ಬಿರುಗಾಳಿ ಮಳೆಗೆ ಕಾವೇರಿ ತವರು ತತ್ತರ
ಕೊಡಗು

ಬಿರುಗಾಳಿ ಮಳೆಗೆ ಕಾವೇರಿ ತವರು ತತ್ತರ

August 14, 2018

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಮರೋಪಾದಿಯಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. 6 ಜೆಸಿಬಿ ಯಂತ್ರಗಳು ಸುರಿಯುವ ಮಳೆಯ ನಡುವೆಯೇ ಹೆದ್ದಾರಿ ಸಂಚಾರ ಸುಗಮಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದರೆ, ಮಳೆ ಯಿಂದಾಗಿ ಮತ್ತಷ್ಟು ಮಣ್ಣು ಹೆದ್ದಾರಿಗೆ ಬಿದ್ದ ಬಗ್ಗೆ ವರದಿಯಾಗಿದೆ.

ಇದರಿಂದಾಗಿ ಮಡಿಕೇರಿ-ಮಂಗಳೂರು ಕಡೆಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ದಿನವಿಡಿ ಹೆದ್ದಾರಿಯಲ್ಲೇ ಕಾಲ ಕಳೆಯುವಂತಾಗಿದೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಒಟ್ಟು 4 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಅಂತರ್ಜಲ ಉಕ್ಕೇರಿದ್ದರಿಂದಾಗಿ ಹೆದ್ದಾರಿ ಯ ತಡೆಗೋಡೆ ಕುಸಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆದ್ದಾರಿ ಯಲ್ಲಿ ಭೂಕುಸಿತವಾದ ಸ್ಥಳಕ್ಕೆ ರಾಜ್ಯ ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್, ಶಾಸಕ ಕೆ.ಜಿ.ಬೋಪಯ್ಯ, ಎಂಎಲ್‍ಸಿ ಸುನೀಲ್ ಸುಬ್ರಮಣಿ ಮತ್ತಿತರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಡೆಬಿಡದೆ ಸುರಿಯುತ್ತಿರುವ ಮಳೆ ಯಿಂದಾಗಿ ಜಿಲ್ಲೆಯ ಹಲವೆಡೆ ಸಂಪರ್ಕ ರಸ್ತೆಗಳು ಭೂ ಕುಸಿತದಿಂದ ಬಂದ್ ಆಗಿರುವ ಬಗ್ಗೆಯೂ ವರದಿಯಾಗಿದೆ. ಮುಕ್ಕೋಡ್ಲು-ಹಮ್ಮಿಯಾಲ ರಸ್ತೆಯುದ್ದಕ್ಕೂ ಭೂ ಕುಸಿದು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಗ್ರಾಮೀಣ ಭಾಗದ ಜನರು ಭೂಕುಸಿತಗೊಂಡ ಸ್ಥಳದ ಮೂಲಕವೇ ಪ್ರಯಾಸ ಪಡುತ್ತಾ ತಮ್ಮ ಪ್ರತಿನಿತ್ಯದ ಕೆಲಸಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರೀ ಮಳೆಯ ಕಾರಣ ಈಗಾಗಲೇ ಕೊಡಗು ಜಿಲ್ಲೆಯನ್ನು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶನದಂತೆ ‘ಹೈ-ಅಲರ್ಟ್’ ಎಂದು ಘೋಷಿಸಲಾಗಿದ್ದು, ಪ್ರಕೃತಿ ವಿಕೋಪಗಳ ಸರಣಿ ಅನಾಹುತ ಗಳು ಘಟಿಸಿದೆ. ಕಾಟಕೇರಿ ಸಮೀಪ ಪತ್ರಿಕೆ ಛಾಯಾಗ್ರಾಹಕ ಲೋಕೇಶ್ ಎಂಬುವರ ಮನೆಯ ಗೋಡೆ ಕುಸಿದು ಅಪಾರ ಹಾನಿ ಸಂಭವಿಸಿದೆ. ಮಡಿಕೇರಿ ಭಗವತಿ ನಗರ ದಲ್ಲಿ ಮನೆಯೊಂದರ ಮೇಲೆ ಬರೆ ಕುಸಿದು ಹಾನಿ ಸಂಭವಿಸಿದ್ದು, ಮನೆ ಮಂದಿ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಕುಸಿದ ಬರೆಯ ನಡುವೆ ಭಾರಿ ಪ್ರಮಾಣದ ಅಂತ ರ್ಜಲ ಉಕ್ಕೇರುತ್ತಿದ್ದು, ದಿಲೀಪ್ ಎಂಬುವ ರಿಗೆ ಸೇರಿದ ಮನೆಯ ನಡುವೆ ಚರಂಡಿ ತೋಡಿ ನೀರನ್ನು ಹರಿಯ ಬಿಡಲಾಗುತ್ತಿದೆ.

ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯ ಕೆದಕಲ್ ಬಳಿ ಭಾರಿ ಭೂ ಕುಸಿತ ಉಂಟಾಗಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಮಾರ್ಗದಲ್ಲೂ ನೂರಾರು ವಾಹನಗಳು ದಾರಿಯುದ್ದಕ್ಕೂ ಸಾಲುಗಟ್ಟಿ ನಿಂತಿದ್ದು, ಹೆದ್ದಾರಿ ತೆರವು ಕಾರ್ಯವನ್ನು ಸಮರೋ ಪಾದಿಯಲ್ಲಿ ಕೈಗೊಳ್ಳಲಾಯಿತು. ಆ ಬಳಿಕ ಮಡಿಕೇರಿ-ಕುಶಾಲನಗರ ವಾಹನ ಸಂಚಾರ ಸುಗಮಗೊಂಡಿತು. ಭಾರಿ ಗಾಳಿಗೆ ಹಲವಾರು ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್ ಗಳು, ನೆಲಕ್ಕುರುಳಿದ್ದು, ಗ್ರಾಮೀಣ ಪ್ರದೇಶ ಗಳು ಕಳೆದ 1 ವಾರದಿಂದ ಕತ್ತಲಲ್ಲಿ ಮುಳು ಗಿರುವ ಬಗ್ಗೆ ವರದಿಯಾಗಿದೆ.

ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಭಾಗ ಮಂಡಲ – ಅಯ್ಯಂಗೇರಿ ರಸ್ತೆಯ ಮೇಲೆ 5 ಅಡಿ ನೀರು ಹರಿಯುತ್ತಿದೆ. ತ್ರಿವೇಣಿ ಸಂಗಮದಲ್ಲೂ ನೀರಿನ ಪ್ರಮಾಣ ಏರಿಕೆ ಯಾಗಿದ್ದು, ಯಾವುದೇ ಕ್ಷಣದಲ್ಲೂ ಭಾಗ ಮಂಡಲ – ತಲಕಾವೇರಿ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ. ನಾಪೋಕ್ಲು-ಬೊಳಿ ಬಾಣೆ ರಸ್ತೆ ಕೂಡ ಬಂದ್ ಆಗಿದ್ದು, ಭತ್ತದ ಗದ್ದೆಗಳು ಪ್ರವಾಹದಲ್ಲಿ ಮುಳುಗಿದೆ.

ಮಡಿಕೇರಿಗೆ ಈವರೆಗೆ 160 ಇಂಚು ಮಳೆ ಸುರಿದಿದ್ದು, ತಲಕಾವೇರಿಗೆ ದಾಖಲೆಯ 250 ಇಂಚು ಮಳೆಯಾಗಿದೆ. ಕೊಡಗು ಜಿಲ್ಲೆಗೆ ಈಗಾಗಲೇ ಸರಾಸರಿ 150 ಇಂಚಿಗೂ ಅಧಿಕ ಮಳೆಯಾಗಿದ್ದು, ವಾಡಿಕೆ ಮಳೆಯನ್ನೇ ಮೀರಿಸಿದೆ. ಜಿಲ್ಲೆಯಾ ದ್ಯಂತ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಪ್ರಕೃತಿ ವಿಕೋಪ ಮತ್ತು ಅನಾಹುತಗಳ ಸರಣಿಯೂ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಅತಿವೃಷ್ಟಿಯಿಂದಾಗಿ ಜಿಲ್ಲೆಯ ಜನತೆ ತತ್ತರಿಸಿದ್ದು, ಕಾವೇರಿ ತವರು ಸಂಪೂರ್ಣ ಸ್ತಬ್ಧಗೊಂಡಿದೆ.

Translate »