ಮಾ.18ಕ್ಕೆ ನನ್ನ ನಿರ್ಧಾರ
ಮೈಸೂರು

ಮಾ.18ಕ್ಕೆ ನನ್ನ ನಿರ್ಧಾರ

March 12, 2019

ಮಂಡ್ಯ: ರಾಜಕೀಯದಲ್ಲಿ ಕೊನೆ ಗಳಿಗೆವರೆಗೂ ಏನು ಬೇಕಾದರೂ ಆಗಬಹುದು. ನನ್ನ ನಿರ್ಧಾರ ಏನು ಎನ್ನುವುದನ್ನು ಮಾರ್ಚ್ 18 ರಂದು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಈಗಾಗಲೇ ಊಹಾಪೋಹಗಳು ಬರುತ್ತಿವೆ. ಅವುಗಳನ್ನೆಲ್ಲಾ ನಂಬಬೇಡಿ. ಇವತ್ತು ಸಹ ದೇವಸ್ಥಾನಕ್ಕೆ ಭೇಟಿ ಕೊಟ್ಟು ಬಂದಿದ್ದೇನೆ. ನಾನು ಹೋದ ಕಡೆಯಲ್ಲೆಲ್ಲ ಅಭಿಮಾನಿ ಗಳು ಸೇರಿದಂತೆ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಯಲ್ಲಿ ನಿಲ್ಲಲೇಬೇಕೆಂದು ಒತ್ತಡ ಹಾಕುತ್ತಿದ್ದಾರೆ ಎಂದರು. ನಟ ದರ್ಶನ್ ನನ್ನು ಯಾವಾಗಲೂ ಭೇಟಿ ಮಾಡುತ್ತಾ ಇರುತ್ತೇವೆ. ನೀವು ಆರ್ಡರ್ ಮಾಡಿ ನಾನು ನಿಮ್ಮ ಮಾತನ್ನು ಕೇಳುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.

ದರ್ಶನ್ ನನ್ನ ‘ಮದರ್ ಇಂಡಿಯಾ’ ಅಂತ ಕರೆಯುತ್ತಾರೆ. ಅಂಬರೀಶ್ ಇದ್ದಾಗ ದರ್ಶನ್ ನಮ್ಮ ಕುಟುಂಬದ ಮೇಲೆ ಹೇಗೆ ಪ್ರೀತಿ ಹೊಂದಿದ್ದರೋ, ಈಗಲೂ ಅದೇ ಪ್ರೀತಿ ಹೊಂದಿದ್ದಾರೆ. ಸಿನಿಮಾ ರಂಗದ ಹಲವರು ನನಗೆ ಸಪೊರ್ಟ್ ಮಾಡುತ್ತಾರೆ. ಅದು ಅಂಬರೀಶ್ ಮೇಲೆ ಇಟ್ಟಿರುವ ಪ್ರೀತಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಕಾಂಗ್ರೆಸ್ಸಿಗರ ಜೊತೆ ಮಾತುಕತೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಕಡೆಯಿಂದ ಸ್ಪರ್ಧೆ ಮಾಡಬೇಡಿ ಎಂಬ ಒತ್ತಡ ಬಂದಿಲ್ಲ. ಬೇರೆ ಕಡೆ ಸ್ಪರ್ಧಿಸಿ ಅಂತ ಸಲಹೆ ಕೊಟ್ಟಿದ್ದಾರೆ ಅಷ್ಟೆ ಎಂದರು. ರೇವಣ್ಣ ಹೇಳಿಕೆ ಬಗ್ಗೆ ಸಿಎಂ ಕ್ಷಮೆ ಕೇಳಿರೋದು ಸಂತಸದ ವಿಚಾರವಾಗಿದೆ,ಯಾರೇನೆಂದು ನನ್ನ ವಿರುದ್ದ ಮಾತನಾಡಿದರೂ ಅವರಿಗೇನೂ ಪ್ರಯೋಜನವಾಗಲ್ಲ. ನನಗೆ ವರವಾಗೇ ಪರಿಣಮಿಸಲಿದೆ ಎಂದು ಅವರು ಹೇಳಿದರು.

