ಬಿ-ಖರಾಬಿನಿಂದ ನಮಗೆ ಮುಕ್ತಿ ನೀಡಿ…ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ನಿವಾಸಿಗಳಿಂದ ಸಂಸದ ಪ್ರತಾಪ್ ಸಿಂಹರಿಗೆ ಮನವಿ
ಮೈಸೂರು

ಬಿ-ಖರಾಬಿನಿಂದ ನಮಗೆ ಮುಕ್ತಿ ನೀಡಿ…ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ನಿವಾಸಿಗಳಿಂದ ಸಂಸದ ಪ್ರತಾಪ್ ಸಿಂಹರಿಗೆ ಮನವಿ

August 31, 2019

ಮೈಸೂರು,ಆ.29-ಕೆಲ ವರ್ಷದ ಹಿಂದೆ ಮೈಸೂರು ಜಿಲ್ಲಾಧಿಕಾರಿಗಳಾಗಿದ್ದ ಸಿ.ಶಿಖಾ ಅವರ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರುವ ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಹಾಗೂ ಆಲನಹಳ್ಳಿ ಸರ್ವೆ ನಂ.41ರ ನಿವಾಸಿ ಗಳ ಸಮಸ್ಯೆ ಬಗೆಹರಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಸಿದ್ಧಾರ್ಥನಗರದ ಸಮಾಜ ಸೇವಾ ಟ್ರಸ್ಟ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆವರಣದಲ್ಲಿ ಸಂಸದರನ್ನು ಭೇಟಿ ಮಾಡಿದ ಟ್ರಸ್ಟ್‍ನ ಪದಾಧಿಕಾರಿಗಳು, ಕಳೆದ ಆರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಗಳಾಗಿದ್ದ ಸಿ.ಶಿಖಾ ಅವರು ಈ ಸರ್ವೆ ನಂಬರ್‍ಗಳ ಎಲ್ಲಾ ಭೂಮಿಯನ್ನು ಬಿ-ಖರಾಬು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಹಿಂದಿನ ಸಿಐಟಿಬಿ ಹಾಗೂ ಹಾಲಿ ಮುಡಾದಿಂದ ನಿರ್ಮಾಣವಾಗಿರುವ ಕೆ.ಸಿ.ನಗರ, ಜೆ.ಸಿ.ನಗರ, ಸಿದ್ಧಾರ್ಥನಗರ, ಆಲನಹಳ್ಳಿ ಹಾಗೂ ಆದಾಯ ತೆರಿಗೆ ಬಡಾವಣೆಯ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.

