ಮಂಡ್ಯ ಬೇರೆ ಜಿಲ್ಲೆಯವರ ಪಿತ್ರಾರ್ಜಿತ ಆಸ್ತಿಯಲ್ಲ
ಮೈಸೂರು

ಮಂಡ್ಯ ಬೇರೆ ಜಿಲ್ಲೆಯವರ ಪಿತ್ರಾರ್ಜಿತ ಆಸ್ತಿಯಲ್ಲ

March 28, 2019

ಕೆ.ಆರ್.ಪೇಟೆ: ಬೇರೆ ಜಿಲ್ಲೆಯವರು ಮಂಡ್ಯವನ್ನು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ವಶಪಡಿಸಿಕೊಳ್ಳಲು ಬಂದಿದ್ದಾರೆ. ಸ್ವಾಭಿಮಾನದಿಂದ ನಮ್ಮ ಆಸ್ತಿಯನ್ನು ನಾವು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಗುಡುಗಿದ ಸುಮಲತಾ, ಮಂಡ್ಯ ಜನ ಪ್ರಜ್ಞಾವಂತರು, ಸ್ವಾಭಿಮಾನಿಗಳು ಎಂಬುದನ್ನು ಇಂಡಿಯಾಗೆ ತೋರಿಸಲು ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಅವರು ಇಂದು ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಮತ್ತು ಅಕ್ಕಿಹೆಬ್ಬಾಳು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ, ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ನಾನು ಸ್ಪರ್ಧಿಸುತ್ತಿರುವುದು ರಾಜ್ಯದ ಮುಖ್ಯಮಂತ್ರಿಗಳ ಮಗನ ವಿರುದ್ಧ ಎಂಬುದು ನನಗೆ ಗೊತ್ತಿದೆ ಎಂದ ಅವರು, ಜೆಡಿಎಸ್ ನವರು ಹೇಳುವ ಸುಳ್ಳು ಮತ್ತು ಅಪಪ್ರಚಾರಗಳಿಗೆ ಕಿವಿಗೊಟ್ಟು ಮತ ನೀಡುವ ಮುಠಾಳರು ಮಂಡ್ಯದವರಲ್ಲ ಎಂಬುದನ್ನು ತೋರಿಸಬೇಕಾ ಗಿದೆ. ಜಿಲ್ಲೆಯ ಜನರು ಸ್ವಾಭಿಮಾನಿಗಳು. ಹಣ ಬಲದ ಮುಂದೆ ಜನಬಲ ಪ್ರದರ್ಶಿಸುವ ಬುದ್ಧಿ ವಂತರು. ಜೆಡಿಎಸ್ ಮುಖಂಡರು ಮೋಸ ಹಾಗೂ ವಂಚನೆ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹೆಸರಿನ ಮೂವರು ಮಹಿಳೆಯರನ್ನು ಹುಡುಕಿ ನಾಮಪತ್ರ ಸಲ್ಲಿಸುವಂತೆ ಮಾಡಿದ್ದಾರೆ. ಮೂರಲ್ಲ, ನೂರು ಸುಮಲತಾ ಹೆಸರಿನವರು ಸ್ಪರ್ಧಿಸಿದರೂ ಅದರಲ್ಲಿ ಅಂಬ ರೀಷ್ ಪತ್ನಿ ಸುಮಲತಾ ಯಾರು? ಎಂದು ಹುಡುಕಿ ಜನರು ಮತ ನೀಡುತ್ತಾರೆ. ಸುಮಾರು ಮೂರು ಲಕ್ಷ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ನಿಜವಾದ ಜೋಡೆತ್ತುಗಳಂತೆ. ಹಾಗೆಂದು ಹೇಳಿಕೊಳ್ಳಲು ಇವರಿಗೆ ನಾಚಿಕೆಯಾಗಬೇಕು ಎಂದ ಅವರು, ಡಿ-ಬಾಸ್ ಘರ್ಜನೆಯು ಏ.18ರವರೆಗೆ ಮೊಳಗುತ್ತಿರಬೇಕು. ದರ್ಶನ್ ಮತ್ತು ಯಶ್ ನನ್ನ ಮನೆ ಮಕ್ಕಳು. ಯಾರು ಎಷ್ಟೇ ಬೊಬ್ಬೆ ಹಾಕಿದರೂ, ಅವರಿಬ್ಬರೂ ಏ.2ರಿಂದ ಜಿಲ್ಲಾದ್ಯಂತ ನನ್ನ ಪರವಾಗಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರ ಮನೆಗೆ ಹೋಗಿ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ, ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಡ್ಯ ಹೊರತುಪಡಿಸಿ ಉಳಿದ ಎಲ್ಲಾ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ನಿಮ್ಮ ಮನೆ ಮಗಳಿಗೆ ಬೆಂಬಲ ಸೂಚಿಸಿದೆ. ರೈತ ಸಂಘ, ಸ್ವರಾಜ್ ಇಂಡಿಯಾ ಪಕ್ಷ ಮತ್ತು ಅನೇಕ ಕನ್ನಡ ಪರ ಸಂಘಟನೆಗಳು ನನಗೆ ಬೆಂಬಲ ನೀಡಿವೆ. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಅವರು ಭಾವುಕರಾಗಿ ನುಡಿದರು.
