ವಾಹನ ಬಾಡಿಗೆ ಪಡೆದ ಮಂಜುನಾಥ ಜೈಲು ಪಾಲು; ಅಪ್ರಾಪ್ತ ರಿಮ್ಯಾಂಡ್ ಹೋಂಗೆ
ಮೈಸೂರು

ವಾಹನ ಬಾಡಿಗೆ ಪಡೆದ ಮಂಜುನಾಥ ಜೈಲು ಪಾಲು; ಅಪ್ರಾಪ್ತ ರಿಮ್ಯಾಂಡ್ ಹೋಂಗೆ

August 15, 2019

ಮೈಸೂರು, ಆ.14(ಆರ್‍ಕೆ)- ಅಪ್ರಾಪ್ತನ ಅಡ್ಡಾದಿಡ್ಡಿ ವಾಹನ ಚಾಲನೆಗೆ ಅಮಾ ಯಕ ವಿದ್ಯಾರ್ಥಿನಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಬಾಡಿಗೆಗೆ ಪಡೆದಿದ್ದ ಗಾಯತ್ರಿಪುರಂ ನಿವಾಸಿ ಮಂಜುನಾಥ್ ಜೈಲು ಪಾಲಾ ದರೆ ಹುಚ್ಚಾಪಟ್ಟೆ ವಾಹನ ಚಾಲಿಸಿ, ವಿದ್ಯಾರ್ಥಿನಿ ಬಲಿ ಪಡೆದ ಅಪ್ರಾಪ್ತ ರಾಜು (ಹೆಸರು ಬದಲಿಸಲಾಗಿದೆ) ರಿಮ್ಯಾಂಡ್ ಹೋಂ ಸೇರಿದ್ದಾನೆ. ನಗರದ ಜೆಎಲ್‍ಬಿ ರಸ್ತೆ, ಮುಡಾ ಜಂಕ್ಷನ್ ಬಳಿ ಮಂಗಳವಾರ ಅಪ್ರಾಪ್ತ ರಾಜು ಅಡ್ಡಾದಿಡ್ಡಿಯಾಗಿ ಸ್ಕಾರ್ಪಿಯೋ ಚಾಲಿಸಿ, ಮೂರು ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಲ್ಲದೆ, ರಸ್ತೆ ಬದಿ ನಡೆದು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಗುದ್ದಿಸಿದ್ದ. ಘಟನೆಯಲ್ಲಿ ಮಹಾರಾಣಿ ಕಾಲೇಜು ಪತ್ರಿಕೋದ್ಯಮ ವಿದ್ಯಾರ್ಥಿನಿ ಹೆಚ್.ಎಸ್.ಅಶ್ವಿನಿ ಮೃತಪಟ್ಟಿದ್ದು, ಆಕೆಯ ಸ್ನೇಹಿತೆ ಪ್ರೇಮಾ ಗಾಯಗೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆ.ಆರ್.ಸಂಚಾರ ಠಾಣೆ ಪೊಲೀಸರು, ವಾಹನ ಬಾಡಿಗೆಗೆ ಪಡೆದಿದ್ದ ಲಾರಿ ಡ್ರೈವರ್ ಮಂಜು ನಾಥ ಹಾಗೂ ಸ್ಕಾರ್ಪಿಯೋ ಚಾಲಿಸಿದ ಹದಿನೇಳೂ ವರೆ ವರ್ಷದ ರಾಜುನನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ಮಂಜುನಾಥ್‍ನನ್ನು ನ್ಯಾಯಾಂಗ ಬಂಧನಕ್ಕೆ ಹಾಗೂ ರಾಜುನನ್ನು ರಿಮಾಂಡ್ ಹೋಂಗೆ ಒಪ್ಪಿಸುವಂತೆ ಆದೇಶಿಸಿದ್ದಾರೆ. ರೇವ್ ಕಂಪನಿಯಿಂದ ಬಾಡಿಗೆಗೆ ಪಡೆದ ಸ್ಕಾರ್ಪಿಯೋ ಕಾರನ್ನು ಬೇರೆಯವರ ಬಳಕೆಗೆ ನೀಡಿದ್ದಕ್ಕೆ ಮಂಜುನಾಥ ವಿರುದ್ಧ ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ಅಡ್ಡಾದಿಡ್ಡಿ ವಾಹನ ಚಾಲಿಸಿ, ವಿದ್ಯಾರ್ಥಿನಿ ಸಾವಿಗೆ ಕಾರಣನಾಗಿ, ಮತ್ತೋರ್ವ ವಿದ್ಯಾರ್ಥಿನಿಗೆ ರಕ್ತಗಾಯ ಮಾಡಿರುವ ರಾಜು ವಿರುದ್ಧ ಪ್ರಕರಣ ದಾಖಲಿಸಿ, ಇಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಘಟನೆಯ ಗಂಭೀರತೆ ವಿವರಿಸಲಾಯಿತು. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣದ ಆರೋಪಿಗಳಿಗೆ ಇದೇ ಮೊದಲ ಬಾರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ ಎಂದು ಕೆ.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಜಗದೀಶ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಈ ಸಂಬಂಧ ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿ, ಅಪಘಾತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಸ್ಟೇಷನ್ ಬೇಲ್ ಆಗುತ್ತದೆ. ಆರೋಪಿಗಳಿಗೆ ಜೈಲು ಶಿಕ್ಷೆ  ವಿಧಿಸುತ್ತಿರಲಿಲ್ಲ. ನಿಗಧಿತ ದಂಡ ಕಟ್ಟಿ, ಸ್ಟೇಷನ್ ಬೇಲ್‍ನಲ್ಲಿ ಬಿಡುಗಡೆ ಆಗುತ್ತಿದ್ದರು. ಹಾಗಾಗಿ ಕೆಲ ಚಾಲಕರು ಮತ್ತೆ ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿರುವ ಉದಾಹರಣೆಯೂ ಇದೆ. ಆದರೆ ನಿಯಮ ಬಾಹಿರವಾಗಿ ಅತೀ ವೇಗ, ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಮಾಡಿದರೆ ನ್ಯಾಯಾಂಗ ಬಂಧನವಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಈ ಪ್ರಕರಣದಿಂದ ಬಿತ್ತರವಾಗಿದೆ. ಅಪ್ರಾಪ್ತ ಮಕ್ಕಳಿಗೆ, ಡಿಎಲ್ ಇಲ್ಲದ, ಸರಿಯಾಗಿ ಚಾಲನೆ ಗೊತ್ತಿಲ್ಲದವರಿಗೆ ವಾಹನ ನೀಡಬಾರದು. ಹೀಗೆ ಅಪಘಾತ ಸಂಭವಿಸಿದಾಗ ಚಾಲನೆ ಮಾಡಿದವರ ಜೊತೆಗೆ ವಾಹನ ನೀಡಿದವರು ಹಾಗೂ ಮಾಲೀಕರೂ ಜವಾಬ್ದಾರರಾಗುತ್ತಾರೆ. ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Translate »