ಸರ್ಕಾರದ ಅಂಗ ಸಂಸ್ಥೆಗಳೇ ಆದ ಸಿಐಟಿಬಿ ಹಾಗೂ ಮುಡಾದಿಂದ ನಿವೇಶನ ಖರೀದಿಸಿ ಮನೆ ನಿರ್ಮಿಸಿ ವಾಸ ಮಾಡುತ್ತಿದ್ದರೂ ಜಿಲ್ಲಾಧಿ ಕಾರಿಗಳ ಆದೇಶದಿಂದಾಗಿ ತೀವ್ರ ಸಂಕಷ್ಟ ಅನುಭ ವಿಸಬೇಕಾಗಿದೆ. ಖಾಲಿ ನಿವೇಶನದಲ್ಲಿ ಮನೆ ನಿರ್ಮಿಸಲು, ನಿರ್ಮಿಸಿರುವ ಮನೆ ರಿಪೇರಿ ಮಾಡಲು, ಮನೆ ಅಥವಾ ನಿವೇಶನ ಮಾರಾಟ ಮಾಡಲು ಹಾಗೂ ವಾರಸುದಾರರ ಹೆಸರಿಗೆ ಪರಭಾರೆ ಮಾಡಲೂ ಕೂಡ ಸಾಧ್ಯವಾಗುತ್ತಿಲ್ಲ. ನಗರ ಪಾಲಿಕೆಯು ಈ ನಿವೇಶನಗಳಿಗೆ ಸಂಬಂಧ ಪಟ್ಟಂತೆ ಕಟ್ಟಡದ ಲೈಸೆನ್ಸ್, ಖಾತೆ ಬದಲಾವಣೆ ಸೇರಿದಂತೆ ಯಾವುದನ್ನೂ ಮಾಡುತ್ತಿಲ್ಲ. ಬ್ಯಾಂಕ್ ನಿಂದ ಸಾಲವನ್ನೂ ಪಡೆಯಲಾಗುತ್ತಿಲ್ಲ ಎಂದು ತಮ್ಮ ಸಮಸ್ಯೆಯನ್ನು ಸಂಸದರಿಗೆ ವಿವರಿಸಿದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಗಳಾಗಿದ್ದಾಗ ಈ ಬಡಾವಣೆಗಳನ್ನು ಬಿ-ಖರಾಬಿ ನಿಂದ ಕೈಬಿಟ್ಟು ಸಂಪುಟ ಸಭೆ ನಿರ್ಣಯ ಕೈಗೊಂಡಿದೆ. ಆದರೆ ಆ ಸಂಬಂಧ ಈವರೆವಿಗೂ ಸರ್ಕಾರಿ ಆದೇಶ ಹೊರಡಿಸದೇ ಇರುವುದರಿಂದ ಬಡಾವಣೆ ನಿವಾಸಿಗಳ ಸಂಕಷ್ಟ ಮುಂದುವರೆದೇ ಇದೆ. ಕಳೆದ ಫೆಬ್ರವರಿಯಲ್ಲಿ ಶಾಸಕ ರಾಮದಾಸ್ ಅವರು ಇನ್ನು 15 ದಿನದಲ್ಲಿ ಸಮಸ್ಯೆ ಬಗೆಹರಿ ಯಲಿದೆ ಎಂದು ಹೇಳಿಕೆ ನೀಡಿದ್ದರಾದರೂ, ಸಮಸ್ಯೆಯಂತೂ ಬಗೆಹರಿದಿಲ್ಲ ಎಂದು ತಿಳಿಸಿದ ನಿವಾಸಿಗಳು, ಕಳೆದ ಎರಡು ವರ್ಷಗಳ ಹಿಂದೆ ಈ ಸಮಸ್ಯೆ ಬಗ್ಗೆ ತಮ್ಮ (ಪ್ರತಾಪ್ ಸಿಂಹ) ಗಮನಕ್ಕೂ ತಂದಿದ್ದೇವೆ. ತಾವೂ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದೀರಿ ಎಂಬು ದನ್ನು ನೆನಪಿಸಿದ ನಿವಾಸಿಗಳು, ಈಗ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರವು ಅಸ್ತಿತ್ವದಲ್ಲಿ ಇರುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಿ, ಈ ಎಲ್ಲಾ ಬಡಾವಣೆಗಳ ಸಂಕಷ್ಟವನ್ನು ನಿವಾರಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಜೊತೆಗೆ ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೂ ತಂದು ಶೀಘ್ರದಲ್ಲೇ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಂಸದರನ್ನು ಭೇಟಿ ಮಾಡಿದ ನಿಯೋಗ ದಲ್ಲಿ ಸಮಾಜ ಸೇವಾ ಟ್ರಸ್ಟ್‍ನ ಎಸ್. ಪ್ರಸನ್ನ ಕುಮಾರ್, ಎನ್.ಎಸ್.ಉಮೇಶ್, ಎಂ.ಎಸ್. ಮಹೇಶ್ ಚಂದ್ರ, ಗಣೇಶ್ ಕುಮಾರ್, ಎಂ. ರಾಜೇಶ್, ಡಿ.ಎಂ.ವಿಶ್ವನಾಥ್, ಸಿ.ಎಂ.ಶಿವಕುಮಾರ್, ಎಂ.ಪ್ರದೀಪ್ ಕುಮಾರ್, ಎಸ್.ಜೆ.ರವಿ ಕುಮಾರ್ ಇನ್ನಿತರರಿದ್ದರು.

Translate »