ಮಾನವ ಹಕ್ಕುಗಳ ಬಗ್ಗೆ ಕಾನೂನು  ವಿದ್ಯಾರ್ಥಿಗಳು ಅರಿಯಬೇಕು
ಮೈಸೂರು

ಮಾನವ ಹಕ್ಕುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿಯಬೇಕು

March 22, 2019

ಮೈಸೂರು: ಮಾನವ ಹಕ್ಕುಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಹಾಗಾದರೆ ಮಾತ್ರ ಮಾನವ ಹಕ್ಕುಗಳಿಗೆ ಭಂಗ ಬರದಂತೆ ನೋಡಿಕೊಳ್ಳಲು ಸಾಧ್ಯ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಮೈಸೂರು ವಿವಿ ಕಾನೂನು ಶಾಲೆ ಗುರುವಾರ ಆಯೋ ಜಿಸಿದ್ದ `ನ್ಯೂ ಹಾರಿಜನ್ಸ್ ಇನ್ ಇಂಟರ್‍ನ್ಯಾಷನಲ್ ರೈಟ್ಸ್ ಲಾ -ಕ್ರಿಟಿಕಲ್ ಡಿಸ್‍ಕೋರ್ಸ್’ ಕುರಿತ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಇಡೀ ವಿಶ್ವದಲ್ಲಿ ಪ್ರತೀ ವರ್ಷ ಡಿ.10 ರಂದು ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಾನವ ಹಕ್ಕುಗಳ ಕಾಯಿದೆ ಪ್ರಕಾರ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಸಂವಿಧಾನದ ಖಾತರಿ ವ್ಯಕ್ತಿಯ ಘನತೆ ಅಥವಾ ಅಂತರರಾಷ್ಟ್ರೀಯ ಒಡಂಬಡಿಕೆಯಲ್ಲಿ ಸಾಕಾರಗೊಂಡ ಹಕ್ಕುಗಳಾಗಿವೆ ಎಂದರು. ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕಾದದ್ದು ನಮ್ಮ ಪ್ರಮುಖ ಕರ್ತವ್ಯ. ವೈಯಕ್ತಿಕ ಮತ್ತು ಸಾಮಾಜಿಕವಾಗಿ ಮಾನವ ಹಕ್ಕುಗಳನ್ನು ಎಲ್ಲರೂ ಗೌರವಿಸುವುದೇ ಮಾನವ ಹಕ್ಕುಗಳ ನಿಜವಾದ ಉದ್ದೇಶವಾಗಿದೆ ಎಂದು ಹೇಳಿದರು.

ಇಂದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವ ಬಗ್ಗೆ ವಿಷಾದಿಸಿದ ಅವರು, ಸಮಾಜದಲ್ಲಿ ಮಾನವ ಹಕ್ಕುಗಳ ದಮನಕಾರಿ ಬೆಳವಣಿಗೆಗಳು ಕಂಡು ಬಂದಾಗ ಪ್ರತಿಯೊಬ್ಬರೂ ಮುಕ್ತವಾಗಿ ಧ್ವನಿ ಎತ್ತುವ ಮೂಲಕ ರಕ್ಷಣೆಗೆ ಮುಂದಾಗಬೇಕು ಎಂದರು. ಮೈಸೂರು ವಿವಿ ಕುಲಪತಿ ಪ್ರೊ.ಲಿಂಗರಾಜಗಾಂಧಿ, ಕಾನೂನು ವಿಭಾಗದ ಡೀನ್ ಪ್ರೊ.ಸಿ.ಬಸವರಾಜು ಉಪಸ್ಥಿತರಿದ್ದರು.

Translate »