ತಾತ, ಅಪ್ಪನಂತೆ ಬಡವರು, ರೈತರ ಸೇವೆ ಮಾಡುವೆ ಕಾಂಗ್ರೆಸೆ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಹೇಳಿಕೆ
ಮೈಸೂರು

ತಾತ, ಅಪ್ಪನಂತೆ ಬಡವರು, ರೈತರ ಸೇವೆ ಮಾಡುವೆ ಕಾಂಗ್ರೆಸೆ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಹೇಳಿಕೆ

March 30, 2019

ಭೇರ್ಯ: ತಾತ ದೇವೇಗೌಡರು, ಅಪ್ಪ ಕುಮಾರಸ್ವಾಮಿ ಅವರು ಅಧಿಕಾರ ಇರಲಿ, ಇಲ್ಲದಿರಲಿ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಬಡವರು, ರೈತರಿಗಾಗಿ ಶ್ರಮಿಸಿದ್ದು, ಅವರ ಹಾದಿಯಲ್ಲೇ ಸಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ನನಗೆ ಹರಸಿ, ಹಾರೈಸಿ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

ಕೃಷ್ಣರಾಜನಗರ ತಾಲೂಕು ಹೊಸ ಅಗ್ರಹಾರ ಹೋಬಳಿಯ ಮಾರಗೌಡನಹಳ್ಳಿಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ಶುಕ್ರವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಕಾರ್ಯಕರ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದÀ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ತಾತ ದೇವೇಗೌಡರು ತಮ್ಮ ಸುದೀರ್ಘ ರಾಜಕೀಯದಲ್ಲಿ ಬಡವರು, ಅನ್ನದಾತರ ಹಿತಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದು, ಕಾವೇರಿ ವಿಚಾರ, ರೈತರಿಗೆ ಅನ್ಯಾಯವಾದಾಗ ಮುಂದೆ ಬಂದು ಹೋರಾಟದ ನೇತೃತ್ವ ವಹಿಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ನಮ್ಮ ತಂದೆ ಕುಮಾರಸ್ವಾಮಿ ಅವರೂ ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಮುಖ್ಯಮಂತ್ರಿಗಳಾಗಿ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ನಾನು ಸಿನಿಮಾ ರಂಗದಲ್ಲಿ ತಕ್ಕಮಟ್ಟಿನ ಯಶಸ್ಸು ಗಳಿಸಿದ್ದೇನೆ. ಪಕ್ಷ ನನಗೆ ಟಿಕೆಟ್ ನೀಡಲಿದೆ ಎಂದು ತಾನೆಂದೂ ನಿರೀಕ್ಷೆ ಮಾಡಿರಲಿಲ್ಲ. ಪಕ್ಷದ ಹಲವು ಶಾಸಕರು ಹಾಗೂ ಸಚಿವರು ತೆಗೆದುಕೊಂಡ ತೀರ್ಮಾನಕ್ಕೆ ತಲೆಬಾಗಿ ಚುನಾವಣಾ ಅಖಾಡಕ್ಕೆ ಇಳಿಯಬೇಕಾಯಿತು. ವಿಶೇಷವಾಗಿ ಸಾ.ರಾ.ಮಹೇಶಣ್ಣನವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿರುವ ನಾನು ಗೆಲುವು ಸಾಧಿಸಿ ಯಶಸ್ವಿ ನಾಯಕನಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದರು.

ರಾಜಕಾರಣ ಹೊಸತಾದರೂ ತಾತ, ಅಪ್ಪ ಹಾಗೂ ಪಕ್ಷದ ಕಾರ್ಯಕರ್ತರ ಆಶೀರ್ವಾದದಿಂದ ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲವಿದೆ. ಪಕ್ಷದ ಉಜ್ವಲ ಭವಿಷ್ಯಕ್ಕೆ ಹಗಲಿರುಳು ದುಡಿಯುತ್ತಿರುವ ನಿಮ್ಮಂಥ ನಿಷ್ಠಾವಂತ ಕಾರ್ಯಕರ್ತರಲ್ಲಿ ನಾನೂ ಒಬ್ಬ. ನಿಮ್ಮ ಮನೆಯ ಮಗ ಎಂದು ಭಾವಿಸಿ ಆಶೀರ್ವದಿಸಿದರೆ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಹೇಳಿದರು.

