ಮೈಸೂರು: ಮಾ.4ರಂದು ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಮಹಾ ಶಿವರಾತ್ರಿ ಸಂದರ್ಭದಲ್ಲಿ ಕೆಲವು ಯುವಕರು ಅನಾವಶ್ಯಕವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ತಿರುಗಾಡುತ್ತಾ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಹೆಂಗಸರು, ಮಕ್ಕಳು, ವೃದ್ಧರನ್ನು ಕೀಟಲೆ ಮಾಡುವುದು, ಸಾರ್ವಜನಿಕರ ಶಾಂತಿ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವವರ ಹಾಗೂ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಾತ್ರಿ ಜಾಗರಣೆ ಸಮಯದಲ್ಲಿ ಮನೆಗಳ ಮುಂದೆ ಹೂ ಕುಂಡಗಳನ್ನು ಒಡೆದು ಹಾಕುವುದು, ಗಿಡಗಳಿಂದ ಹೂಗಳನ್ನು ಕೀಳುವುದು, ಮರಗಳಿಂದ ಹಣ್ಣು, ಎಳನೀರನ್ನು ಕೀಳುವುದು, ಅಂಗಡಿಗಳ ಬೋರ್ಡ್‍ಗಳನ್ನು ಬದಲಾವಣೆ ಮಾಡುವುದು, ಪಾನಮತ್ತರಾಗಿ ವಾಹನಗಳನ್ನು ಜೋರಾಗಿ ಓಡಿಸಿ, ಪಾದಚಾರಿಗಳಿಗೆ ಭಯವನ್ನುಂಟು ಮಾಡುವುದು, ರಸ್ತೆ ಮಧ್ಯೆ ಕಲ್ಲುಗಳನ್ನು ಇಡುವುದು, ಖಾಲಿ ಬಾಟಲ್‍ಗಳನ್ನು ರಸ್ತೆಯ ಮಧ್ಯೆ ಒಡೆದು ಹಾಕಿ, ಸಂಚಾರ ವ್ಯತ್ಯಯ ಕಾರ್ಯಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ರಸ್ತೆ ಮಧ್ಯೆ ವೀಡಿಯೋ, ಚಲನಚಿತ್ರ ಪ್ರದರ್ಶನ, ಅನುಮತಿ ಇಲ್ಲದೆ ಹಾಗೂ ಹೆಚ್ಚಿನ ಧ್ವನಿಯಲ್ಲಿ ಧ್ವನಿವರ್ಧಕ ಬಳಸುವುದು, ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಕ್ಯೂ ನಿಲ್ಲದೆ ನುಗ್ಗಲು ಯತ್ನಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.
ಶಿವರಾತ್ರಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಮತ್ತು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗು ವವರು ಕಂಡು ಬಂದಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂ ದೂ. 100, 2418139 ಅಥವಾ 2418339ಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.