ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ಪತ್ನಿ ಕೊಂದ ಪತಿ
ಮೈಸೂರು

ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ಪತ್ನಿ ಕೊಂದ ಪತಿ

March 7, 2020

ಮೈಸೂರು,ಮಾ.6(ಆರ್‍ಕೆ)- ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಯೋರ್ವ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಪೈಶಾಚಿಕ ಕೃತ್ಯ ಮೈಸೂರು ತಾಲೂಕು ಇಲವಾಲ ಹೋಬಳಿ, ಹೊಸಕಾಮನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.

ಹೊಸಕಾಮನಕೊಪ್ಪಲಿನ ನಾಗೇಶ (38), ತನ್ನ ಪತ್ನಿ ಶ್ರೀಮತಿ ಮಮತಾ (26)ರನ್ನು ಕೊಲೆ ಮಾಡಿದವನಾಗಿದ್ದು, ಆತನನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾರ್ ಬೆಂಡಿಂಗ್ ಕೆಲಸ ಮಾಡುವ ನಾಗೇಶನ ಮೊದಲ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ 8 ವರ್ಷದ ಹಿಂದೆ ಪಿರಿಯಾಪಟ್ಟಣದವರಾದ ಮಮತಾರೊಂದಿಗೆ ಎರಡನೇ ಮದುವೆಯಾಗಿದ್ದ.

ಮೊದಲನೇ ಪತ್ನಿಗೆ ಒಂದು ಹೆಣ್ಣು ಮಗುವಿತ್ತು. ಎರಡನೇ ಪತ್ನಿಗೂ ಒಂದು ಗಂಡು ಮಗುವಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದ ಕುಟುಂಬದಲ್ಲಿ ಇತ್ತೀಚಿನ ದಿನಗಳಲ್ಲಿ ನಾಗೇಶನಿಗೆ ತನ್ನ ಪತ್ನಿಯ ನಡವಳಿಕೆ ಬಗ್ಗೆ ಅನುಮಾನ ಮೂಡತೊಡಗಿತ್ತು. ಆಕೆ ಬೇರೆ ಹೆಂಗಸಿನೊಂದಿಗೆ ಮಾತನಾಡಿದರೂ ಅನುಮಾನದಿಂದ ನೋಡುತ್ತಿದ್ದ ನಾಗೇಶ, ಅದೇ ಕಾರಣಕ್ಕೆ ಜಗಳ ತೆಗೆದು ಹಿಂಸಿಸುತ್ತಿದ್ದ. ದಿನಾ ಕುಡಿದು ಬಂದು ಹೊಡೆಯುವುದು, ಅವಾಚ್ಯ ಶಬ್ದಗಳಿಂದ ಬೈಯ್ದು ಅವಮಾನಿಸುತ್ತಿದ್ದ. ಅವನ ಅಟ್ಟಹಾಸ ತಾರಕಕ್ಕೇರಿದ್ದರಿಂದ ಹಿಂಸೆ ತಡೆಯಲಾರದೆ ಗುರುವಾರ ಮಮತಾ ತನ್ನ ತಂದೆ ಅವರಲ್ಲಿ ಅಳಲು ತೋಡಿಕೊಂಡಿದ್ದಳು. ಅದನ್ನು ಕೇಳಲೆಂದು ತಂದೆ ಗುರುವಾರ ರಾತ್ರಿ ಮಗಳ ಮನೆಗೆ ಬಂದಿದ್ದರಾದರೂ ತಡರಾತ್ರಿ ನಾಗೇಶ ಕುಡಿದು ಬಂದಿ ದ್ದರಿಂದ ಬೆಳಿಗ್ಗೆ ಮಾತನಾಡೋಣ ಎಂದು ಮಗಳ ಮನೆಯಲ್ಲೇ ತಂಗಿದ್ದರು.

