ಯಡಿಯೂರಪ್ಪ ಸರ್ಕಾರದಿಂದ `ಮದುವೆ ಭಾಗ್ಯ’
ಮೈಸೂರು

ಯಡಿಯೂರಪ್ಪ ಸರ್ಕಾರದಿಂದ `ಮದುವೆ ಭಾಗ್ಯ’

November 1, 2019

ಬೆಂಗಳೂರು, ಅ. 31(ಕೆಎಂಶಿ)- ಸಿದ್ದರಾಮಯ್ಯನ ವರಿಗಿಂತ ತಾವು ಕಡಿಮೆ ಇಲ್ಲವೆನ್ನುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಭಾಗ್ಯ ಯೋಜನೆಗಳ ಜಾರಿಗೆ ತಂದಿದ್ದಾರೆ. ಯಡಿಯೂರಪ್ಪ ಇದೀಗ ಮೊದ ಲನೇ ದರ್ಜೆಯ ಮುಜರಾಯಿ ದೇವಸ್ಥಾನಗಳ ಸನ್ನಿಧಿ ಯಲ್ಲಿ ಸರಕಾರಿ ಮದುವೆ ಭಾಗ್ಯ ಘೋಷಿಸಿದ್ದಾರೆ.

ರಾಜ್ಯದಲ್ಲಿ ಕ್ಷೀರ, ಅನ್ನಭಾಗ್ಯ, ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಈಗಾಗಲೇ ಜಾರಿಯಲ್ಲಿವೆ. ಇದರ ಜೊತೆಗೆ ಹಿಂದೂ ಗಳಿಗೂ ಉಚಿತ ಮದುವೆ ಭಾಗ್ಯ ದೊರೆಯುತ್ತದೆ. ಈ ದೇವಸ್ಥಾನದ ಆವರಣಗಳಲ್ಲಿ ಮದುವೆ ಮಾಡಿ ಕೊಳ್ಳುವ ಪ್ರತಿ ವಧು-ವರನಿಗೆ 65 ಸಾವಿರ ರೂ. ವೆಚ್ಚ ಮಾಡಲಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ 2020ರ ಏಪ್ರಿಲ್ 26ರಂದು ಹಾಗೂ ಮೇ 24ರಂದು ಸರಕಾರಿ ಸಾಮೂಹಿಕ ವಿವಾಹ ನಡೆಯಲಿದೆ ಎಂದರು. ಮುಜರಾಯಿ ಇಲಾಖೆಯ ಆಯ್ದ 90-100 `ಎ’ ದರ್ಜೆ ದೇವಾಲಯದ ಆವರಣದಲ್ಲಿ ಮೊದಲಿಗೆ 1000 ವಿವಾಹ ನಡೆಸಲು ಉದ್ದೇಶಿಸಲಾಗಿದೆ. ವಧುವಿಗೆ ಎಂಟು ಗ್ರಾಂ ತೂಕದ 40000 ರೂ. ಮೌಲ್ಯದ ತಾಳಿ, ವಧುವಿನ ಧಾರೆ ಸೀರೆಗೆ 10000 ರೂ. ಹಾಗೂ ವರನಿಗೆ 5000 ರೂ.ನಂತೆ ಒಟ್ಟು 55,000 ರೂ. ನೀಡಿ ಸಾಮೂಹಿಕ ವಿವಾಹ ನಡೆಸಲಾಗುವುದು. ಅಲ್ಲದೆ, ಹತ್ತು ಸಾವಿರ ರೂ. ಬಾಂಡ್ ನೀಡಿ, ಸ್ಥಳದಲ್ಲೇ ವಿವಾಹ ನೋಂದಣಿ ಮಾಡಲಾಗುವುದು ಎಂದು ತಿಳಿಸಿದರು.

ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕೆ. ಬನಶಂಕರಿ ದೇವಾಲಯ ಸೇರಿದಂತೆ ಮುಜರಾಯಿ ಇಲಾಖೆಗೆ ಆದಾಯ ತರುವ 100 ದೇವಾಲ ಯಗಳಲ್ಲಿ ಈ ಮದುವೆ ಭಾಗ್ಯ ನಡೆಸಲಾಗುವುದು.

ಲಾಭದ ಹಣವನ್ನೇ ಮದುವೆಗೆ ಬಳಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ಹಣ ನೀಡುವುದಿಲ್ಲ. ಬಡವರು, ಶ್ರೀಮಂತರು ಎನ್ನದೆ ಎಲ್ಲರಿಗೂ ಸಮನಾಗಿ ಮದುವೆಯಾಗಲು ಮುಂದೆ ಬಂದರೆ, ನಾವು ಕಲ್ಯಾಣ ಮಾಡಿಕೊಡುತ್ತೇವೆ. ಮದುವೆ ಮಾಡಿಕೊಳ್ಳಲು ಮುಂದೆ ಬಂದರೆ ಸಾಲದು, ಅವರು ಪೋಷಕರ ಜತೆಯಲ್ಲಿಯೇ ಬಂದು ಅವರ ಸಮ್ಮುಖದಲ್ಲೇ ಮದುವೆ ನಡೆಯಬೇಕು. ವಧು-ವರನ ಪೋಷಕರು ಒಪ್ಪಿಗೆ ಸೂಚಿಸಿದರೆ, ಅಂತರ್ಜಾತಿ ವಿವಾಹ ಆಗಬಹುದು, ಹುಡುಗ, ಹುಡುಗಿಯ ಪೋಷಕರ ಒಪ್ಪಿಗೆ ಅಗತ್ಯ. ಪರೋಕ್ಷವಾಗಿ ಪ್ರೀತಿಸಿ ಮದುವೆಯಾಗುವವರಿಗೆ ಅವಕಾಶ ಇಲ್ಲ. ಯಾವುದೇ ಕಾರಣಕ್ಕೂ ಎರಡನೇ ಮದುವೆಗೆ ಅವಕಾಶ ಇಲ್ಲ. ಕುಟುಂಬದ ಸದಸ್ಯರೊಂದಿಗೆ ಇರುವ ಬಗ್ಗೆ ದಾಖಲೆ ಕೊಡಬೇಕು. ದೇವಾಲಯಗಳಲ್ಲಿ ನಡೆಯುವ ಯಕ್ಷಗಾನ ಮೇಳದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ವೇತನ ಹೆಚ್ಚಳ ಮಾಡಲು ಎಂ.ಎನ್. ಹೆಗಡೆ ನೇತೃತ್ವ ಸಮಿತಿಯಿಂದ ಮೂರು ತಿಂಗಳಲ್ಲಿ ವರದಿ ಪಡೆದು ವೇತನ ಪರಿಷ್ಕರಿಸಲಾಗುವುದು. ಹರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನಕ್ಕೆ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Translate »