ಸಚಿವ ಸಾ.ರಾ.ಮಹೇಶ್ ಅವರು ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷ ಬಿಜೆಪಿಯು ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ನಿಖಿಲ್ ಅವರಲ್ಲಿನ ನಾಯಕತ್ವ ಗುಣ ಜೆಡಿಎಸ್‍ನ ಭವ್ಯ ಭವಿಷ್ಯಕ್ಕೆ ನಾಂದಿಯಾಗಲಿದೆ. ಪಕ್ಷದ ವರಿಷ್ಠ ದೇವೇಗೌಡರು ರಾಷ್ಟ್ರಮಟ್ಟದಲ್ಲಿ ಹಾಗೂ ಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿಗಾಗಿ ಗಮನ ಹರಿಸುವಲ್ಲಿ ನಿರತರಾಗಿದ್ದಾರೆ. ಪಕ್ಷದ ಬೆಳವಣಿಗೆ ಹಾಗೂ ಹಿತದೃಷ್ಟಿಯಿಂದ ಲೋಕಸಭಾ ಸದಸ್ಯರಾಗಿ ನಿಖಿಲ್ ಶ್ರಮಿಸಲಿದ್ದಾರೆ ಎಂಬ ದೂರದೃಷ್ಟಿಯಿಂದ ಅವರನ್ನು ರಾಜಕಾರಣಕ್ಕೆ ನಾವೇ ಕರೆತಂದಿದ್ದೇವೆ ಎಂದು ಮುಖ್ಯಮಂತ್ರಿಗಳ ಪುತ್ರನಿಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡರು.

ಎಐಸಿಸಿ ವಕ್ತಾರೆ, ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯಾ ಮಾತನಾಡಿ, ನಮ್ಮ ತಂದೆ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಲು ಮಾಜಿ ಪ್ರಧಾನಿ ದೇವೇಗೌಡರೇ ಕಾರಣ. ದೇವೇಗೌಡರ ಋಣ ನಮ್ಮ ಕುಟುಂಬದ ಮೇಲಿದ್ದು, ಅವರ ಮೊಮ್ಮಗ ನಿಖಿಲ್ ಗೆಲುವಿಗೆ ಶ್ರಮಿಸುವೆ ಎಂದರು.
ಕಾಂಗ್ರೆಸ್ ಮುಖಂಡ ಸಾಲಿಗ್ರಾಮ ಬಾಬು ಹನುಮಾನ್, ಜಿಪಂ ಸದಸ್ಯ ಅಮಿತ್ ದೇವರಹಟ್ಟಿ, ಮಾಜಿ ಉಪಾಧ್ಯಕ್ಷ ಅಡಗೂರು ಚನ್ನಬಸಪ್ಪ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್, ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಎಪಿಎಂಸಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ಪುರಸಭಾ ಸದÀಸ್ಯ ಕೆ.ಎಲ್.ಜಗದೀಶ್, ಮುಖಂಡರಾದ ಕೆ.ಎಸ್.ಮಲ್ಲಪ್ಪ, ಎಸ್.ಆರ್.ಪ್ರಕಾಶ್, ಅಯಾಜ್ ಅಹ್ಮದ್, ಎಸ್.ವಿ.ನಟರಾಜ್, ಸಾಧೀಕ್, ಅರ್ಜುನಹಳ್ಳಿ ಗಣೇಶ್, ಹಂಪಾಪುರ ಕುಮಾರ್, ಹೊಸೂರು ಮಧುಚಂದ್ರ, ಎಸ್.ಟಿ.ಕೀರ್ತಿ, ವಕೀಲ ಜಗದೀಶ್, ದೊಡ್ಡಕೊಪ್ಪಲು ನಾಗಣ್ಣ, ಎಸ್.ಕೆ.ಮಧುಚಂದ್ರ, ಹೆಬ್ಬಾಳು ಸುಜಯ್, ಅನೀಫ್‍ಗೌಡ, ತನು, ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಮಾರಗೌಡನಹಳಿ ದೇವಸ್ಥಾದಲ್ಲಿ ಪೂಜೆ ಸಲ್ಲಿಸಿ ನಂತರ ರೋಡ್ ಶೋ ನಡೆಸಿದ ನಿಖಿಲ್‍ಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸಾಥ್ ನೀಡಿದರು. ಮಾರಗೌಡನಹಳ್ಳಿ, ಗಳಿಗೆಕೆರೆ, ದೊಡ್ಡಕೊಪ್ಪಲು, ಅಡಗೂರು, ಹಂಪಾಪುರ ಗ್ರಾಮಗಳಲ್ಲಿ ನಿಖಿಲ್ ಅವರಿಗೆ ಮಹಿಳೆಯರು ಆರತಿ ಬೆಳಿಗಿದರೆ, ಮುಖಂಡರು ತಮ್ಮ ಮನೆ ನಿಖಿಲ್ ಅವರಿಗೆ ತಮ್ಮ ಕೈಯಲ್ಲಿ ಆದಷ್ಟು 2 ಸಾವಿರ, 5 ಸಾವಿರ, ಒಬ್ಬರೂ 10 ಸಾವಿರ ರೂ. ದೇಣಿಗೆ ನೀಡಿ ಆಶೀರ್ವದಿಸಿದರು.

