ಲಘು ವಾಹನಗಳಿಗೆ ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರ ಮುಕ್ತ
ಕೊಡಗು

ಲಘು ವಾಹನಗಳಿಗೆ ಮಡಿಕೇರಿ-ಮಂಗಳೂರು ಹೆದ್ದಾರಿ ಸಂಚಾರ ಮುಕ್ತ

August 11, 2018

ಮಡಿಕೇರಿ: ಕೆಲವೆಡೆ ಬಿರುಕು ಬಿಟ್ಟಿದ್ದರೂ ಕೂಡ ಮಡಿಕೇರಿ-ಮಂಗ ಳೂರು ಹೆದ್ದಾರಿಯನ್ನು ಅನಿವಾರ್ಯ ಕಾರಣಗಳಿಂದಾಗಿ ಪ್ರಯಾಣಿಕ ಮತ್ತು ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಅಧಿಕ ಭಾರ ಹೊತ್ತ ಲಾರಿಗಳು, ಶಿಪ್ಪಿಂಗ್ ಕಾರ್ಗೋ, ಮಲ್ಟಿ ಆಕ್ಸಿಲ್, ಲಾಂಗ್ ಚಾಸೀಸ್ ಮತ್ತು ಬುಲ್ಲೆಟ್ ಟ್ಯಾಂಕರ್ ಗಳ ಸಂಚಾರವನ್ನು ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ನಿಷೇಧಿಸಲಾಗಿದೆ.

ಅಡುಗೆ ಅನಿಲ, ಪೆಟ್ರೋಲ್ ಉತ್ಪನ್ನ, ಪಡಿತರ ಹಾಗೂ ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಹೆದ್ದಾರಿ ಸಂಚಾರ ಮುಕ್ತವಾಗಿರಲಿದೆ. ಹೆದ್ದಾರಿ ಕುಸಿದಿರುವ ಸ್ಥಳದಲ್ಲಿ ತಾತ್ಕಾಲಿಕ ದುರಸ್ಥಿ ಮಾಡಲಾಗಿದ್ದು, ಬೃಹತ್ ಟಾರ್ಪಲ್ ಹೊದಿಸಿ ಭೂಕುಸಿದ ಸ್ಥಳಕ್ಕೆ ನೀರು ಹರಿಯದಂತೆ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ 1. ಕಿ.ಮೀ. ದೂರದಲ್ಲಿ ಹೆದ್ದಾರಿ ಕುಸಿತ ಗೊಂಡ ಪರಿಣಾಮ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಆದರೆ ಮಡಿಕೇರಿ- ಮೇಕೇರಿ-ತಾಳತ್ತಮನೆ ಬೈಪಾಸ್ ರಸ್ತೆ ತೀರಾ ಕಿರಿದಾಗಿದ್ದು, ಲಾರಿ, ಬಸ್‍ಗಳು, ಕ್ಲಬ್ ಕ್ಲಾಸ್ ಹವಾನಿಯಂತ್ರಿತ ಬಸ್‍ಗಳ ಸಂಚಾರ ಈ ಬದಲಿ ರಸ್ತೆಯಲ್ಲಿ ಅಸಾಧ್ಯವಾದ ಕಾರಣ ಮಂಗಳೂರು ರಸ್ತೆಯಲ್ಲಿ ಲಘು ಮತ್ತು ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಮರು ಅವಕಾಶ ಕಲ್ಪಿಸಲಾಗಿದೆ.

ಮಳೆ ಹಾನಿ: ಜಿಲ್ಲೆಯ ಕೆಲವೆಡೆ ಮಳೆಯ ಆರ್ಭಟ ತಗ್ಗಿದೆಯಾದರು, ಗ್ರಾಮೀಣ ಭಾಗ ಗಳಲ್ಲಿ ಬಿರುಸಿನ ಮಳೆ ಸುರಿದಿರುವ ವರದಿ ಯಾಗಿದೆ. ಇದರಿಂದಾಗಿ ಭತ್ತ ಸೇರಿದಂತೆ ಆರ್ಥಿಕ ಬೆಳೆಗಳಿಗೆ ಹಾನಿ ಸಂಭವಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕಕ್ಕಬ್ಬೆ ವ್ಯಾಪ್ತಿಯಲ್ಲಿ 8 ಇಂಚು ಮಳೆ ಸುರಿದಿದ್ದು, ಪರಿಣಾಮವಾಗಿ ನಾಲಾಡಿ ಬಳಿ ಕಕ್ಕಬ್ಬೆ ಹೊಳೆ ಉಕ್ಕಿ ಹರಿದು ಕಕ್ಕಬ್ಬೆ-ನಾಲಾಡಿ ಸಂಪರ್ಕ ರಸ್ತೆ ಮುಳುಗಡೆಗೊಂಡಿತ್ತು. ನಾಲಾಡಿಯ ಇಗ್ಗುತ್ತಪ್ಪ ದೇವಾಲಯದ ಆವರಣ ಕೂಡ ನೀರಿನಿಂದ ಆವೃತ್ತವಾಗಿ ತ್ತಲ್ಲದೇ, ಸುತ್ತ-ಮುತ್ತಲ ಕಾಫಿ ತೋಟಗಳಿಗೂ ಹೊಳೆಯ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ.

ಭಾಗಮಂಡಲ-ಅಯ್ಯಂಗೇರಿ ಸಂಪರ್ಕ ರಸ್ತೆ ಮುಳುಗಿದ ಸ್ಥಿತಿಯಲ್ಲಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನಾಪೋಕ್ಲು-ಬೊಳಿಬಾಣೆ ಸಂಪರ್ಕ ಸೇತುವೆ ಕಾವೇರಿ ನದಿ ಪ್ರವಾಹಕ್ಕೆ ಮುಳುಗಡೆಯಾಗಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ಮಕ್ಕಂದೂರು ಬಳಿ ಕೃಷಿ ಗದ್ದೆಗಳಿಗೆ ತೋಡು ನೀರು ನುಗ್ಗಿ ಸಸಿ ಮಡಿ ನಾಶವಾಗಿದೆ.

Translate »