ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಜಿಲ್ಲೆ-317ಎ, 8ನೇ ಪ್ರಾಂತದ ಪ್ರಾಂತೀಯ ಸಮ್ಮೇಳನ ಫೆ.3ರಂದು ಮೈಸೂರಿನ ಬಂಬೂ ಬಜಾರ್ ಸಯ್ಯಾಜಿರಾವ್ ರಸ್ತೆ ಹೋಟೆಲ್ ರಿಯೋ ಮೆರಿಡಿಯನ್‍ನಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ಆತಿಥೇಯ ಸಮಿತಿಯ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇಂದಿಲ್ಲಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ಗಳನ್ನು ನೀಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. `ಮರೆಯಾಗುತ್ತಿರುವ ಕುಟುಂಬದ ಸಂಬಂಧಗಳು’ ಘೋಷ ವಾಕ್ಯ ಕುರಿತು ಪ್ರಾಧ್ಯಾಪಕ, ಹಾಸ್ಯ ಭಾಷಣಕಾರ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಲಿದ್ದಾರೆ. ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಸಿ.ಮೋಹನ್‍ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದ ಅಂಗವಾಗಿ ಅಂದು ಹಲವು ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಿನ ಗಾಡಿ ಚೌಕದಲ್ಲಿರುವ ಸರ್ಕಾರಿ ಶಾಲೆಯ ಶೌಚಾಲಯಗಳ ದುರಸ್ತಿಗೆ 45 ಸಾವಿರ ರೂ. ಆರ್ಥಿಕ ನೆರವು, ಹುಟ್ಟಿನಿಂದಲೇ ಅಂಗವಿಕಲನಾಗಿರುವ ಮಂಡ್ಯದ ಕುರುಬರಪುರದ ಯುವ ಮಹದೇವನಿಗೆ ಕಿಡ್ನಿ ಚಿಕಿತ್ಸಾ ವೆಚ್ಚಕ್ಕೆ 25 ಸಾವಿರ ರೂ. ಆರ್ಥಿಕ ನೆರವು, ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ ಬಡ ವಿದ್ಯಾರ್ಥಿ ಕುಮಾರ್‍ಗೆ 25 ಸಾವಿರ, ಹುಯಿಲಾಳು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶೂ ಖರೀದಿಸಲು 15 ಸಾವಿರ ರೂ. ಮೈಕ್‍ಸೆಟ್ ಕೊಳ್ಳಲು 10 ಸಾವಿರ ರೂ. ಆರ್ಥಿಕ ನೆರವು ನೀಡಲಿದ್ದೇವೆ. ಅಲ್ಲದೆ, ಬನ್ನಿಮಂಟಪದ ಲಯನ್ಸ್ ಶಾಲೆಗೆ 20 ಸಾವಿರ ರೂ.ಗಳ ಕಂಪ್ಯೂಟರ್ ವಿತರಣೆ, ರಸ್ತೆಯಲ್ಲಿ ತರಕಾರಿ ಮಾರುವವರ ಅನುಕೂಲಕ್ಕಾಗಿ ಇಬ್ಬರಿಗೆ 20 ಸಾವಿರ ವೆಚ್ಚದಲ್ಲಿ ತಳ್ಳು ಗಾಡಿಗಳ ವಿತರಣೆ ಮಾಡಲಿದ್ದೇವೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಿ.ರೇಣುಕುಮಾರ್ ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ತುಮಕೂರು ಜಿಲ್ಲೆಗಳಿಂದ 600ಕ್ಕೂ ಹೆಚ್ಚು ಲಯನ್ಸ್ ಸದಸ್ಯರು, ಕುಟುಂಬದವರು ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಸಂಸ್ಥೆಯ ಉಪ ಜಿಲ್ಲಾ ಗವರ್ನರ್ ವಿ.ನಾಗರಾಜ್ ಬೈರಿ, ಪ್ರಾಂತೀಯ ಅಧ್ಯಕ್ಷ ಎಂ.ಮೋಹನ್‍ಕುಮಾರ್, ಸಂಯೋಜಕರಾದ ಎನ್.ಕೃಷ್ಣೇಗೌಡ, ಕೆ.ಬಿ.ಭಾಸ್ಕರ್ ಉಪಸ್ಥಿತರಿದ್ದರು.