ಹೊಸ ಕೈಗಾರಿಕೆಗಳಲ್ಲಿ ಮೂರು, ನಾಲ್ಕನೇ ದರ್ಜೆ ಎಲ್ಲಾ ಹುದ್ದೆ ಕನ್ನಡಿಗರಿಗೆ ಮೀಸಲು
ಮೈಸೂರು

ಹೊಸ ಕೈಗಾರಿಕೆಗಳಲ್ಲಿ ಮೂರು, ನಾಲ್ಕನೇ ದರ್ಜೆ ಎಲ್ಲಾ ಹುದ್ದೆ ಕನ್ನಡಿಗರಿಗೆ ಮೀಸಲು

November 1, 2019

ಬೆಂಗಳೂರು,ಅ.31(ಕೆಎಂಶಿ)-ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಹೊಸ ಕೈಗಾರಿಕೆ ಆರಂಭಗೊಂಡರೂ, ಮೂರನೇ ಮತ್ತು ನಾಲ್ಕನೇ ದರ್ಜೆಯ ಎಲ್ಲಾ ಹುದ್ದೆಗಳನ್ನು ಕನ್ನಡಿ ಗರಿಗೆ ಮೀಸಲಿಡುವ ಹೊಸ ನೀತಿಯನ್ನು ರಾಜ್ಯ ಸರ್ಕಾರ ಇಂದಿಲ್ಲಿ ಘೋಷಣೆ ಮಾಡುವುದರೊಂದಿಗೆ ನಿರುದ್ಯೋಗಿ ಗಳಿಗೆ ರಾಜ್ಯೋತ್ಸವ ಉಡುಗೊರೆ ನೀಡಿದೆ.

ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಪುನಶ್ಚೇತನ ಗೊಳಿಸುವ ಹಾಗೂ ಹೊಸ ಕೈಗಾರಿಕೆ ಆರಂಭಕ್ಕೆ ಮತ್ತೊಂದು ನೀತಿಗೆ ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ಅನು ಮತಿ ನೀಡಿದ್ದು, ಇದರಿಂದ 5 ಲಕ್ಷ ಉದ್ಯೋಗ ಸೃಷ್ಟಿಯಾಗ ಲಿದೆ ಎಂದು ಹೇಳಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಮುಂದಿನ ಐದು ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿ, ಈ ಜವಳಿ ಉದ್ಯಮಕ್ಕೆ ಪುನಶ್ಚೇತನ ನೀಡಲಾಗುವುದು.

ಇದಕ್ಕಾಗಿ ಎ, ಬಿ, ಸಿ ಮತ್ತು ಡಿ ಎಂಬ ವಲಯಗಳನ್ನು ಮಾಡಿದೆ. `ಎ’ ವಲಯವನ್ನು ಹೈದರಾಬಾದ್-ಕರ್ನಾಟಕ ವಿಭಾಗಕ್ಕೆ ನೀಡಲಾಗಿದೆ ಎಂದರು. ಇದಕ್ಕಾಗಿ ತಂದಿರುವ ನೀತಿಯಲ್ಲಿ ರಾಜ್ಯವನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಿ, ಉದ್ದಿಮೆ ಸ್ಥಾಪಿಸಲು ಮುಂದೆ ಬರುವಂತಹ ಉದ್ಯಮಿ ದಾರರಿಗೆ ವಿವಿಧ ಹಂತಗಳಲ್ಲಿ ಐದು ಸಾವಿರ ಕೋಟಿ ರೂ.ಗಳಷ್ಟು ಸಬ್ಸಿಡಿ ನೀಡಲು ಸಭೆ ಅನುಮತಿ ನೀಡಿದೆ.

ಉದ್ಯೋಗ ಸಮಸ್ಯೆ ನಿವಾರಣೆ ಮತ್ತು ಕನ್ನಡಿಗರಿಗೆ ಹಾಗೂ ಗ್ರಾಮೀಣ ಮಕ್ಕಳಿಗೆ ಉದ್ಯೋಗ ಲಭ್ಯವಾಗಬೇಕೆಂಬ ಉದ್ದೇಶದಿಂದಲೇ 2016ರಲ್ಲಿ ಮಾಡಿದ್ದ ಶಿಫಾರಸ್ಸುಗಳಿಗೆ ಇಂದು ಅನುಮತಿ ದೊರೆತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆರಂಭಗೊಳ್ಳುವ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಇದರಲ್ಲಿ ಅನ್ಯರಿಗೆ ಅವಕಾಶವಿಲ್ಲ. ಉಳಿದ ಮೇಲ್ದರ್ಜೆ ಹುದ್ದೆಗಳಲ್ಲೂ ರಾಜ್ಯದ ಬಹುಪಾಲು ದೊರೆಯುವಂತೆ ನೀತಿ-ನಿಯಮ ರೂಪಿಸಲಾಗಿದೆ ಎಂದು ವಿವರಿಸಿದರು.

ಜಲಾನಯನ ಯೋಜನೆ: ಅಂತರ್ಜಲ ವೃದ್ಧಿಸುವ ಉದ್ದೇಶ ದಿಂದ ನೂರು ತಾಲೂಕುಗಳಲ್ಲಿ ಜಲಾನಯನ ಯೋಜನೆಗಳನ್ನು ಹಮ್ಮಿಕೊಳ್ಳಲು ಸಂಪುಟ ಅನುಮತಿ ನೀಡಿದೆ. ಹರಿಯುವ ಜಲವನ್ನು ಇಂಗಿಸಿ, ಜಲಮೂಲ ಹೆಚ್ಚಿಸುವುದೇ ಇದರ ಉದ್ದೇಶ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯದ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದರೂ, ಎಷ್ಟು ಹಣ ಮೀಸಲಿಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿಲ್ಲ.