ಫೇಸ್‍ಬುಕ್ ಪೇಜ್ ತೆರೆದ ಸುಮಲತಾ

ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನರ ಬೆಂಬಲ ಪಡೆಯಲು ಸುಮಲತಾ ಅಂಬರೀಶ್ ಅವರು ತಮ್ಮ ಹೆಸರಿನಲ್ಲಿ ಅಧಿಕೃತ ಫೇಸ್‍ಬುಕ್ ಪೇಜ್‍ವೊಂದನ್ನು ತೆರೆದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸಮರ ಮತ್ತಷ್ಟು ರಂಗೇರಿದೆ. ಸುಮಲತಾ ಅವರು ಈ ಹಿಂದೆಯೇ ಟ್ವಿಟ್ಟರ್ ಖಾತೆ ತೆರೆದಿದ್ದು, ಆಕ್ಟೀವ್ ಆಗಿದ್ದರು. ಇದೀಗ ಫೇಸ್‍ಬುಕ್‍ನಲ್ಲೂ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ನಿರ್ಧರಿಸಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಧಿಕೃತ ಫೇಸ್‍ಬುಕ್ ಪೇಜ್‍ವೊಂದನ್ನು ಸುಮಲತಾ ಅಂಬರೀಶ್ ಅಂತ ಹೆಸರಿನಲ್ಲಿ ತೆರೆಯಲಾಗಿದೆ. ನಾನು ನಿಮ್ಮ ಸುಮಲತಾ ಅಂಬರೀಶ್. ನಾನು ನಿಮಗೆ ಸಾಮಾಜಿಕ ಜಾಲತಾಣದಲ್ಲೂ ಸಿಗುತ್ತೇನೆ. ನಿಮ್ಮ ಜೊತೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಇರುತ್ತೇನೆ. ನನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಪೇಜ್‍ನಲ್ಲಿ ನಿಮ್ಮ ಜೊತೆ ಸಂಪರ್ಕಕ್ಕೆ ಸಿಗುತ್ತೇನೆ ಎಂದು ವಿಡಿಯೋ ಮಾಡಿ ಸುಮಲತಾ ಅವರು ಜನರನ್ನು ಸೆಳೆಯುವ ಹೊಸ ಪ್ಲಾನ್ ಮಾಡಿದ್ದಾರೆ.

ಇಷ್ಟು ದಿನ ಯಾವ ಪಕ್ಷಕ್ಕೆ ಯಾರು ಅಭ್ಯರ್ಥಿ ಅಂತ ಮಂಡ್ಯ ಸುದ್ದಿಯಲ್ಲಿತ್ತು. ಈಗ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಹಲವು ವಿರೋಧದ ನಡುವೆಯೂ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮತ್ತಷ್ಟೂ ಹತ್ತಿರವಾಗಲು ಸುಮಲತಾ ಅವರು ನಿರ್ಧರಿಸಿದ್ದಾರೆ. ಅದಕ್ಕಾಗಿ ಅಧಿಕೃತ ಸಾಮಾಜಿಕ ಜಾಲತಾಣಗಳ ಪೇಜ್‍ಗಳನ್ನು ಸುಮಲತಾ ಅವರ ಕ್ರಿಯೆಟ್ ಮಾಡಿದ್ದಾರೆ.ಸುಮಲತಾ ಅವರು ಈಗಾಗಲೇ ಫೇಸ್‍ಬುಕ್ ನಲ್ಲಿ ವೈಯಕ್ತಿಕ ಖಾತೆಯನ್ನು ಹೊಂದಿದ್ದು, ಈಗ ಚುನಾವಣೆಯ ಹಿನ್ನೆಲೆಯಲ್ಲಿ ಪೇಜ್ ಓಪನ್ ಮಾಡಿದ್ದಾರೆ.

Translate »