ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ  ರಾಜೀನಾಮೆ ತಿರಸ್ಕರಿಸಲು ಆಗ್ರಹಿಸಿ ಪತ್ರ ಚಳವಳಿ
ಮೈಸೂರು

ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿರುವ  ರಾಜೀನಾಮೆ ತಿರಸ್ಕರಿಸಲು ಆಗ್ರಹಿಸಿ ಪತ್ರ ಚಳವಳಿ

December 17, 2019

ಮೈಸೂರು, ಡಿ.16(ಪಿಎಂ)- ಮಾಜಿ ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಪತ್ರ ಚಳವಳಿ ನಡೆಸಲಾಯಿತು.

ಮೈಸೂರು ನಗರಪಾಲಿಕೆ ಎದುರಿನ ಅಂಚೆ ಪೆಟ್ಟಿಗೆಗೆ ಪತ್ರ ಹಾಕುವ ಮೂಲಕ ರಾಜೀನಾಮೆ ಸ್ವೀಕರಿಸದಂತೆ ಆಗ್ರಹಿಸಲಾಯಿತು. ವೇದಿಕೆ ರಾಜ್ಯಾಧ್ಯಕ್ಷ ಕೆ.ಶಿವರಾಂ ಮಾತನಾಡಿ, ಪ್ರಜಾಪ್ರಭು ತ್ವದ ಉಳಿವಿಗಾಗಿ ಸಿದ್ದರಾಮಯ್ಯನವರು ಪ್ರಸ್ತುತ ರಾಜಕೀಯದಲ್ಲಿ ಮುಂಚೂಣಿಯಲ್ಲಿರ ಬೇಕು. ಇದು ತೀರಾ ಅನಿವಾರ್ಯ. ಈ ಹಿನ್ನೆಲೆಯಲ್ಲಿ ಸೋನಿಯಾಗಾಂಧಿಯವರು ಸಿದ್ದ ರಾಮಯ್ಯ ಅವರ ರಾಜೀನಾಮೆಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಜನಪರ ಧ್ವನಿಗಳನ್ನು ಹತ್ತಿಕ್ಕುವುದು ನಮ್ಮ ಅಸ್ತಿತ್ವವನ್ನು ನಾವೇ ಕ್ರಮೇಣ ಕೊಂದು ಕೊಂಡಂತೆ. ಹೀಗಾಗಿ, ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಸಿದ್ದರಾಮಯ್ಯನವರ ಕೈ ಬಲಪಡಿಸುವುದರ ಮೂಲಕ ಸಂವಿಧಾನದ ಆಶಯಗಳು, ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಸಿದ್ದರಾಮಯ್ಯನವರು ವಿಪಕ್ಷ ನಾಯಕ ಸ್ಥಾನದಿಂದ ಬದಲಾದರೆ ಕಾಂಗ್ರೆಸ್‍ಗೆ ತುಂಬಲಾರದ ನಷ್ಟವುಂಟಾಗಲಿದೆ ಎಂದರು. ಸಿದ್ದ ರಾಮಯ್ಯನವರ ನಾಯಕತ್ವ ಬದಲಾದಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕವಾಗುವುದು ನಿಶ್ಚಿತ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನವರೊಬ್ಬರೇ ಕಾರಣರಲ್ಲ ಎಂದು ಪ್ರತಿಪಾದಿಸಿದರು. ಸಂಘಟನೆಗಳ ಪಿ.ರಾಜು, ಜಾಕೀರ್ ಹುಸೇನ್, ಸಿ.ಟಿ.ಆಚಾರ್ಯ, ಎನ್.ಆರ್.ನಾಗೇಶ್, ಹಿನಕಲ್ ಪ್ರಕಾಶ್, ಹಿನಕಲ್ ಉದಯ್, ಪ್ರಕಾಶ್, ಸತ್ಯನಾರಾಯಣ್, ರವಿ ಓಂಕಾರ್ ಇದ್ದರು.

 

Translate »