ಮೈಸೂರು,ಜು.2(ಪಿಎಂ)-ಅರಣ್ಯ, ಪ್ರಾಣಿ-ಪಕ್ಷಿ ಸಂಕುಲದ ಶೋಷಣೆ ಮಾಡುತ್ತಾ ತಾನು ಎಷ್ಟು ಶಕ್ತಿಶಾಲಿ ಎಂಬುದನ್ನು ತೋರಿಸಿಕೊಳ್ಳುವ ಭರದಲ್ಲಿ ಮಾನವ ತನ್ನ ಕಾಲಿಗೆ ತಾನೇ ಕೊಡಲಿಪೆಟ್ಟು ಹಾಕಿ ಕೊಳ್ಳುತ್ತಿದ್ದಾನೆ ಎಂದು ಬೆಂಗಳೂರಿನ ಅದಮ್ಯಚೇತನ ಸಂಸ್ಥೆ ಮುಖ್ಯಸ್ಥರೂ ಆದ ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ವಿಷಾದಿಸಿದರು.
ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ವೈಲ್ಡ್ ಲೈಫ್ ಫಸ್ಟ್, ಭಾರತೀ ಪ್ರಕಾಶನದ ಜಂಟಿ ಆಶ್ರಯದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಅರ ಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ ಅವರ ಅನುಭವ ಕಥನ `ಕಾಡಿನೊಳಗೊಂದು ಜೀವ’ ಪರಿಷ್ಕøತ ಹಾಗೂ ಸಮಗ್ರ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಾಡು, ಪ್ರಾಣಿ-ಪಕ್ಷಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮಹತ್ವವನ್ನು ಶಾಲಾ ಕಾಲೇಜಿನ ಪಠ್ಯಪುಸ್ತಕದಲ್ಲಿ ಒಂದಿಷ್ಟು ಕಲಿತು ಮರೆಯುವುದೇ ಹೆಚ್ಚಾಗಿದೆ. ಪರೀಕ್ಷೆ ನಂತರ ಆ ವಿಷಯಗಳೇ ಮರೀಚಿಕೆ ಆಗಿಬಿಡುತ್ತವೆ. ಇಂತಹ ಸನ್ನಿವೇಶದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು `ಕಾಡಿನೊಳಗೊಂದು ಜೀವ’ದಂತಹ ಕೃತಿ ಸಹಕಾರಿ. ಇಂತಹ ಪುಸ್ತಕಗಳು ನೈಜ ಸಂಗತಿಗಳೊಂದಿಗೆ ಸಮಾಜ ದಲ್ಲಿ ಉನ್ನತ ಬದಲಾವಣೆ ತರುವಲ್ಲಿಯೂ ಮಹತ್ವ ಪಾತ್ರ ವಹಿಸಲಿವೆ ಎಂದು ಹೇಳಿದರು.
`ಕಾಡಿನೊಳಗೊಂದು ಜೀವ’ ಕೃತಿಯಲ್ಲಿ ಕೆ.ಎಂ.ಚಿಣ್ಣಪ್ಪ ಅವರ ಅನುಭವ ದಾಖ ಲಾಗಿದ್ದು, ಅವರಲ್ಲಿರುವ ಪರಿಸರ ಪ್ರೇಮ ಅನಾವರಣಗೊಂಡಿದೆ. ಆ ಮೂಲಕ ನಮ್ಮ ಸುತ್ತಮುತ್ತಲ ನೈಸರ್ಗಿಕ ಸಂಪತ್ತು ಸಂರಕ್ಷಣೆಯ ಮಹತ್ವ ಸಾರಲಾಗಿದ್ದು, ಪ್ರತಿಯೊಬ್ಬರ ಕೈಗೂ ಈ ಪುಸ್ತಕ ತಲುಪು ವಂತಾಗಲಿ. ಜೊತೆಗೆ ಇಂಗ್ಲಿಷ್ ಅವತರಣಿಕೆಯೂ ಹೊರ ಬರಲಿ ಎಂದು ಆಶಿಸಿದರು.
ಕೆ.ಎಂ.ಚಿಣ್ಣಪ್ಪ ತಮ್ಮ ಜೀವನವನ್ನೇ ಅರಣ್ಯ ಸಂರಕ್ಷಣೆಗೆ ಮುಡುಪಾಗಿಟ್ಟಿದ್ದಾರೆ. ಅವರ ಪರಿಸರ ಕಾಳಜಿ ನಿಜಕ್ಕೂ ಅನು ಕರಣೀಯ. ಪ್ರಾಣಿಗಳಿಗೆ ಹೋಲಿಕೆ ಮಾಡಿ ಬೈಯ್ಯುವುದನ್ನು ಕೂಡ ಚಿಣ್ಣಪ್ಪ ಅವರು ಸಹಿಸುವುದಿಲ್ಲ. ಅಷ್ಟು ಮಹತ್ವವನ್ನು ಅವರು ಪ್ರಾಣಿ-ಪಕ್ಷಿಗಳಿಗೆ ನೀಡುತ್ತಾರೆ. ನನ್ನ ಪತಿ ಅನಂತಕುಮಾರ್ ಅವರು ಸಹ ಪ್ರಾಣಿ-ಪಕ್ಷಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗೆಗೆ ಕಳಕಳಿ ಹೊಂದಿ ದ್ದರು ಎಂದು ಸ್ಮರಿಸಿದರು.