ಸಾರಾಗೆ ತರಾಟೆ, ನಗುತ್ತಲೇ ಮನವೊಲಿಸಿದ ನಿಖಿಲ್
ಕೆ.ಆರ್.ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಮಹಿಳೆಯರು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು.

ಕೆ.ಆರ್.ನಗರ ತಾಲೂಕಿನ ಹಂಪಾಪುರದಲ್ಲಿ ಸಾ.ರಾ.ಮಹೇಶ್, ನಿಖಿಲ್, ಮೈತ್ರಿ ಪಕ್ಷಗಳ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು. ಈ ವೇಳೆ ಮಹಿಳೆಯರು ನೀವು ಆಯ್ಕೆಯಾದ ಬಳಿಕ ಹಂಪಾಪುರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ನಿಮ್ಮ ಮೇಲೆ ನಾವು ಸಾಕಷ್ಟು ಅಭಿಮಾನ ಇಟ್ಟುಕೊಂಡಿದ್ದವು. ಅದನ್ನ ನೀವು ಉಳಿಸಿಕೊಂಡಿಲ್ಲ. ನಮ್ಮಂತಹ ಬಡವರನ್ನೂ ನೋಡಿ ಎಂದು ಸಾರಾರನ್ನು ತರಾಟೆಗೆ ತಗೆದುಕೊಂಡರಲ್ಲದೆ, ಮಹಿಳಾ ಸಂಘದ ಮನೆ ಕಟ್ಟಿಸಿಕೊಟ್ಟಿಲ್ಲ ಎಂದು ಸಚಿವ ಸಾ.ರಾ.ಮಹೇಶ್ ವಿರುದ್ಧ ಕಿಡಿಕಾರಿದರು. ನೀವು ಮುಂದೆ ಇದೇ ರೀತಿ ಮಾಡಬೇಡಿ ಎಂದು ನಿಖಿಲ್‍ಗೆ ಮನವಿ ಮಾಡಿದರು.
ಈ ವೇಳೆ ಸಚಿವರ ಬೆಂಬಲಕ್ಕೆ ನಿಂತ ನಿಖಿಲ್ ಕುಮಾರಸ್ವಾಮಿ, ನಗುತ್ತಲೇ ಮಹಿಳೆಯರ ಮನವೊಲಿಸುವ ಯತ್ನ ಮಾಡಿದರು. ಇದಾದ ಬಳಿಕ ಮಹಿಳೆಯೊಬ್ಬರು, ನೀವು ಆಯ್ಕೆಯಾದ ಮೇಲೆ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಿಮ್ಮ ಪಕ್ಷದ ಅಭಿಮಾನವಿದೆ. ಅದನ್ನು ನೀವು ಉಳಿಸಿಕೊಳ್ಳಿ ಎಂದು ನಿಖಿಲ್‍ಗೆ ಕಿವಿಮಾತು ಹೇಳಿದರು.

Translate »