ಹೆಚ್1 ಎನ್1 ಕುರಿತು ಅರಿವು ಮೂಡಿಸಿ
ಹಾಸನ

ಹೆಚ್1 ಎನ್1 ಕುರಿತು ಅರಿವು ಮೂಡಿಸಿ

October 24, 2018

ಹಾಸನ: ಹೆಚ್1 ಎನ್1 ಹರಡ ದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿಯಂತ್ರಣ ಕ್ರಮಗಳ ಬಗ್ಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದು ವಿವಿಧ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಹೆಚ್1 ಎನ್1 ರೋಗ ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ರೋಗ ನಿಯಂತ್ರಣಕ್ಕೆ ಪೂರಕವಾದ ಮಾಹಿತಿ, ಶಿಕ್ಷಣ ಸಂವಹನ(ಐಇಸಿ) ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ನಿರ್ದೇಶನ ನೀಡಿದರು.

ಪ್ರತಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರಾರ್ಥನೆ ಸಮಯ ದಲ್ಲಿ ಮಕ್ಕಳಿಗೆ ಹೆಚ್1 ಎನ್1 ರೋಗ ಕುರಿತು ಅರಿವು ಮೂಡಿಸಿ. ನಂತರ ರಸಪ್ರಶ್ನೆ ಕಾರ್ಯ ಕ್ರಮ ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಹಾಸನ ತಾಲೂಕಿನಲ್ಲಿ 7, ಚನ್ನರಾಯ ಪಟ್ಟಣ-2, ಬೇಲೂರು-2, ಅರಕಲಗೂಡು-3, ಅರಸೀಕೆರೆ-2, ಹೊಳೆನರಸೀಪುರ-1 ಹಾಗೂ ಸಕಲೇಶಪುರದಲ್ಲಿ 2 ಸೇರಿದಂತೆ ಒಟ್ಟು 19 ಹೆಚ್1ಎನ್1 ಪ್ರಕರಣ ಗಳು ಕಂಡುಬಂದಿದ್ದು, ಅಗತ್ಯ ಚಿಕಿತ್ಸೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ಸೋಂಕಿತರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ ಅವರ ಕುಟುಂಬ ಹಾಗೂ ಸುತ್ತ ಮುತ್ತಲಿನ ಮನೆಗಳಲ್ಲಿಯೂ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ವರದಿ ತಿಳಿಸಿದರಲ್ಲದೆ, ಪ್ರತಿ ವರ್ಷ ಚಳಿಗಾಲದಲ್ಲಿ ಹೆಚ್1 ಎನ್1 ಕಂಡುಬರುವುದರಿಂದ ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಛಾಯಾ ಚಿತ್ರಗಳನ್ನೊಳಗೊಂಡ ಗೋಡೆ ಬರಹವನ್ನು ಪ್ರತಿ ಗ್ರಾಪಂಗಳಲ್ಲಿ ಬರೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ತಾಲೂಕು ಆರೋಗ್ಯಾಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಹೆಚ್1 ಎನ್1 ರೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸಿ. ಪ್ರಾಥಮಿಕ ಮತ್ತು ಸಮು ದಾಯ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗೋಡೆ ಬರಹ ಬರೆಸಲು ತಿಳಿಸಿದರಲ್ಲದೆ, ಆರೋಗ್ಯ ಸಹಾ ಯಕಿಯರ ಜೊತೆಗೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಕರಪತ್ರ ವಿತರಿಸುವ ಮೂಲಕ ಹೆಚ್ಚಿನ ಅರಿವು ಮೂಡಿಸುವಂತೆ ಡಿಸಿ ತಿಳಿಸಿದರು.

ಪ್ರತಿ ಪಟ್ಟಣ ಪಂಚಾಯಿತಿಗಳಲ್ಲಿ ಪೌರ ಕಾರ್ಮಿಕರ ಮೂಲಕ ಕರಪತ್ರಗಳನ್ನು ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಿದರು. ಪ್ರೋಬೆಷನರಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿದ್ದರು.

Translate »