ಯೆಸ್ ಬ್ಯಾಂಕ್ ಬಿಕ್ಕಟ್ಟು ಶೀಘ್ರ ಶಮನ, ನಿಮ್ಮ ಹಣ ಸುರಕ್ಷಿತ: ವಿತ್ತ ಸಚಿವೆ ಅಭಯ
ಮೈಸೂರು

ಯೆಸ್ ಬ್ಯಾಂಕ್ ಬಿಕ್ಕಟ್ಟು ಶೀಘ್ರ ಶಮನ, ನಿಮ್ಮ ಹಣ ಸುರಕ್ಷಿತ: ವಿತ್ತ ಸಚಿವೆ ಅಭಯ

March 7, 2020

ನವದೆಹಲಿ, ಮಾ.6- ಯೆಸ್ ಬ್ಯಾಂಕ್ ಖಾತೆದಾರರ ಹಣ ಸುರಕ್ಷಿತವಾಗಿದ್ದು, ಖಾತೆ ದಾರರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸವಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಹೇಳಿದ್ದಾರೆ.

ದೇಶದ ಬ್ಯಾಂಕಿಂಗ್ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಜೆ ದೆಹಲಿ ಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಬಿಕ್ಕಟ್ಟು ಶಮನಕ್ಕೆ ಆರ್‍ಬಿಐ ಎಲ್ಲ ರೀತಿಯ ಕ್ರಮ ಕೈಗೊಂಡಿದೆ. ಶೀಘ್ರವೇ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸ ವಿದೆ. ಯಾವುದೇ ಖಾತೆದಾರರ ಹಣ ನಷ್ಟವಾಗುವುದಿಲ್ಲ. ಹಣ ಪೂರ್ಣ ಸುರಕ್ಷಿತ ವಾಗಿದೆ. ಖಾತೆದಾರರ ಹಿತದೃಷ್ಟಿಯಿಂದಲೇ ಯೆಸ್ ಬ್ಯಾಂಕ್ ಅನ್ನು ಆರ್‍ಬಿಐ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದರು.

2017ರಿಂದಲೇ ಯೆಸ್ ಬ್ಯಾಂಕ್ ಮೇಲೆ ಆರ್‍ಬಿಐ ನಿಗಾ ಇರಿಸಿತ್ತು. ಬ್ಯಾಂಕ್‍ನ ಕ್ರಮ ವಿಲ್ಲದ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಿತ್ತು. ಅಲ್ಲದೆ ಈ ಸಂಬಂಧ ಬ್ಯಾಂಕ್À ಆಡಳಿತ ಮಂಡಳಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಆದರೆ ಇದಕ್ಕೆ ಬ್ಯಾಂಕ್ ಆಡಳಿತ ಮಂಡಳಿಯಿಂದ ಸೂಕ್ತ ಉತ್ತರ ಬಂದಿರಲಿಲ್ಲ ಎಂದು ವಿವರಿಸಿದರು. ಬ್ಯಾಂಕ್‍ನ ಆರ್ಥಿಕ ಬಿಕ್ಕಟ್ಟಿಗೆ ಯಾರು ಕಾರಣ? ಯಾರ ತಪ್ಪಿನಿಂದ ಬ್ಯಾಂಕ್ ವಹಿವಾಟು ಹಾದಿ ತಪ್ಪಿತು? ಎಂಬ ಅಂಶಗಳು ಶೀಘ್ರದಲ್ಲೇ ಬೆಳಕಿಗೆ ಬರಲಿವೆ. ಈ ಸಂಬಂಧ ಆರ್‍ಬಿ ಐಗೆ ನಿರ್ದೇಶನ ಕೂಡ ನೀಡಲಾಗಿದೆ. ಆರ್‍ಬಿಐ ತನಿಖೆ ಮಾಡಿ ವರದಿ ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿ ದರು. ಇನ್ನು 30 ದಿನಗಳೊಳಗಾಗಿ ಬ್ಯಾಂಕ್ ಆಡಳಿತ ಮಂಡಳಿ
ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದೆ. ದೇಶದ ದೊಡ್ಡ ಸರ್ಕಾರಿ ಸ್ಯಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್‍ಬಿಐ, ಯೆಸ್‍ಬ್ಯಾಂಕ್‍ನಲ್ಲಿ ಹೂಡಿಕೆ ಮಾಡಲು ಸಿದ್ಧವಿದೆ. ಯೆಸ್ ಬ್ಯಾಂಕ್ ಸಿಬ್ಬಂದಿಗೆ ಮುಂದಿನ 1ವರ್ಷ ಸಮಯಕ್ಕೆ ಸರಿಯಾಗಿ ವೇತನ ಕೂಡ ಪಾವತಿಯಾಗಲಿದೆ ಎಂದು ಹೇಳಿದರು.

