ಮಂಡ್ಯ ವಿವಿ ವಿಶೇಷಾಧಿಕಾರಿ ಡಾ.ಮಹದೇವ ನಾಯಕ ವಜಾ
ಮೈಸೂರು

ಮಂಡ್ಯ ವಿವಿ ವಿಶೇಷಾಧಿಕಾರಿ ಡಾ.ಮಹದೇವ ನಾಯಕ ವಜಾ

January 3, 2020

ಮೈಸೂರು, ಜ.2- ಅಧಿಕಾರ ದುರ್ಬಳಕೆ ಮಾಡಿಕೊಂಡು ಹಲವಾರು ಅವ್ಯವ ಹಾರಗಳನ್ನು ನಡೆಸಿರುವ ಆರೋಪದ ಮೇರೆಗೆ ಮಂಡ್ಯ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ. ಎಂ.ಎಸ್.ಮಹದೇವ ನಾಯಕ ಅವರನ್ನು ವಿಚಾರಣೆ ಕಾಯ್ದಿರಿಸಿ, ವಜಾ ಮಾಡಿ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯ-2) ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಮಹೇಶ್ ಆದೇಶ ಹೊರಡಿಸಿದ್ದಾರೆ.

ಮಂಡ್ಯ ವಿವಿಯ ವಿಶೇಷಾಧಿಕಾರಿ ಡಾ.ಎಂ.ಎಸ್.ಮಹದೇವ ನಾಯಕ ಅವರು ನಡೆಸಿರುವ ಅವ್ಯವಹಾರಗಳ ಕುರಿತು ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಮತ್ತು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ನೀಡಿದ ದೂರುಗಳನ್ವಯ ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ.ಎಂ.ಕಾವೇರಿಯಪ್ಪ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿಯನ್ನು ನೇಮಿಸಲಾಗಿತ್ತು. ಈ ಸಮಿತಿ ನೀಡಿದ ವರದಿಯನ್ವಯ ಡಾ. ಎಂ.ಎಸ್.ಮಹದೇವ ನಾಯಕ ಅವರನ್ನು ಮಂಡ್ಯ ವಿವಿ ವಿಶೇಷಾಧಿಕಾರಿ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಹದೇವ ನಾಯಕ ಅವರು, ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾ ರದ ನಿಯಮಗಳನ್ನು ಉಲ್ಲಂಘಿಸಿ ಕನ್ನಡ ಸಹ ಪ್ರಾಧ್ಯಾಪಕÀ ಡಾ.ಬಿ.ಶಿವಣ್ಣ ಅವರನ್ನು ವಿವಿಯ ಪ್ರಭಾರ ಕುಲಸಚಿವ (ಆಡಳಿತ) ಹಾಗೂ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಯೋಗನರಸಿಂಹಾಚಾರಿ ಅವರನ್ನು ಪ್ರಭಾರ ಕುಲಸಚಿವ (ಮೌಲ್ಯ ಮಾಪನ) ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪ ದೃಢಪಟ್ಟಿದೆ ಎಂಬ ಸಮಿತಿಯ ವರದಿಯನುಸಾರ ಈ ಇಬ್ಬರೂ ಪ್ರಭಾರ ಕುಲಸಚಿವರ ವಿರುದ್ಧ ಎಫ್‍ಐಆರ್ ದಾಖಲಿಸಿ, ನಿಯಮಾವಳಿಯಂತೆ ಇಲಾಖಾ ವಿಚಾರಣೆ ನಡೆಸಬೇಕೆಂದು ಆದೇಶಿಸ ಲಾಗಿದೆ. ಮಂಡ್ಯ ಸರ್ಕಾರಿ ಮಹಿಳಾ ಮಹಾ ವಿದ್ಯಾಲಯದ ಪ್ರಥಮ ವರ್ಷದ ಸ್ನಾತಕೋ ತ್ತರ ಕೋರ್ಸ್‍ಗಳ ಪ್ರವೇಶಾತಿ ಶುಲ್ಕ 6910 ರೂ. ಅನ್ನು ಏಕಾಏಕಿ 15,885 ರೂ.ಗೆ ಹೆಚ್ಚಳ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಿದ್ದಾರೆ ಎಂಬುದರ ಬಗ್ಗೆ ನಡೆಸಿದ ವಿಚಾರಣೆಯಲ್ಲಿ ಮಂಡ್ಯ ವಿವಿ ವಿಶೇಷಾಧಿಕಾರಿ, ಮೈಸೂರು ವಿವಿ ನಿಗದಿಪಡಿಸಿದ ಪ್ರವೇಶ ಶುಲ್ಕಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿ ಗಳಿಂದ ಪಡೆದಿದ್ದಲ್ಲಿ ಹೆಚ್ಚಿಗೆ ಪಡೆದಿರುವ ಪ್ರವೇಶ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.

ಮಂಡ್ಯ ವಿವಿಯಲ್ಲಿ ಸಿಂಡಿಕೇಟ್, ಸೆನೆಟ್ ಮುಂತಾದ ಶೈಕ್ಷಣಿಕ ಮಂಡಳಿಗಳು ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಈ ಮಂಡಳಿಗಳ ಶಿಫಾರಸ್ಸಿನೊಂದಿಗೆ ಸರ್ಕಾರದ ಅನುಮೋದನೆ ಪಡೆದು ಹೊಸ ಸ್ನಾತಕೋತ್ತರ ಕೋರ್ಸ್‍ಗಳನ್ನು ಆರಂಭಿಸುವುದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಮಂಡ್ಯ ವಿವಿ ವಿಶೇಷಾಧಿಕಾರಿಗಳು ಹಲವು ಹೊಸ ಸ್ನಾತಕೋತ್ತರ ಕೋರ್ಸ್‍ಗಳನ್ನು ಪ್ರಾರಂಭಿಸಿದ್ದಾರೆ ಎಂಬ ಆರೋಪವೂ ಕೂಡ ವಿಚಾ ರಣೆಯಲ್ಲಿ ರುಜು ವಾತಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಪರಿಗಣಿಸಿ ಮಂಡ್ಯ ವಿವಿಯಲ್ಲಿ 2019-20ನೇ ಶೈಕ್ಷಣಿಕ ಸಾಲಿನಿಂದ ಆರಂಭಿಸಿರುವ ಹೊಸ ಕೋರ್ಸ್‍ಗಳನ್ನು ಒಂದು ಬಾರಿಯ ಅವಕಾಶವಾಗಿ ಅಗತ್ಯ ಪ್ರಾಧಿಕಾರಗಳ ಅನುಮತಿ ಪಡೆದು ಮುಂದಿನ ಕ್ರಮ ವಹಿಸುವಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ. ಮೇಲಿನ ಎಲ್ಲಾ ಅವ್ಯವಹಾರಗಳನ್ನು ನಡೆಸಿರುವ ಮಂಡ್ಯ ವಿವಿ ವಿಶೇಷಾಧಿಕಾರಿ ಡಾ.ಎಂ.ಎಸ್.ಮಹದೇವ ನಾಯಕ ಅವರನ್ನು ವಿಚಾರಣೆ ಕಾಯ್ದಿರಿಸಿ ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Translate »