ವಿಷಯ ದಾರಿದ್ರ್ಯ: ನಗರ ವಾಸಿಗಳಲ್ಲಿ ಬಹುತೇಕರಿಗೆ ಸಣ್ಣ ಸಣ್ಣ ವಿಷಯಗಳ ಬಗ್ಗೆ ಜ್ಞಾನವೇ ಇರುವುದಿಲ್ಲ. ಆ ಚಿಕ್ಕ ವಿಷಯಗಳು ಹೇಗೆ ನಮ್ಮ ಸಮಾಜದ ಮೇಲೆ ಪರಿಣಾಮ ಉಂಟು ಮಾಡುತ್ತವೆ ಎಂಬುದನ್ನು ಅವಲೋಕಿಸಿದರೆ ಆತಂಕ ವಾಗುತ್ತದೆ. ಕಳೆದ 2 ತಿಂಗಳ ಹಿಂದೆ ನಾನು ಹಾಕಿದ್ದ ಟ್ವಿಟರ್ ಸಂದೇಶವೊಂದು ಭಾರೀ ವೈರಲ್ ಆಗಿತ್ತು. ಆದರೆ ಅದರ ಲ್ಲಿದ್ದ ಸಂದೇಶ ಎಷ್ಟು ಜನಕ್ಕೆ ಮನವರಿಕೆ ಆಯಿತೋ ಏನೋ ಗೊತ್ತಿಲ್ಲ ಎಂದರು.
ಆ ಸಂದೇಶದ ಬಗ್ಗೆ ಹೇಳುವುದಾದರೆ, `ಹಾಲು, ಮೊಸರು ಸೇರಿದಂತೆ ಯಾವುದೇ ಪ್ಲಾಸ್ಟಿಕ್ ಪೊಟ್ಟಣ ತೆರೆಯಲು ಪೊಟ್ಟ ಣದ ಒಂದು ಮೂಲೆಯಲ್ಲಿ ಕತ್ತರಿಸಿದಾಗ ಸಣ್ಣ ತುಂಡು ಆಗುತ್ತದೆ. ಇಂತಹ ಸಣ್ಣ ತುಂಡಿನ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಹಾಕದಂತೆ ಎಚ್ಚರ ವಹಿಸಿ. ಇಲ್ಲವಾದರೆ ಅದು ಪ್ರಕೃತಿಯಲ್ಲಿ ಸೇರಿ ಮಾಲಿನ್ಯ ಉಂಟು ಮಾಡುತ್ತದೆ. ಬೆಂಗಳೂರು ನಗರದಲ್ಲಿ ದಿನವೊಂದಕ್ಕೆ ಅಂದಾಜು 1 ಕೋಟಿ ಸಣ್ಣ ಪ್ಲಾಸ್ಟಿಕ್ ತುಂಡುಗಳ ತ್ಯಾಜ್ಯ ಹೊರಹೊಮ್ಮಬಹುದು. ಇವುಗಳ ಸೂಕ್ತ ವಿಲೇವಾರಿಯತ್ತ ಗಮನ ನೀಡದಿದ್ದಲ್ಲಿ ಅನಾಹುತಕ್ಕೆ ಎಡೆಯಾಗುತ್ತದೆ’ ಎಂದು ಟ್ವಿಟರ್‍ನಲ್ಲಿ ಸಂದೇಶ ಹಾಕಿದ್ದೆ. ಇದು ವೇಗವಾಗಿ ವೈರಲ್ ಆಯಿತು. ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು ಎಂದು ತಿಳಿಸಿದರು.
ಪ್ರಸ್ತುತ ಇಂತಹ ಕಳಕಳಿ ಸಂದೇಶ ರವಾನಿಸುವ ಪ್ರವೃತ್ತಿ ಹೆಚ್ಚುತ್ತಿದೆಯೇ ಹೊರತು, ಅಳವಡಿಸಿಕೊಳ್ಳುವುದು ತೀರಾ ಕಡಿಮೆಯೇ ಆಗಿದೆ. `ಪ್ಲಾಸ್ಟಿಕ್ ತುಂಡು’ ತಾನೆ ಇದೊಂದು ಸಣ್ಣ ವಿಷಯ ಎಂದು ನಿರ್ಲಕ್ಷ್ಯ ವಹಿಸಿದರೆ ಅದರಿಂದಲೇ ಮುಂದೆ ದೊಡ್ಡ ಅನಾಹುತ ಎದುರಾಗ ಲಿದೆ. ಹೀಗಾಗಿ ಈ ರೀತಿಯ ಸಣ್ಣ ಸಣ್ಣ ವಿಷಯಗಳ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯ ಡಾ.ಎಸ್.ವಿ.ನರಸಿಂಹನ್ ಕೃತಿ ಕುರಿತು ಮಾತನಾಡಿದರು. ಕೆ.ಎಂ.ಚಿನ್ನಪ್ಪ, ಕೃತಿ ನಿರೂಪಕ ಟಿ.ಎಸ್.ಗೋಪಾಲ್ ವೇದಿಕೆಯಲ್ಲಿದ್ದರು. ವನ್ಯಜೀವಿಶಾಸ್ತ್ರಜ್ಞ ಡಾ.ಉಲ್ಲಾಸ ಕಾರಂತ, ವನ್ಯಜೀವಿ ಛಾಯಾ ಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.