ಯಡಿಯೂರಪ್ಪನವರ ಹುಟ್ಟೂರಾದ ಬೂಕನಕೆರೆಯಲ್ಲಿ ನನಗೆ ಹೃದಯ ಸ್ಪರ್ಶಿ ಸ್ವಾಗತ ಸಿಕ್ಕಿದೆ. ಸಾವಿರಾರು ಮಹಿಳೆಯರು ಮತ್ತು ಯುವಕರು ರೋಡ್ ಶೋನಲ್ಲಿ ಭಾಗವಹಿಸಿ ಬೆಂಬಲ ನೀಡಿದ್ದಾರೆ. ಇವರ್ಯಾರೂ ಹಣ ಅಥವಾ ಟೋಕನ್ ನೀಡಿ ಕರೆತಂದವರಲ್ಲ. ನನ್ನ ಬಳಿ ಹಣವಿಲ್ಲ. ನಿಮ್ಮ ಪ್ರೀತಿ-ವಿಶ್ವಾಸವಿದೆ. ನಿಮ್ಮ ಸೇವಕಳಾಗಿ ಕೆಲಸ ಮಾಡಿ ಋಣ ತೀರಿಸಲು ಬಂದಿರುವ ನನಗೆ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಅವರು ಮನವಿ ಮಾಡಿದರು. ಬೂಕನಕೆರೆ ಗ್ರಾಮ ದೇವತೆ ಆದಿಶಕ್ತಿ ಶ್ರೀ ಗೋಗಾಲಮ್ಮ ದೇವಿ ದೇವಸ್ಥಾನ, ಕಲ್ಲಹಳ್ಳಿಯ ಭೂ ವರಾಹಸ್ವಾಮಿ ದೇವಾಲಯ ಗಳಿಗೆ ಭೇಟಿ ನೀಡಿ ಸುಮಲತಾ ವಿಶೇಷ ಪೂಜೆ ಸಲ್ಲಿಸಿದರು. ರೋಡ್ ಶೋನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಬ್ಲಾಕ್ ಕಾಂಗ್ರೆಸ್ ಎಸ್‍ಸಿ ಘಟಕದ ಅಧ್ಯಕ್ಷ ಶಿವಣ್ಣ, ರಾಜಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ಮಂಜು, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ಅಹಿಂದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಮುರುಳೀಧರ್, ತಾಲೂಕು ಅಂಬರೀಷ್ ಅಭಿಮಾನಿ ಸಂಘದ ಅಧ್ಯಕ್ಷ ಜಬೀವುಲ್ಲಾ, ತಾಪಂ ಸದಸ್ಯೆ ಮೀನಾಕ್ಷಿ ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಎ.ಎಂ.ಕಲಾವತಿ, ಮೀನಾಕ್ಷಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಟಿ. ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಕೆ.ಎಲ್.ದೇವರಾಜ್, ಎ.ಎಂ.ಸಂಜೀವಪ್ಪ, ಜಿ.ಎ.ರಾಯಪ್ಪ, ಕೆ.ಟಿ.ಚಂದ್ರೇಗೌಡ, ಗ್ಯಾಸ ರಾಜಶೇಖರ್, ಕೆ.ಬಿ.ಮಹೇಶ್, ವಿವೇಕ್, ಪಠಾಣ್ ಬಾಬು, ಬಲ್ಲೇನಹಳ್ಳಿ ರಮೇಶ್, ಡಿ.ಎ.ಸುರೇಶ್, ಡಾಲು ರವಿ, ಎಸ್.ಅಂಬರೀಷ್, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ದಿವಾಕರ್, ರೈತ ಮುಖಂಡ ಅಂಗಡಿ ನಾಗರಾಜು, ತಾಪಂ ಸದಸ್ಯೆ ವಿನೂತ ಸುರೇಶ್, ಸೊಸೈಟಿ ಕಿಟ್ಟು, ಯುವ ಕಾಂಗ್ರೆಸ್ ಮುಖಂಡ ರಾದ ಎಸ್.ಪಿ.ವಿನಯ್, ಪಚ್ಚಿ, ಕೆ.ಎಸ್.ಕುಮಾರ್, ಬಳ್ಳೇಕೆರೆ ವಿಜಯಕುಮಾರ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

Translate »