಪೊಲೀಸರು, ಜಮೀನಿನ ಹುಲ್ಲಿನ ಮೆದೆ ಕೆಳಗೆ ರಕ್ತಸಿಕ್ತವಾದ ದೊಣ್ಣೆಯನ್ನು ಪತ್ತೆ ಹಚ್ಚಿ, ಅದರ ಜಾಡು ಹಿಡಿದು ತನಿಖೆ ನಡೆಸಿದಾಗ, ತಮ್ಮನೇ ಅಣ್ಣನನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ಪೊಲೀಸರಿಂದ ಬಂಧಿಸಲ್ಪಟ್ಟ ಉಮೇಶ್, 36 ವರ್ಷವಾದರೂ ಮದುವೆ ಯಾಗಿಲ್ಲ, ನಿನಗೆ ಹೆಣ್ಣು ಸಿಕ್ಕಿಲ್ಲಾ ಎಂದು ಅಣಕಿಸುತ್ತಿದ್ದ ಕಾರಣದಿಂದಾಗಿ ಅಣ್ಣನನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಈ ಪತ್ತೆ ಕಾರ್ಯದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಎನ್. ಸುಧಾಕರ, ಸಿಬ್ಬಂದಿಗಳಾದ ಪ್ರಕಾಶ್, ರಘು, ಗುರು ಮುಂತಾದವರು ಭಾಗವಹಿಸಿದ್ದರು.