ಯಾವುದೇ ಸಮುದಾಯಕ್ಕೆ ಸರ್ಕಾರದ ಸವಲತ್ತು ಕಲ್ಪಿಸಲು ಓಟ್‍ಬ್ಯಾಂಕ್ ರಾಜಕಾರಣ ಸಲ್ಲ: ಶಾಸಕ ಎಲ್.ನಾಗೇಂದ್ರ
ಮೈಸೂರು

ಯಾವುದೇ ಸಮುದಾಯಕ್ಕೆ ಸರ್ಕಾರದ ಸವಲತ್ತು ಕಲ್ಪಿಸಲು ಓಟ್‍ಬ್ಯಾಂಕ್ ರಾಜಕಾರಣ ಸಲ್ಲ: ಶಾಸಕ ಎಲ್.ನಾಗೇಂದ್ರ

July 30, 2018

ಮೈಸೂರು: ಸರ್ಕಾರಗಳು ಯಾವುದೇ ಸಮುದಾಯಕ್ಕೆ ಸವಲತ್ತು ಕಲ್ಪಿಸಲು ತಾರತಮ್ಯ, ಓಟ್‍ಬ್ಯಾಂಕ್ ರಾಜಕಾರಣ ಮಾಡಬಾರದು ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ನಗರದ ಚಂದ್ರಗುಪ್ತ ರಸ್ತೆಯ ಎಂ.ಎಲ್.ಜೈನ್ ಬೋರ್ಡಿಂಗ್ ಹೋಂನ ಎಂ.ಎಲ್.ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟಬಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ `ಮೈಸೂರು ನಗರದ ಜೈನ್ ಮಹಿಳಾ ಸ್ವ-ಸಹಾಯ ಸಂಘಗಳ ಸಮಾವೇಶ’ದಲ್ಲಿ ಮಾತನಾಡಿದ ಅವರು, ಜೈನ ಸಮುದಾಯವು ಶಾಂತಿ, ನೆಮ್ಮದಿಯಿಂದ ಯಾರಿಗೂ ತೊಂದರೆಕೊಡದೆ ಸಮಾಜದಲ್ಲಿ ಸೌಹಾರ್ದಯುತ ಜೀವನ ನಡೆಸುತ್ತಿದೆ. ಈ ಸಮುದಾಯಕ್ಕೆ ಸರ್ಕಾರದ ಯೋಜನೆಗಳು, ಸವಲತ್ತುಗಳು ಸಮರ್ಪಕವಾಗಿ ತಲುಪಬೇಕು. ಸರ್ಕಾರಗಳು ಯಾವುದೇ ಸಮುದಾಯಕ್ಕೆ ಸವಲತ್ತು ಕಲ್ಪಿಸಲು ತಾರತಮ್ಯ, ಓಟ್‍ಬ್ಯಾಂಕ್ ರಾಜಕಾರಣ ಮಾಡಬಾರದು. ಇಂಥ ಪ್ರವೃತ್ತಿಯನ್ನು ಕೈಬಿಡಬೇಕು ಎಂದು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿರವರು ಪ್ರಧಾನಮಂತ್ರಿಯಾಗಿದ್ದಾಗ ಸ್ವ-ಸಹಾಯ ಸಂಘಗಳನ್ನು ಆರಂಭಿಸಿ, ಅವುಗಳ ಏಳಿಗೆಗೆ ಶ್ರಮಿಸಿದರು. ಹಾಗೆಯೇ ರಾಜ್ಯದಲ್ಲಿ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾಗಿದ್ದ ವೇಳೆ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಹಾಗಾಗಿ ಸಾಕಷ್ಟು ಅಭಿವೃದ್ಧಿಯಾದವು. ಇತ್ತೀಚಿನ ದಿನಗಳಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸ್ಮರಿಸಿದರು.

