ಬೆಳ್ಳಿ ರಥದಲ್ಲಿ ಭಗವಾನ್ ಮಹಾವೀರರ ಮೂರ್ತಿ ಉತ್ಸವ
ಮೈಸೂರು

ಬೆಳ್ಳಿ ರಥದಲ್ಲಿ ಭಗವಾನ್ ಮಹಾವೀರರ ಮೂರ್ತಿ ಉತ್ಸವ

April 18, 2019

ಮೈಸೂರು: ಜೈನರ ಆರಾಧ್ಯ ದೈವ, ಅಹಿಂಸಾ ಪ್ರತಿಪಾದಕ, 24ನೇ ತೀರ್ಥಂಕರ ಭಗವಾನ್ ಮಹಾ ವೀರನ ಜಯಂತಿ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಬುಧವಾರ ಭಗವಾನ್ ಮಹಾವೀರ ಮೂರ್ತಿಯ ಅದ್ಧೂರಿ ಉತ್ಸವ ನಡೆಯಿತು.

ದಿಗಂಬರ ಜೈನ ಸಮಾಜದ ನೇತೃತ್ವದಲ್ಲಿ ಮಹಾವೀರ ಮಂಡಳಿ, ಸಮೀಕ್ಷಾ ಮಿಲನ್, ಮಹಾವೀರ ಸೇವಾ ಸಂಘ ಸೇರಿದಂತೆ ಹಲವು ಸಂಘಟನೆಗಳ ಆಶ್ರಯದಲ್ಲಿ ಉತ್ಸವ ನಡೆಯಿತು. ಮೈಸೂ ರಿನ ಚಂದ್ರಗುಪ್ತ ರಸ್ತೆಯಲ್ಲಿರುವ ಎಂ.ಎಲ್. ಜೈನ್ ಬೋರ್ಡಿಂಗ್ ಹೋಂನಿಂದ ಹೊರಟ ಉತ್ಸವದಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ಭಗ ವಾನ್ ಮಹಾವೀರನ ಬೆಳ್ಳಿ ಪ್ರತಿಮೆ, ಮಹಾ ವೀರನ ಬೃಹತ್ ಪ್ರತಿಮೆಯನ್ನು ಶ್ರದ್ಧಾ ಭಕ್ತಿಯಿಂದ ಕೊಂಡೊಯ್ಯಲಾಯಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಜೈನ ಸಮಾ ಜದ ನೂರಾರು ಮಂದಿ ಜೈ ಮಹಾವೀರ್ ಘೋಷಣೆ ಕೂಗಿದರು. ಚಂದ್ರಗುಪ್ತ ರಸ್ತೆ, ದೊಡ್ಡ ಗಡಿಯಾರ ವೃತ್ತ, ಗಾಂಧಿ ವೃತ್ತ, ಅಶೋಕ ರಸ್ತೆ, ನೆಹರು ವೃತ್ತ, ಇರ್ವಿನ್ ರಸ್ತೆ, ಮಹಾವೀರನಗರ ಮೈನ್ ರಸ್ತೆ ಮೂಲಕ ನಡೆದ ಉತ್ಸವ ಎಂ.ಎಲ್.ಜೈನ್ ಬೋರ್ಡಿಂಗ್ ಹೋಂಗೆ ವಾಪಸಾಯಿತು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‍ಕುಮಾರ್ ಜೈನ್, ಕಾರ್ಯದರ್ಶಿ ಅಜಿತ್‍ಕುಮಾರ್ ಜೈನ್, ಮಹಾವೀರ ಮಂಡಳಿ ಅಧ್ಯಕ್ಷ ಧರಣೇಂ ದ್ರನ್, ಮಹಾವೀರ ಸೇವಾ ಸಂಘದ ಅಧ್ಯಕ್ಷ ಅನಂತಪ್ರಸಾದ್ ಇನ್ನಿತರರು ಉತ್ಸವದ ನೇತೃತ್ವ ವಹಿಸಿದ್ದರು. ಬಳಿಕ ಎಂ.ಎಲ್.ಜೈನ್ ಬೋರ್ಡಿಂಗ್ ಹೋಂ ನಲ್ಲಿ ಮಹಾವೀರಸ್ವಾಮಿಯ ಪ್ರತಿಮೆಗೆ ಪ್ರಥಮ ಕಲಶ, ಎಳನೀರು, ಕಬ್ಬಿನ ಹಾಲು, ಕ್ಷೀರ, ಕಲ್ಕಚೂರ್ಣ, ಅರಿಶಿನ, ಶ್ರೀಗಂಧ, ಚಂದನ, ಕಷಾಯ, ಅಷ್ಠ ಗಂಧ, ಕೇಸರಿ ಮತ್ತು ಕನಕಪುಷ್ಪಗಳಿಂದ ಅಭಿಷೇಕ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಸಮೀಕ್ಷಾ ಮಿಲನ್ ವತಿಯಿಂದ ಮಕ್ಕಳಿಗೆ ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು.

Translate »