ಮದುವೆಯಾಗುವುದಾಗಿ ನಂಬಿಸಿ ಯುವತಿ ಹತ್ಯೆಗೈದು ಚಿನ್ನಾಭರಣ, ನಗದು ದೋಚಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ
ಮೈಸೂರು

ಮದುವೆಯಾಗುವುದಾಗಿ ನಂಬಿಸಿ ಯುವತಿ ಹತ್ಯೆಗೈದು ಚಿನ್ನಾಭರಣ, ನಗದು ದೋಚಿದ್ದ ಇಬ್ಬರಿಗೆ ಜೀವಾವಧಿ ಶಿಕ್ಷೆ

June 12, 2018

ಮೈಸೂರು: ಮದುವೆಯಾವುಗುದಾಗಿ ನಂಬಿಸಿ ಗುಂಡ್ಲುಪೇಟೆಯಿಂದ ಕರೆತಂದು ನಂಜನಗೂಡು ಬಳಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು 50,000 ರೂ. ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಗುಂಡ್ಲುಪೇಟೆ ತಾಲೂಕು, ಬೇಗೂರು ಹೋಬಳಿ ರಂಗನಾಥಪುರ ನಿವಾಸಿಗಳಾದ ಸ್ವಾಮಿ ಮತ್ತು ಶಂಕರ, ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಪಾಲಾದ ಹತ್ಯೆ ಆರೋಪಿಗಳು.ಸ್ವಾಮಿ, ರಂಗನಾಥಪುರದ ಪುಟ್ಟಮ್ಮಣ ಎಂಬುವರನ್ನು ಪ್ರೀತಿಸುವ ನಾಟಕವಾಡಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿದ್ದ. ಆತನ ಗುಣ, ನಡವಳಿಕೆ ತಿಳಿದಿದ್ದ ಆಕೆಯ ತಾಯಿ ಮತ್ತು ಅಣ್ಣ ಅದಕ್ಕೆ ಒಪ್ಪಿರಲಿಲ್ಲ.ಉತ್ತಮ ಕುಟುಂಬಕ್ಕೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ಪುಟ್ಟಮ್ಮಣ ಸಹೋದರ ಮಂಜುನಾಥ, ಅದಕ್ಕಾಗಿ ತಂಗಿಗೆ ಓಲೆ, ಸರ, ಬಳೆಗಳು ಸೇರಿದಂತೆ ಹಲವು ಚಿನ್ನಾಭರಣ ಮತ್ತು 50,000 ರೂ. ನಗದನ್ನೂ ಮಾಡಿಸಿ, ಮನೆಯಲ್ಲಿಟ್ಟಿದ್ದ.

ಈ ವಿಷಯ ತಿಳಿದ ಸ್ವಾಮಿ, ಮದುವೆಯಾಗುವುದಾಗಿ ನಂಬಿಸಿ, ಹಣ ಮತ್ತು ಆಭರಣದೊಂದಿಗೆ ಬರುವಂತೆ ಹೇಳಿ 2014ರ ಜನವರಿ 6 ರಂದು ಪುಟ್ಟಮ್ಮಣ ಯನ್ನು ಕರೆಸಿಕೊಂಡಿದ್ದಾನೆ. ತನ್ನ ಸಹಚರರಾದ ಶಂಕರ ಹಾಗೂ ಮತ್ತೋರ್ವ ಅಪ್ರಾಪ್ತನ ನೆರವಿನಿಂದ ಆಕೆಯನ್ನು ಕಾರಿನಲ್ಲಿ ನಂಜನಗೂಡು ಸಮೀಪ ಮಿಲಿಟ್ರಿ ಮಾಳದಲ್ಲಿ ವೇಲ್‍ನಿಂದ ಕುತ್ತಿಗೆ ಬಿಗಿದು, ನಂತರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ 50,000 ರೂ. ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದರು.

ಪುಟ್ಟಮ್ಮಣ ಕಾಣ ಸದ ಕಾರಣ ಮನೆಯವರು ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ತದನಂತರ ಕೊಳೆತು ನಾರುತ್ತಿದ್ದ ಸ್ಥಿತಿಯಲ್ಲಿ ನಂಜನಗೂಡಿನ ಮಿಲಿಟ್ರಿ ಮಾಳದಲ್ಲಿ ದೊರೆತ ದೇಹ ಪುಟ್ಟಮ್ಮಣ ಯದು ಎಂದು ಗುರುತು ಮಾಡಿದ ಕುಟುಂಬಸ್ಥರಿಗೆ ಪೊಲೀಸರು ಒಪ್ಪಿಸಿದ್ದರು.

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ನಂಜನಗೂಡು ಪಟ್ಟಣ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ರಘು ಅವರು ಆರೋಪಿಗಳ ಪತ್ತೆಗೆ ಶೋಧ ನಡೆಸಿದಾಗ ನಂಜನಗೂಡು, ಮೈಸೂರು ನಗರದಲ್ಲಿ ಒಡವೆ ಗಿರವಿ ಇಟ್ಟಿದ್ದರ ಸುಳಿವಿನ ಮೇರೆಗೆ ಆರೋಪಿಗಳಾದ ಸ್ವಾಮಿ, ಶಂಕರ ಹಾಗೂ ಮತ್ತೋರ್ವನನ್ನು ಪತ್ತೆ ಮಾಡಿ ಘಟನೆ ನಡೆದ ಒಂದು ತಿಂಗಳ ನಂತರ ಹಂತಕರನ್ನು ಬಂಧಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿದ್ದ ಇನ್ಸ್‍ಪೆಕ್ಟರ್ ರಘು ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ್ ಎಂ. ಆನಂದ ಶೆಟ್ಟಿ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹೆಚ್.ಡಿ. ಆನಂದಕುಮಾರ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

Translate »