ಮೈಮುಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧ ಆಯ್ಕೆ
ಮೈಸೂರು

ಮೈಮುಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಅವಿರೋಧ ಆಯ್ಕೆ

August 15, 2019

ಮೈಸೂರು, ಆ.14(ಎಸ್‍ಬಿಡಿ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದ ಕರ ಸಂಘಗಳ ಒಕ್ಕೂಟ(ಮೈಮುಲ್)ದ ನೂತನ ಅಧ್ಯಕ್ಷ ರಾಗಿ ಮಾಜಿ ಸಚಿವ ಜಿ.ಟಿ.ದೇವೇಗೌಡರ ಆಪ್ತ ಮಾವಿನ ಹಳ್ಳಿ ಸಿದ್ದೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆ.9ರಂದು ನಡೆಯಬೇಕಿದ್ದ ಚುನಾವಣೆ ಕೋರಂ ಕೊರತೆ ಯಿಂದಾಗಿ ಮುಂದೂಡಲಾಗಿತ್ತು. ಅದರಂತೆ ಇಂದು ಸಿದ್ದಾರ್ಥ ನಗರದಲ್ಲಿರುವ ಮೈಮುಲ್ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಬಂಧಿ ಎಸ್.ಸಿ.ಅಶೋಕ್ ತಮ್ಮ ನಾಮಪತ್ರ ಹಿಂಪಡೆದ ಹಿನ್ನಲೆಯಲ್ಲಿ ಅಖಾಡದಲ್ಲಿ ಉಳಿದ ಏಕೈಕ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಾವಿನಹಳ್ಳಿ ಸಿದ್ದೇಗೌಡ, ಎಸ್.ಸಿ. ಅಶೋಕ್, ನಿರ್ದೇಶಕರಾದ ಪ್ರಸನ್ನ, ಕೆ.ಎಸ್.ಕುಮಾರ್, ಈರೇಗೌಡ, ದಾಕ್ಷಾಯಿಣಿ, ನಾಗಲಾಂಬಿಕೆ, ಕೆ.ಸಿ.ಬಲರಾಮು ಹಾಗೂ ಮೂವರು ಅಧಿಕಾರಿಗಳು ಚುನಾ ವಣೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಅವರ ಹೆಸರು ಸೂಚಿಸಿದ್ದ ಎ.ಟಿ.ಸೋಮಶೇಖರ್, ಅದನ್ನು ಅನುಮೋದಿಸಿದ್ದ ಕೆ.ಜಿ.ಮಹೇಶ್ ಹಾಗೂ ಓರ್ವ ಅಧಿಕಾರಿ ಗೈರಾಗಿದ್ದರು. ಕೋರಂ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಉಮೇಶ್ ಚುನಾವಣಾ ಪ್ರಕ್ರಿಯೆ ಆರಂಭಿಸಿದಾಗ, ಎಸ್.ಸಿ.ಅಶೋಕ್ ನಾಮಪತ್ರ ಹಿಂಪಡೆದರು. ಹಾಗಾಗಿ ಮಾವಿನಹಳ್ಳಿ ಸಿದ್ದೇಗೌಡರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಿಸಿದರು.

ಕಳೆದ ಬಾರಿ ಮೈಮುಲ್ ನಿರ್ದೇಶಕರ ಚುನಾವಣೆಯಲ್ಲಿ ಮಾವಿನಹಳ್ಳಿ ಸಿದ್ದೇ ಗೌಡರ ವಿರುದ್ಧ ಸೋತಿದ್ದ ಅಶೋಕ್ ಅವರನ್ನು ಇತ್ತೀಚೆಗೆ ನಾಮನಿರ್ದೇಶನ ಮಾಡ ಲಾಗಿತ್ತು. ಬಳಿಕ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಮೂಲಕ ಮತ್ತೆ ಮಾವಿನಹಳ್ಳಿ ಸಿದ್ದೇಗೌಡರ ವಿರುದ್ಧ ಸ್ಪರ್ಧೆಗಿಳಿದಿದ್ದರು. ಸ್ಪರ್ಧಿಗಳಿಬ್ಬರಿಗೂ ತಲಾ 7 ನಿರ್ದೇಶಕರ ಬೆಂಬಲವಿದ್ದ ಹಿನ್ನಲೆಯಲ್ಲಿ ತೀವ್ರ ಪೈಪೋಟಿ ನಿರ್ಮಾಣವಾಗಿತ್ತು. ಆದರೆ ಚುನಾವಣೆ ನಿಗಧಿಯಾಗಿದ್ದ ಆ.9ರಂದು ಅಶೋಕ್ ಹಾಗೂ ಬೆಂಬಲಿಗರು ಗೈರಾಗಿದ್ದರಿಂದ ಕೋರಂ ಕೊರತೆ ಉಂಟಾಗಿ ಚುನಾವಣೆ ಮುಂದೂಡಲ್ಪಟ್ಟಿದ್ದಲ್ಲದೆ, ರಾಜಕೀಯ ಆರೋಪಗಳಿಗೆ ಕಾರಣವಾಗಿತ್ತು. ಈ ಸಂದರ್ಭದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಅಶೋಕ್ ಅವರ ನಾಮನಿರ್ದೇಶನವನ್ನು ಟೀಕಿಸಿದ್ದರು.

ಈ ಎಲ್ಲಾ ಬೆಳವಣಿಗೆ ನಡುವೆ ಮೊನ್ನೆಯಷ್ಟೇ ಮಾಜಿ ಸಚಿವ ಜಿ.ಟಿ.ದೇವೇ ಗೌಡರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ಮೈಮುಲ್ ಅಧ್ಯಕ್ಷರ ಚುನಾವಣೆ ಸಂಬಂಧ ಚರ್ಚಿಸಿದ್ದರಲ್ಲದೆ, ಈ ಬಗ್ಗೆ ಕೇಳಿಬರುತ್ತಿ ರುವ ರಾಜಕೀಯ ಆರೋಪಗಳನ್ನೂ ಗಮನಕ್ಕೆ ತಂದಿದ್ದರು. ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವಂತೆ ಸೂಚಿಸುವುದಾಗಿ ಈ ವೇಳೆ ಬಿಎಸ್‍ವೈ ಭರವಸೆ ನೀಡಿದ್ದರು. ಇದೀಗ ಅವರ ಸೂಚನೆಯಂತೆ ಅಶೋಕ್ ನಾಮಪತ್ರ ವಾಪಸ್ಸು ಪಡೆದು, ಮಾವಿನಹಳ್ಳಿ ಸಿದ್ದೇಗೌಡರ ಆಯ್ಕೆಗೆ ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.

Translate »