ಮೈಸೂರಲ್ಲಿ ಒಕ್ಕಲಿಗರ ಸಂಘದಿಂದ ಬೃಹತ್ ಪ್ರತಿಭಟನಾ ರ್ಯಾಲಿ
ಮೈಸೂರು

ಮೈಸೂರಲ್ಲಿ ಒಕ್ಕಲಿಗರ ಸಂಘದಿಂದ ಬೃಹತ್ ಪ್ರತಿಭಟನಾ ರ್ಯಾಲಿ

September 10, 2019

ಮೈಸೂರು,ಸೆ.9(ಆರ್‍ಕೆ)- ಕಾಂಗ್ರೆಸ್‍ನ ಪ್ರಭಾವಿ ನಾಯಕರೂ ಆದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಇಂದು ಮೈಸೂರಲ್ಲಿ ಭಾರೀ ಪ್ರತಿಭಟನೆ ನಡೆಯಿತು.

ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಆಯೋ ಜಿಸಿದ್ದ ರ್ಯಾಲಿಯು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ದಿಂದ ಆರಂಭವಾಗಿ ದೊಡ್ಡ ಗಡಿಯಾರ, ಓಲ್ಡ್ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ಶಿವರಾಂಪೇಟೆ ಮೂಲಕ ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಜಂಕ್ಷನ್, ಮೆಟ್ರೋಪೋಲ್ ಸರ್ಕಲ್, ವಿನೋಬಾ ರಸ್ತೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಮಾಜಿ ಸಚಿವ ಸಾ.ರಾ.ಮಹೇಶ್, ಮೇಯರ್ ಪುಷ್ಪಲತಾ ಜಗನ್ನಾಥ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಮಾಜಿ ಮೇಯರ್ ಗಳಾದ ಮೋದಾಮಣಿ, ಆರ್.ಲಿಂಗಪ್ಪ, ರವಿಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾ ಪಂಚಾಯ್ತಿ ಸದಸ್ಯ ಮಾದೇಗೌಡ, ಮೈಸೂರು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು, ಮಾಜಿ ಜಿಪಂ ಅಧ್ಯಕ್ಷ ಕೆ.ಮರೀಗೌಡ, ಕಾಂಗ್ರೆಸ್ ಮುಖಂಡರಾದ ಕೆ.ಹರೀಶ್‍ಗೌಡ, ಕಾರ್ಪೊರೇಟರ್‍ಗಳಾದ ಕೃಷ್ಣಕುಮಾರ್ ಸಾಗರ್, ಪ್ರೇಮಾ ಶಂಕರೇಗೌಡ, ಕೆ.ವಿ.ಶ್ರೀಧರ್, ರಾಜ್ಯ ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಚರಣ್‍ರಾಜ್ ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ ನಂತರ ಆಂಗ್ಲ ಭಾಷೆಯಲ್ಲಿ ಪ್ರಧಾನಮಂತ್ರಿಗಳಿಗೆ ಸಿದ್ಧಪಡಿಸಿದ್ದ ಮನವಿ ಪತ್ರವನ್ನು ಎಡಿಸಿ ಬಿ.ಆರ್.ಪೂರ್ಣಿಮಾ ಅವರಿಗೆ ಸಲ್ಲಿಸಲಾಯಿತು.

ಈ ದೇಶದ ಕಾನೂನನ್ನು ದುರುಪಯೋಗಪಡಿಸಿಕೊಂಡು ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಐಟಿ, ಇಡಿ ಅಧಿಕಾರಿಗಳ ಮೂಲಕ ಮಾಜಿ ಸಚಿವ ಡಿ.ಕೆ.ಶಿವ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿವೆ ಎಂದು ಪ್ರತಿಭಟನಾನಿರತರು ದೂರಿದರು. ಡಿಕೆಶಿ ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶವಿದೆ. ಕೇವಲ ಕಾಂಗ್ರೆಸ್ ಪ್ರಭಾವಿ ನಾಯಕರ ಮೇಲೆ ಪ್ರಕರಣ ದಾಖಲಿಸಿರುವ ಇಡಿ ಅಧಿಕಾರಿಗಳು, ಈವರೆಗೂ ದೇಶದಲ್ಲಿ ಬಿಜೆಪಿಯವರ ಮೇಲೆ ದಾಳಿ ನಡೆಸದಿರುವುದು ರಾಜಕೀಯ ದುರುದ್ದೇಶವಿದೆ ಎಂಬುದು ಸ್ಪಷ್ಟವಾಗಿದೆ ಎಂದೂ ಆಪಾದಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ, ಇಡಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಡಿಕೆಶಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ತಮಟೆ, ಡೋಲು, ಡ್ರಮ್‍ಗಳ ಭಾರೀ ಸದ್ದು ಮೆರವಣಿಗೆಯುದ್ಧಕ್ಕೂ
ಕೇಳಿ ಬಂತು. ಒಕ್ಕಲಿಗರ ಸಂಘಗಳ ಬ್ಯಾನರ್ ಹಿಡಿದು ಸಾಗಿದ ಸಾವಿರಾರು ಮಂದಿ, ಡಿ.ಕೆ. ಶಿವಕುಮಾರ್‍ರನ್ನು ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪಕ್ಷಭೇದ ಮರೆತು ಎಲ್ಲಾ ಸಂಘಟನೆಗಳು ಉಗ್ರ ರೀತಿಯ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು.

ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಜಿ. ಕುಮಾರ್‍ಗೌಡ, ಉಪಾಧ್ಯಕ್ಷರಾದ ಎಸ್. ಗುರುರಾಜ್, ಹೆಚ್.ಕೆ.ನಾಗಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಬೋರೇಗೌಡ, ಸಹ ಕಾರ್ಯದರ್ಶಿ ಪಿ.ಹೆಚ್.ರಾಜು, ಖಜಾಂಚಿ ಎಂ.ಎ.ಸುಶೀಲಾ ನಂಜಪ್ಪ, ನಿರ್ದೇಶಕರಾದ ಪಿ.ಪ್ರಶಾಂತಗೌಡ, ಎಂ.ಶಿವಕುಮಾರ್, ರಾಜ್ಯ ಯುವ ಒಕ್ಕಲಿಗರ ಸಂಘದ ಸತೀಶ್ ಗೌಡ, ಕೆ.ಎನ್.ಕುಮಾರ್ ಹಾಗೂ ಪದಾಧಿಕಾರಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಮುಖಂಡರಾದ ಕೆಂಪಣ್ಣ, ಕವೀಶ್ ಗೌಡ, ನಾರಾಯಣಗೌಡ, ಶಿವಪ್ಪ, ಸುಶೀಲಾ ಕೇಶವಮೂರ್ತಿ, ಪೈ ಕೆಂಪೇಗೌಡ, ಎ.ರವಿ, ಗಿರೀಶ್‍ಗೌಡ, ವಿ.ಶ್ರೀಧರ, ಶೇಖರ್, ಹೆಚ್. ಅರವಿಂದ, ಹೆಚ್.ತೇಜಸ್ವಿ, ಡಾ.ರವೀಂದ್ರ, ಕೆ.ವಿ.ಮಲ್ಲೇಶ, ಕೆ.ಆರ್.ಮಿಲ್ ಶಿವಣ್ಣ, ಎಂ. ಶಿವಣ್ಣ, ಕೂರ್ಗಳ್ಳಿ ಮಹದೇವು, ಎಲ್. ಭಾಸ್ಕರ್, ಭಾಸ್ಕರ್ ಎನ್.ಗೌಡ, ಕುಮಾರ್, ಕಾಂತರಾಜು, ಟಿ.ಎಸ್.ರವಿಶಂಕರ್, ಪುಷ್ಪವಲ್ಲಿ, ಲೋಕೇಶರಾಜ್, ಶ್ರೀನಾಥ ಬಾಬು ಸೇರಿದಂತೆ ಹಲವರು ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು. ದೇವರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ, ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿಗೆ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ONE COMMENT ON THIS POST To “ಮೈಸೂರಲ್ಲಿ ಒಕ್ಕಲಿಗರ ಸಂಘದಿಂದ ಬೃಹತ್ ಪ್ರತಿಭಟನಾ ರ್ಯಾಲಿ”

  1. Syed says:

    1 ಲಕ್ಷ = 1೦೦ಸಾವಿರ
    100 ಲಕ್ಷ= 1 ಕೋಟಿ
    20000 ಕೊಟಿ= 1 ಖರ್ಗೆ
    100 ಖರ್ಗೆ = 1 ಡಿಕೇಶಿ
    100 ಡಿಕೇ ಶಿ = 1 ಪವಾರ
    100 ಪವಾರ = 1 ಚಿದು
    500 ಚಿದು = 1 ಇಟಲಿ ಕ್ವೀನ
    *ಹೊಸ ಅಳತೆ ಮಾಪನ ಕೋಷ್ಠಕ*

Translate »