ಶುಕ್ರವಾರ ಮುಂಜಾನೆ ಮಮತಾ ಎದ್ದು, ಬಾಗಿಲು ಸಾರಿಸಿ ಮನೆ ಮುಂದೆ ಹಸು ಹಾಲು ಕರೆಯುತ್ತಿದ್ದಾಗ, ನ್ಯಾಯ ಪಂಚಾಯ್ತಿಗೆ ತಂದೆ ಕರೆಸಿದ್ದಾಳೆ ಎಂದು ಕೋಪಗೊಂಡ ನಾಗೇಶ ಮಚ್ಚು ಹಿಡಿದು ಬಂದು ಪತ್ನಿಯ ಕುತ್ತಿಗೆ ಕೊಚ್ಚಿದ್ದಾನೆ. ಆಕೆ ಚೀರಿದಾಗ ಮನೆ ಯಲ್ಲಿದ್ದ ಮಮತಾ ತಂದೆ ಓಡಿ ಬಂದಿದ್ದಾರೆ. ಅವರತ್ತ ಮಚ್ಚು ತೋರಿಸಿ ಬೆದರಿಸಿ, ಮತ್ತೆ ಆಕೆಯನ್ನು ಮನಸ್ಸೋ ಇಚ್ಛೆ ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದಾನೆ. ತಂದೆ ಎದುರೇ ಮಗಳನ್ನು ಕೊಚ್ಚಿ ಕೊಂದ ನಾಗೇಶನನ್ನು ಸುತ್ತುವರಿದ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಇಲವಾಲ ಠಾಣೆ ಪೊಲೀ ಸರು ಆರೋಪಿ ನಾಗೇಶನನ್ನು ಬಂಧಿಸಿ, ಮಹಜರು ನಡೆಸಿ ಮಮತಾ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸಾಗಿಸಿದರು. ಘಟನೆಯಿಂದ ಜಮಾಯಿಸಿದ ಸಾವಿರಾರು ಮಂದಿ ನಾಗೇಶನ ಪೈಶಾಚಿಕ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಹೊಸಕಾಮನಕೊಪ್ಪಲಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ವಾಯಿತು. ಅಡಿಷನಲ್ ಎಸ್ಪಿ ಪಿ.ವಿ.ಸ್ನೇಹಾ, ಡಿವೈಎಸ್ಪಿ ಸುಮಿತ, ಸರ್ಕಲ್ ಇನ್‍ಸ್ಪೆಕ್ಟರ್ ಜೀವನ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪಿರಿಯಾಪಟ್ಟಣದಿಂದ ದಾವಿಸಿದ್ದ ನೂರಾರು ಮಂದಿ ಮಮತಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ನಾಗೇಶನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಕಡೆಗೆ ಎರಡೂ ಗ್ರಾಮಗಳ ಗ್ರಾಮಸ್ಥರು ಸೇರಿ ಮಾತುಕತೆ ನಡೆಸಿ, ಮಮತಾಳ ಗಂಡು ಮಗುವಿನ ಜೀವನೋಪಾಯಕ್ಕೆ ನಾಗೇಶನ ಆಸ್ತಿಯನ್ನು ಬರೆದುಕೊಟ್ಟು ಆಧಾರ ಮಾಡಿಕೊಡುವ ತೀರ್ಮಾನ ಕೈಗೊಳ್ಳಲಾಯಿತು ಎಂದು ಗ್ರಾಮಸ್ಥರು ತಿಳಿಸಿದರು. ಮಧ್ಯಾಹ್ನದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮಮತಾಳ ಮೃತದೇಹವನ್ನು ಒಪ್ಪಿಸಿದ ಪೊಲೀಸರು, ಕೊಲೆ ಆರೋಪಿ ನಾಗೇಶನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಆತನನ್ನು ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ತಾಯಿ ಹತ್ಯೆಯಾಗಿ ತಂದೆ ಜೈಲುಪಾಲಾದ ಕಾರಣ ಎರಡೂ ಮಕ್ಕಳು ಅನಾಥವಾದಂತಾಗಿದೆ. ಮಮತಾ ಕಳೆದುಕೊಂಡ ಆಕೆ ತಂದೆ-ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣ ದಾಖ ಲಿಸಿಕೊಂಡಿರುವ ಇಲವಾಲ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Translate »