ಜೈನ ಸಮಾಜವನ್ನು ಪ್ರವರ್ಗ 2ಬಿಗೆ ಸೇರಿಸಿದರೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯ ದೊರೆಯಲಿದೆ. ಜತೆಗೆ ಮಕ್ಕಳ ಶಿಕ್ಷಣದ ದೃಷ್ಠಿಯಿಂದಲೂ ಸಹಕಾರಿಯಾಗುತ್ತದೆ. ಹಾಗಾಗಿ 2ಬಿಗೆ ಸೇರಿಸುವಂತೆ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟಬಲ್ ಟ್ರಸ್ಟ್‍ನ ನೇಮಿರಾಜ ಆರಿಗರವರು ಮನವಿ ಮಾಡಿದ್ದು, ಬೇಡಿಕೆ ಕುರಿತು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದು, 2ಬಿ ವರ್ಗಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ನನ್ನ ಕಚೇರಿ ಬಳಸಿಕೊಳ್ಳಿ: ನಮ್ಮ ಕಚೇರಿಯಲ್ಲಿ ಸುಮಾರು 250 ಮಂದಿ ಕುಳಿತು ಸಭೆ ಮಾಡಬಹುದಾಗಿದ್ದು, ಕಾರ್ಯಕ್ರಮ ನಡೆಸಲು ಬೇಕಾದ ಎಲ್ಲಾ ಸೌಲಭ್ಯವಿದೆ. ಹಾಗಾಗಿ ಸ್ವಸಹಾಯ ಸಂಘದವರು ಸಭೆಗಳಿಗೆ ಕಚೇರಿ ಬಳಸಿಕೊಳ್ಳಬಹುದು ಎಂದು ಹೇಳಿದರು.

ಇದಕ್ಕೂ ಮುನ್ನ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನೇಮಿರಾಜ ಆರಿಗ ಮಾತನಾಡಿ, ಸರ್ಕಾರದಿಂದ ಸಿಗಬೇಕಾದ ಯಾವುದೇ ಸೌಲಭ್ಯಗಳು ಜೈನ ಸಮುದಾಯಕ್ಕೆ ಸರಿಯಾಗಿ ದೊರೆಯುತ್ತಿಲ್ಲ. ನಮ್ಮ ಸಮುದಾಯದಲ್ಲಿ ಕೂಲಿ ಮಾಡಿ ಜೀವನ ನಡೆಸುವವರು ಸಂಖ್ಯೆ ಹೆಚ್ಚಿದ್ದು, ಶುಲ್ಕದಲ್ಲಿ ವಿನಾಯಿತಿ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸಾಮಾಜಿಕ, ಆರ್ಥಿಕವಾಗಿ ಸದೃಢರಾಗಲು ಜೈನ ಸಮಾಜವನ್ನು 2ಬಿಗೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕೆಂದು ಶಾಸಕ ಎಲ್.ನಾಗೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜೈನ ವಿದ್ವಾಂಸರಾದ ಸರಸ್ವತಿ ವಿಜಯಕುಮಾರ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವ-ಸಹಾಯ ಸಂಘದ ಜವಬ್ದಾರಿಗಳನ್ನು ಶ್ರದ್ದೆ, ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಸಂಘದಲ್ಲಿ ನಾಯಕತ್ವದ ಮನೋಭಾವ ಬಿಟ್ಟು, ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು. ಈ ನಿಟ್ಟಿನಲ್ಲಿ ಮಹಿಳಾ ಸ್ವ-ಸಹಾಯ ಸಂಘ ಹೆಜ್ಜೆಯನ್ನಿಟ್ಟಿದೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ‘ಕರ್ನಾಟಕ ಜೈನ್ ಪತ್ರಿಕೆ’ ಬಿಡುಗಡೆಗೊಳಿಸಲಾಯಿತು. ಕನಕಗಿರಿ ಶ್ರೀ ಕ್ಷೇತ್ರ ಜೈನಮಠದ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‍ಕುಮಾರ್, ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಶೀಲಾ ಅನಂತರಾಜ್, ಶ್ರೀ ಶಾಂತಿನಾಥ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ಸುರೇಶ್ ಜೈನ್, ಎಂ.ಎಲ್.ಜೈನ್ ಬೋರ್ಡಿಂಗ್ ಹೋಂ ಕಾರ್ಯದರ್ಶಿ ಶ್ಯಾಮಲ ಮದನ್ ಕುಮಾರ್, ಮೈವಿವಿ ನಿವೃತ್ತ ಜೈನಶಾಸ್ತ್ರ ಪ್ರಾಧ್ಯಾಪಕರಾದ ಜ್ವಾಲಾ ಸುರೇಶ್, ಕರ್ನಾಟಕ ಜೈನ ಪತ್ರಿಕೆ ಸಂಪಾದಕ ಶರದ್‍ವಿಜಯ್, ಸಲಹಾ ಸಮಿತಿ ಅಧ್ಯಕ್ಷೆ ಶೀಲಾ ಜ್ವಾಲಕುಮಾರ್, ಉಪಾಧ್ಯಕ್ಷೆ ಅನಿತಾ ರತನ್ ಕುಮಾರ್, ಮೈಸೂರು ವಲಯ ಸಂಚಾಲಕಿ ಸುಮಾ ದಯಾಕರ್ ಮತ್ತಿತರರು ಉಪಸ್ಥಿತರಿದ್ದರು.

Translate »