ಒಂದರಿಂದ ಎಂಟನೇ ತರಗತಿಯವರೆಗೂ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೂವತ್ತೇಳು ಲಕ್ಷ ಮಕ್ಕಳಿಗೆ ತಲಾ 250 ರೂ. ವೆಚ್ಚದಲ್ಲಿ ಎರಡನೇ ಸಮವಸ್ತ್ರ ನೀಡಲಾಗಿದೆ.

ಮಕ್ಕಳಿಗೆ ಮತ್ತೊಂದು ಸಮವಸ್ತ್ರ: ಈ ಹಿಂದೆ ಶಾಲಾ ಮಕ್ಕಳಿಗೆ ಒಂದೇ ಜತೆ ಸಮವಸ್ತ್ರ ಒದಗಿಸಲಾಗಿತ್ತು.ಆದರೆ ಒಂದು ಜತೆ ಸಮವಸ್ತ್ರ ಸಾಲದು ಎಂಬ ಕಾರಣಕ್ಕಾಗಿ ಹೈಕೋರ್ಟ್ ಎರಡನೇ ಜತೆ ಸಮವಸ್ತ್ರವನ್ನು ಒದಗಿಸಲು ಸೂಚನೆ ನೀಡಿತ್ತು.ಸರ್ಕಾರ ಅದನ್ನು ಪಾಲನೆ ಮಾಡಲು ತೀರ್ಮಾನಿಸಿದೆ ಎಂದರು.

ರಾಜ್ಯದಲ್ಲಿ ಲಭ್ಯವಾಗುವ ಕಬ್ಬಿಣದ ಅದಿರಿನ ಪೈಕಿ ಆರು ಮಿಲಿಯನ್ ಟನ್ ಕಬ್ಬಿಣದ ಅದಿರು ಉಳಿಯುತ್ತಿದ್ದು ಇದನ್ನು ರಫ್ತು ಮಾಡುವ ಸಂಬಂಧ ಚರ್ಚೆ ನಡೆಯಿತು. ಆದರೆ ಅದಿರನ್ನು ರಫ್ತು ಮಾಡುವ ಬದಲು ಕಬ್ಬಿಣವನ್ನಾಗಿ ಪರಿವರ್ತಿಸಿ ಮೌಲ್ಯವರ್ಧಿತ ತೆರಿಗೆ ರಾಜ್ಯಕ್ಕೆ ದಕ್ಕುವಂತೆ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಜಿಂದಾಲ್ ಸಂಸ್ಥೆಯವರು ಆಸ್ಟ್ರೇಲಿಯಾ ಹಾಗೂ ಒರಿಸ್ಸಾಗಳಿಂದ ಆರು ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಆಮದು ಮಾಡಿಕೊಳ್ಳುತ್ತಿದ್ದು ಇದರಿಂದಾಗಿ ಆ ಪ್ರಮಾಣದ ಉತ್ಪನ್ನ ನಮ್ಮಲ್ಲಿ ಉಳಿಯುತ್ತಿದೆ.ಆದರೆ ಯಾವ ಕಾರಣಕ್ಕೂ ಅದನ್ನು ರಫ್ತು ಮಾಡಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದರ ಬದಲು ರಾಜ್ಯದಲ್ಲಿರುವ ಬಿಡಿಭಾಗಗಳ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಅದನ್ನು ಕಬ್ಬಿಣವನ್ನಾಗಿ ಮಾಡಲಾಗುವುದು, ಬಿಡಿ ಭಾಗಗಳನ್ನು ಉತ್ಪಾದಿಸಲಾಗುವುದು ಎಂದು ಅವರು ವಿವರಿಸಿದರು.

ಲೋಕೋಪಯೋಗಿ ಇಲಾಖೆಗೆ ಹೊಸತಾಗಿ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಕೆಪಿಎಸ್‍ಸಿಗೆ ಸೂಚನೆ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ವಸತಿ ಶಾಲೆ ಮಕ್ಕಳಿಗೆ ಶೂ, ಸಾಕ್ಸ್‍ಗಳನ್ನು ಒದಗಿಸಲು ಹದಿನೇಳು ಕೋಟಿ ರೂಪಾಯಿಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ಚಿನಕುರಳಿಯಲ್ಲಿ ಸೈನಿಕ ಶಾಲೆ: ಪಾಂಡವಪುರ ತಾಲೂಕಿನ ಚಿನಕುರಳಿ ಯಲ್ಲಿ ಸೈನಿಕ ತರಬೇತಿ ಶಾಲೆ ಸ್ಥಾಪಿಸಲು ಹನ್ನೆರಡು ಎಕರೆ ಭೂಮಿ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ 83 ಪಶು ವೈದ್ಯಕೀಯ ಸಹಾಯಕರ ಹುದ್ದೆ, 61 ಪಶು ವೈದ್ಯಾಧಿಕಾರಿಗಳ ಹುದ್ದೆ ಭರ್ತಿ ಮಾಡಲು ತೀರ್ಮಾನಿಸ ಲಾಗಿದೆ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

Translate »