ರಾಜ್ಯದಲ್ಲಿ ವಾಸ್ತುದೋಷ ಸರ್ಕಾರ
ಕೊಡಗು

ರಾಜ್ಯದಲ್ಲಿ ವಾಸ್ತುದೋಷ ಸರ್ಕಾರ

August 14, 2018

ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ‘ವಾಸ್ತು’ ಪ್ರಕಾರವಾಗಿ ನಡೆಯುತ್ತಿದ್ದು, ಇದೊಂದು ವಾಸ್ತುದೋಷವಿರುವ ಸರ್ಕಾರ ಎಂದು ಬಿಜೆಪಿ ಹಿರಿಯ ಮುಖಂಡ ಆರ್. ಅಶೋಕ್ ರಾಜ್ಯ ಸರಕಾರವನ್ನು ಟೀಕಿಸಿದ್ದಾರೆ.

ಕೊಡಗು ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಆರ್.ಅಶೋಕ್, ಮಡಿಕೇರಿಗೆ ಆಗಮಿಸಿ ಪಟ್ಟಣ ಪಂಚಾಯ್ತಿ ಚುನಾವಣೆಗಳ ಕುರಿತು ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಸೂಪರ್ ಸಿಎಂ ಹೆಚ್.ಡಿ.ರೇವಣ್ಣ ನಿಂಬೆಹಣ್ಣು ಇಟ್ಟು ಕೊಂಡು ವಿಧಾನಸಭೆ ಪ್ರವೇಶ ಮಾಡುತ್ತಾರೆ. ಈ ಸರ್ಕಾರದಲ್ಲಿ ರಾಹುಕಾಲದಲ್ಲಿ ಮಸೂದೆಗಳು ಅಂಗೀಕಾರ ಆಗಲ್ಲ. ಹೀಗಾಗಿ ಇದೊಂದು ವಾಸ್ತುದೋಷ ಸರ್ಕಾರ ಎಂದು ವ್ಯಂಗ್ಯವಾಡಿದರು.

ವಾಸ್ತು ದೋಷದ ನೆಪದೊಡ್ಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಅಧಿಕೃತ ನಿವಾಸಕ್ಕೆ ಪ್ರವೇಶಿಸಿಲ್ಲ. ಸಚಿವ ಹೆಚ್.ಡಿ.ರೇವಣ್ಣ ಸರಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದರು. ಅಖಂಡ ಕರ್ನಾಟಕ ತತ್ವದ ಅಡಿಯಲ್ಲಿ ಬಿಜೆಪಿ ಆಡಳಿತ ನಡೆಸಿದೆ. ಆದರೆ, ಜೆಡಿಎಸ್ – ಕಾಂಗ್ರೆಸ್ ಸರ್ಕಾರ ಮಾತ್ರವೇ ಒಡೆದು ಆಳುವ ತತ್ವದ ಅಡಿಯಲ್ಲಿ ರಾಜಕೀಯ ಆಟ ಆಡುತ್ತಿದೆ ಎಂದೂ ಅಶೋಕ್ ಟೀಕಿಸಿದರು.

ಗಣೇಶನಿಗೆ ಟ್ಯಾಕ್ಸ್: ಗಣೇಶ ಉತ್ಸವ ಆಚರಣೆಗೆ ಬಿಬಿಎಂಪಿ ಟ್ಯಾಕ್ಸ್ ಹಾಕಲು ಹೊರಟಿದೆ. ಇದು ಬಿಬಿಎಂಪಿಯ ತುಘಲಕ್ ಆಡಳಿತವಾಗಿದ್ದು, ದೇವರಿಗೆ ಟ್ಯಾಕ್ಸ್ ಹಾಕಲು ಹೊರಟಿರುವ ಬಿಬಿಎಂಪಿ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್-ಕಾಂಗ್ರೆಸ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಮೂಲಕ ಎದುರಿಸುವುದಾಗಿ ಹೇಳಿದ್ದರು. ಆದರೆ ಚುನಾವಣೆ ಎದುರಿಸುವ ವಿಚಾರದಲ್ಲಿ 2 ಪಕ್ಷಗಳಿಗೆ ಪರಸ್ಪರ ಹೊಂದಾಣಿಕೆಯೇ ಆಗುತ್ತಿಲ್ಲ. ದೇವೇಗೌಡರು ಕಾಂಗ್ರೆಸ್ ಅನ್ನು ಅವನತಿಯ ಹಾದಿಯಲ್ಲಿರುವ ಪಕ್ಷ ಎಂದು ಟೀಕಿಸಿದರೇ, ಇತ್ತ ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತು ಸ್ವತಂತ್ರವಾಗಿ ಚುನಾವಣೆ ಎದುರಿಸಲು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುಮತ ಪಡೆಯುತ್ತದೆ ಎಂದು ಆರ್ ಅಶೋಕ್ ಭವಿಷ್ಯ ನುಡಿದರು.

ಸಾಲಮನ್ನಾ ಮಾಡಿದ್ದು ಬಿಜೆಪಿಯ ಹೊಟ್ಟೆ ಉರಿಗೆ ಕಾರಣ ವಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದು ತೀರಾ ಹಾಸ್ಯಾಸ್ಪದ. ಮುಖ್ಯಮಂತ್ರಿಗಳ ಸಾಲಮನ್ನಾ ಘೋಷಣೆಯಿಂದ ರೈತರಿಗೆ ಅರ್ಧಂಬರ್ಧ ಪ್ರಯೋಜನವಾಗಿದೆ ಅಷ್ಟೆ.

ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಬೀದಿಗಿಳಿದು ಹೋರಾಟ ಮಾಡಿದ್ದು ಬಿಜೆಪಿಯೇ ಹೊರತು, ಜೆಡಿಎಸ್ -ಕಾಂಗ್ರೆಸ್‍ನವರಲ್ಲ ಎಂದು ಆರ್. ಅಶೋಕ್ ಹೇಳಿದರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Translate »