ಮೈಸೂರು: ಹನ್ನೆರಡು ವರ್ಷದ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಭರವಸೆ ನೀಡಿದಂತೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮೇದರ್ ಬ್ಲಾಕ್ ಮೈಸೂರು ಸಾಮಿಲ್ ಮುಂಭಾಗದಲ್ಲಿ ಕಳೆದ 45 ವರ್ಷಗಳಿಂದ ವಾಸವಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಬೇಕೆಂದು ರಾಜ್ಯ ದಲಿತ ವಿಮೋಚನಾ ಸೇನೆ ಮನವಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಸೇನೆಯ ವಿಭಾಗೀಯ ಅಧ್ಯಕ್ಷ ಹನುಮಂತಯ್ಯ ಅವರು 2007ರಲ್ಲಿ ತಾವು ಮುಖ್ಯಮಂತ್ರಿ ಆಗಿದ್ದಾಗ, ನಗರದ ವಾರ್ಡ್ 34ರ ವ್ಯಾಪ್ತಿಯಲ್ಲಿ ಲಕ್ಷಮ್ಮ ಎಂಬುವವರ ಮನೆಯಲ್ಲಿ ವಾಸ್ತವ್ಯ ಮಾಡಿ ಆತಿಥ್ಯ ಸ್ವೀಕರಿಸಿ, ಕೊಳಚೆ ಪ್ರದೇಶದ ಎಲ್ಲಾ ಕುಟುಂಬಗಳಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಿರಿ, ಆದರೆ ಭರವಸೆ ಇಲ್ಲಿಯವರೆಗೂ ಮರೀಚಿಕೆಯಾಗಿಯೇ ಉಳಿಯಿತು. ಆದರೀಗ ತಾವು ಮತ್ತೆ ರಾಜ್ಯ ಮುಖ್ಯಮಂತ್ರಿಯಾಗಿರುವುದು ನಮ್ಮಲ್ಲಿ ಆಶಾಭಾವನೆಯನ್ನುಂಟು ಮಾಡಿದೆ. ಘೋಷಿತ ಕೊಳಚೆ ಪ್ರದೇಶದ ಒಟ್ಟು ಅಳತೆ 70ಅಡಿ ಅಗಲ 700ಮೀಟರ್ ಉದ್ದದ ಅಂದಾಜಿನ 300ಮೀಟರ್ ಜಾಗವನ್ನು ಪಡೆದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮನೆ ನಿರ್ಮಿಸಿಕೊಡಲು ವಿಳಂಬ ನೀತಿ ಅನುಸರಿಸುತ್ತಿದೆ. ಘೋಷಿತ ಕೊಳಚೆ ಪ್ರದೇಶಕ್ಕೆ ನಗರಪಾಲಿಕೆಯಿಂದ ನಿರೀಕ್ಷಣಾ ಪತ್ರ ಪಡೆದು 70ಅಡಿ ಅಗಲ 700ಮೀ ಉದ್ದದ ಜಾಗದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ 2 ಅಂಗನವಾಡಿ ಕೇಂದ್ರ, ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, 4 ದೇವಸ್ಥಾನಗಳನ್ನು ಕಟ್ಟಿಸಲಾಗಿದೆ. ಇದೇ ಜಾಗದಲ್ಲಿ ನಾಲ್ವರು ಖಾಸಗಿ ವ್ಯಕ್ತಿಗಳು 40*60 ಅಳತೆ ನಿವೇಶನದಲ್ಲಿ ಮನೆ ಕಟ್ಟಿಕೊಂಡು ಪಾಲಿಕೆ ವತಿಯಿಂದ ಖಾತಾ ಪತ್ರ ಪಡೆದುಕೊಂಡಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಇತ್ತ ಗಮನಹರಿಸಿ ವಸತಿ ಯೋಜನೆಯಡಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಹನುಮಂತಯ್ಯ ಮನವಿ ಮಾಡಿದ್ದಾರೆ.ನಾವು ವಾಸವಿರುವ ಸ್ಥಳದಲ್ಲಿ ಮನೆ ನಿರ್ಮಾಣ ಆಗುವವರೆಗೂ ಘೋಷಿತ ಪ್ರದೇಶದಿಂದ ತೆರವು ಮಾಡಿಸದಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿರುವ ಅವರು ಈಗಾಗಲೇ ಸಿದ್ಧಪಡಿಸಿರುವ ಫಲಾನುಭವಿಗಳ ಆಯ್ಕೆ ಪಟ್ಟಿ ಲೋಪ-ದೋಷದಿಂದ ಕೂಡಿದ್ದು ಪುನರ್ ಪರಿಶೀಲಿಸುವಂತೆ ಅವರು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.