2 ಮರಿಗಳೊಂದಿಗೆ ಚಿರತೆ ಸಾವು
ಮೈಸೂರು

2 ಮರಿಗಳೊಂದಿಗೆ ಚಿರತೆ ಸಾವು

September 10, 2019

ನಂಜನಗೂಡು, ಸೆ. 9(ರವಿ)- ತನ್ನ ಎರಡು ಮರಿಗಳೊಂದಿಗೆ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದ್ದು, ಈ ಚಿರತೆಗಳನ್ನು ದುಷ್ಕರ್ಮಿಗಳು ವಿಷವಿಕ್ಕಿ ಕೊಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.
ಹಲ್ಲರೆ ಗ್ರಾಮದ ಮಹಮದ್ ಪಾಷಾ ಮತ್ತು ಚೆನ್ನನಂಜಪ್ಪ ಅವರ ಜಮೀನು ಬಳಿ ನಾಲ್ಕು ವರ್ಷದ ಚಿರತೆ ಮತ್ತು ಅದರ 3ರಿಂದ 6 ತಿಂಗಳ ಎರಡು ಮರಿಗಳು ಸತ್ತು ಬಿದ್ದಿರುವುದು ಇಂದು ಬೆಳಿಗ್ಗೆ ಗ್ರಾಮಸ್ಥರಿಗೆ ಕಂಡುಬಂದಿದೆ. ಈ ಚಿರತೆಗಳು ಭಾನುವಾರ ತಡರಾತ್ರಿ ಆಹಾರ ಅರಸಿಕೊಂಡು ಗ್ರಾಮಕ್ಕೆ ಬಂದಾಗ ವಿಷಾಹಾರ ಸೇವಿಸಿ ಮೃತಪಟ್ಟಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ವಲಯ ಅರಣ್ಯಾಧಿಕಾರಿ ಲೋಕೇಶ್‍ಮೂರ್ತಿ ಮತ್ತು ಸಿಬ್ಬಂದಿ ಅರಣ್ಯ ಇಲಾಖೆಯ ಪಶುವೈದ್ಯ ಡಾ. ನಾಗರಾಜ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾ. ನಾಗರಾಜ್ ಅವರು ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಿ ಅದರ ಕೆಲವು ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಡಾ. ನಾಗರಾಜ್ ಅವರು, ಚಿರತೆಗಳು ಅಸ್ವಾಭಾವಿಕವಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಚಿರತೆಗಳ ಸಾವಿನ ಬಗ್ಗೆ ಸಂಶಯವಿದೆ. ಅದರ ಅಂಗಾಂಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದಿಂದ ವರದಿ ಬಂದ ನಂತರ ಚಿರತೆಗಳ ಸಾವಿಗೆ ನಿಖರ ಕಾರಣವೇನು?  ಎಂಬುದು ತಿಳಿಯಲಿದೆ ಎಂದರು. ಘಟನಾ ಸ್ಥಳಕ್ಕೆ ಡಿಸಿಎಫ್ ಪ್ರಶಾಂತ್‍ಕುಮಾರ್, ಎಸಿಎಫ್ ಪರಮೇಶ್ವರಪ್ಪ, ಮೈಸೂರಿನ ವನ್ಯಜೀವಿ ಪರಿಪಾಲಕರಾದ ಕೃತಿಕಾ ಮತ್ತಿತರರು ಭೇಟಿ ನೀಡಿದ್ದರು. ಚಿರತೆಗಳು ಸಾವನ್ನಪ್ಪಿರುವ ವಿಷಯ ಹರಡುತ್ತಿದ್ದಂತೆಯೇ ಹಲ್ಲರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದ್ದರು.

ಈ ಗ್ರಾಮದಲ್ಲಿ ಚಿರತೆಗಳ ಓಡಾಟವಿದೆ ಎಂಬುದನ್ನು ಅರಿತಿದ್ದ ದುಷ್ಕರ್ಮಿಗಳು ಸತ್ತ ನಾಯಿಗೆ ವಿಷ ಲೇಪಿಸಿ ಇಟ್ಟಿದ್ದು, ಅದನ್ನು ಸೇವಿಸಿದ ಚಿರತೆಗಳು ಸಾವನ್ನಪ್ಪಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಚಿರತೆ ಬೇಟೆಗಾಗಿ ವಿಷವಿಕ್ಕಿ ಕೊಲ್ಲಲಾ ಯಿತೇ? ಅಥವಾ ಚಿರತೆ ಹಾವಳಿ ತಪ್ಪಿಸಲು ಕೊಲ್ಲಲಾಯಿತೇ? ಎಂಬ ಪ್ರಶ್ನೆಗಳು ಕೂಡ ಉದ್ಭವಿಸಿವೆ. ಈ ಚಿರತೆಗಳ ಸಾವಿನಲ್ಲಿ ಸಂಶಯವಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಮಾಹಿತಿ ಜಾಲವನ್ನು ಚುರುಕುಗೊಳಿಸಿದ್ದಾರೆ ಎಂದು ಹೇಳಲಾಗಿದೆ.

Translate »