ಸೂಪರ್‍ಸೀಡ್: ಇದಕ್ಕೂ ಮುನ್ನ ಗುರುವಾರ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಯೆಸ್ ಬ್ಯಾಂಕ್‍ನ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಪಾರದರ್ಶಕ ಕಾರ್ಯನಿರ್ವಹಣೆಯಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಜರುಗಿಸಲಾಯಿತು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 45ರಡಿ ಮಾ.5ರಿಂದ ಏ.6ರವರೆಗೂ 1 ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ. ಈ ಅವಧಿಯಲ್ಲಿ, ಠೇವಣಿ ಹಿಂಪಡೆಯುವಿಕೆ, ಹೊಸ ಸಾಲ ವಿತರಣೆ, ಹಳೆ ಸಾಲಗಳ ನವೀಕರಣ ಸಾಧ್ಯವಿಲ್ಲ. ಆದರೆ, ಖಾತೆದಾರರು ಗರಿಷ್ಠ 50 ಸಾವಿರ ರೂ.ವರೆಗಷ್ಟೇ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿದೆ. ವೈದ್ಯಕೀಯ ತುರ್ತುಪರಿಸ್ಥಿತಿ ಅಥವಾ ಮದುವೆ, ಶಿಕ್ಷಣ ಮತ್ತಿತರ ತೀರಾ ಅಗತ್ಯದ ಸಂದರ್ಭಗಳಲ್ಲಿ ಮಾತ್ರ 5 ಲಕ್ಷ ರೂ.ವರೆಗೂ ಹಣ ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ಈ ಬೆಳವಣಿಗೆಗಳಿಂದ ಯೆಸ್ ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಶುರುವಾಗಿದ್ದು, ಖಾತೆದಾರರು ಎಟಿಎಂ ಮತ್ತು ಬ್ಯಾಂಕ್ ಶಾಖೆ ಮುಂದೆ ಸಾಲುಗಟ್ಟಿ ಹಣ ವಿತ್ ಡ್ರಾ ಮಾಡಲು ಮುಂದಾಗಿದ್ದಾರೆ.

ಸಂಕಷ್ಟವೇಕೆ?: 2003-04ರಲ್ಲಿ ಸ್ಥಾಪನೆಯಾದ ಈ ಖಾಸಗಿ ಬ್ಯಾಂಕ್ 10 ವರ್ಷಗಳಲ್ಲಿಯೇ ದೇಶದ ಟಾಪ್ 5 ಖಾಸಗಿ ಬ್ಯಾಂಕ್ ಎನಿಸಿಕೊಂಡಿತ್ತು. ಆದರೆ, ವಸೂಲಾಗದ ಸಾಲದ ಪ್ರಮಾಣ(ಎನ್‍ಪಿಎ)ದಲ್ಲಿನ ಭಾರಿ ಹೆಚ್ಚಳದಿಂದಾಗಿ ಯೆಸ್ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಗುರಿಯಾಯಿತು.

ಎಸ್‍ಬಿಐ ಆಡಳಿತಾಧಿಕಾರಿ: ಯೆಸ್ ಬ್ಯಾಂಕ್ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಆರ್‍ಬಿಐ, ಎಸ್‍ಬಿಐನಿಂದ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸಿ ಅವರ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಕೇಂದ್ರ ಸರ್ಕಾರವೂ ಯೆಸ್ ಬ್ಯಾಂಕ್ ರಕ್ಷಿಸುವ ಯೋಜನೆ ಹಾಕಿಕೊಂಡಿದೆ. ಗ್ರಾಹಕರಿಗೆ ರೀತಿ ಆತಂಕ ಬೇಡ ಎಂದು ಆರ್‍ಬಿಐ ಧೈರ್ಯ ತುಂಬಿದೆ. ಭಾರತದ ಅತಿದೊಡ್ಡ ಬ್ಯಾಂಕ್ ಎಸ್‍ಬಿಐ, ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಮತ್ತು ಅದರ ಪುನಶ್ಚೇತನಕ್ಕೆ ಆಸಕ್ತಿ ತಳೆದಿದೆ ಎಂದೂ ಆರ್‍ಬಿಐ ತಿಳಿಸಿದೆ.

ಪುರಿ ಜಗನ್ನಾಥನ 545 ಕೋಟಿ ರೂ.: ಭುವನೇಶ್ವರದ ಪುರಿ ಜಗನ್ನಾಥ ದೇವಸ್ಥಾನದ 545 ಕೋಟಿ ರೂ.ಗಳನ್ನು ದೇವರ ಹೆಸರಿನಲ್ಲಿಯೇ ಯೆಸ್ ಬ್ಯಾಂಕ್‍ನಲ್ಲಿ ಠೇವಣಿ ಇಡಲಾಗಿದೆ. ಮುಂದಿನ 1 ತಿಂಗಳ ಕಾಲ ಕೇವಲ 50,000 ರೂ. ಹಿಂಪಡೆಯಲು ಆರ್‍ಬಿಐ ನಿರ್ಬಂಧ ವಿಧಿಸಿದ್ದು, ಇದು ಜಗನ್ನಾಥ ದೇವಸ್ಥಾನದ ಆಡಳಿತ ವರ್ಗಕ್ಕೆ ತಲೆನೋವು ತಂದಿದೆ. ದೇವರ ಹಣವನ್ನು ಖಾಸಗಿ ಬ್ಯಾಂಕ್‍ನಲ್ಲಿ ಹೂಡಿಕೆ ಮಾಡಿದ ಬಗೆಗೆ ಟೀಕೆಗಳೂ ವ್ಯಕ್ತವಾಗಿವೆ.

Translate »