ಹುತಾತ್ಮ ಭಾರತೀಯ ಯೋಧರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
ಮೈಸೂರು

ಹುತಾತ್ಮ ಭಾರತೀಯ ಯೋಧರಿಗೆ ಮೈಸೂರಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

February 15, 2019

ಮೈಸೂರು: ಜಮ್ಮುವಿನ ಪುಲ್ವಾಮಾದಲ್ಲಿ ಭಾರತೀಯ ಸೇನೆ ಮೇಲೆ ನಡೆದ ಪಾಕ್ ಪ್ರಾಯೋ ಜಿತ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಮೈಸೂರಿನ ವಿವಿಧೆಡೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು, ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ ಸೈನಿಕರ ನೆತ್ತರಿಗೆ ಪ್ರತೀಕಾರಬೇಕೆಂದು ಆಗ್ರಹಿಸಿದರು.

ಮಹಾತ್ಮ ಗಾಂಧೀ ವೃತ್ತದಲ್ಲಿ ನೂರಾರು ಸೈನಿಕ ಅಭಿಮಾನಿಗಳು ಒಗ್ಗೂಡಿ, ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಭಯೋತ್ಪಾದನಾ ದಾಳಿಗೆ ಕುಮ್ಮಕ್ಕು ನೀಡಿರುವ ಪಾಕ್ ವಿರುದ್ಧ ಹರಿಹಾಯ್ದರು. `ಹರಿದ ರಕ್ತ ಕೇಳುತ್ತಿದೆ ಪ್ರತೀಕಾರ ಬೇಕೆಂದು’ ಘೋಷಣೆ ಕೂಗಿದರು. `ನಮ್ಮ ಸೈನಿಕ ನಮ್ಮ ಹೆಮ್ಮೆ’ ಎಂದು ಜೈಕಾರ ಹಾಕಿದರು. ಭಾರತೀಯ ಸೇನೆಯ ಮೇಲೆ ವಿಶ್ವಾಸ ವಿಡಬೇಕು. ಯಾವ ಸಂದರ್ಭದಲ್ಲೂ ನಿಮ್ಮ ಜೊತೆಗಿರುತ್ತೇವೆ ಎಂದು ಮನೋಸ್ಥೈರ್ಯ ತುಂಬಬೇಕು. ಯಾವುದೇ ಕಾರಣಕ್ಕೂ ಸೈನಿಕರ ಮನಸ್ಸನ್ನು ಕುಗ್ಗಿಸುವ ಕೃತ್ಯವೆಸಗಬಾರದು. ರಾಷ್ಟ್ರದ ರಕ್ಷಣೆಗಾಗಿ ಬಲಿದಾನಕ್ಕೆ ಸಜ್ಜಾಗಿ ರುವ ಅವರನ್ನು ಗೌರವಿಸಬೇಕೆಂದು ಅನೇಕರು ನುಡಿ ನಮನ ಸಲ್ಲಿಸಿದರು. ನೂರಾರು ಮಂದಿ ರಸ್ತೆಯಲ್ಲೇ ಕುಳಿತು ವೀರ ಸೇನಾನಿಗಳನ್ನು ಸ್ಮರಿಸಿಕೊಂಡರು. ವೃತ್ತದ ಸುತ್ತಲೂ ಮಾನವ ಸರಪಳಿ ನಿರ್ಮಿಸಿದ್ದರು. ಸೈನಿಕರಿಗೆ ಜಿಂದಾಬಾದ್, ಪಾಕಿಸ್ತಾನಕ್ಕೆ ಮುರ್ದಾ ಬಾದ್ ಘೋಷಣೆ ಮುಗಿಲು ಮುಟ್ಟಿತ್ತು. ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಮುಖಂಡ ಹೆಚ್.ವಿ.ರಾಜೀವ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಆರ್‍ಎಸ್‍ಎಸ್ ಕಾರ್ಯಕರ್ತರು ಭಾಗಿಯಾಗಿದ್ದರು.

ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹೋಟೆಲ್ ಮಾಲೀಕರ ಸಂಘ, ಮೈಸೂರು ಕನ್ನಡ ವೇದಿಕೆ, ಕನ್ನಡ ಕ್ರಿಯಾ ಸಮಿತಿ, ಕನ್ನಡ ಚಳುವಳಿ ಜಿಲ್ಲಾ ಸಮಿತಿ, ಆಡಳಿತ ತರಬೇತಿ ಸಂಸ್ಥೆ ಪ್ರಶಿಕ್ಷಣಾರ್ಥಿ ಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮೈಸೂರು ಜಿಲ್ಲಾ ಫೋಟೋಗ್ರಾಫರ್ಸ್ ಅಂಡ್ ವೀಡಿಯೋ ಗ್ರಾಫರ್ಸ್ ಅಸೋಸಿ ಯೇಷನ್, ಯುವ ಬ್ರಿಗೇಡ್, ಫ್ರೆಂಡ್ಲಿ ಮೋಟಾರ್ಸ್‍ನ ನೆಕ್ಸಾ ಕಾರ್ ಶೋರೂಂ, ಪರಿಸರ ಸಂರಕ್ಷಣಾ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳ ಸದಸ್ಯರು, ವಿದ್ಯಾ ರ್ಥಿಗಳು ಮೇಣದ ಬತ್ತಿ ಹೊತ್ತಿಸಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅನೇಕ ಮುಖಂಡರು ಸೈನಿಕರಿಗೆ ನುಡಿ ನಮನ ಸಲ್ಲಿಸಿ, ಪ್ರತಿಯೊಬ್ಬರೂ ಸೈನ್ಯಕ್ಕೆ ಶಕ್ತಿ ತುಂಬಬೇಕೆಂದು ತಿಳಿಸಿದರು. ಗಾಂಧೀ ವೃತ್ತದವರೆಗೆ ಘೋಷಣೆ ಸಹಿತ, ಮೇಣದ ಬತ್ತಿ ಮೆರವಣಿಗೆ ನಡೆಸಿದರು.

ಮೈಸೂರು ನ್ಯಾಯಾಲಯದ ಮುಂಭಾಗದ ಗಾಂಧೀ ಪುತ್ಥಳಿ ಬಳಿ ಮೈಸೂರು ನಾಗರಿಕರ ಸಾಂಸ್ಕøತಿಕ ವೇದಿಕೆ, ಮೆಟ್ರೋಪೋಲ್ ವೃತ್ತದಲ್ಲಿ ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತರು, ಕಲಾಮಂದಿರದ ಬಳಿ ಕಲಾವಿದರ ಸಂಘ ಸೇರಿದಂತೆ ಹತ್ತು ಹಲವು ಸಂಘಟನೆಗಳು ವಿವಿಧೆಡೆ ಮೇಣದ ಬತ್ತಿ ಬೆಳಗಿಸಿ, ಹುತಾತ್ಮ ಯೋಧರನ್ನು ಸ್ಮರಿಸಿದವು. ಅಗ್ರಹಾರದ ತ್ಯಾಗರಾಜ ರಸ್ತೆ, ಚಾಮುಂಡಿಪುರಂ ವೃತ್ತ, ಕುವೆಂಪುನಗರ, ಬೃಂದಾವನ ಬಡಾವಣೆ, ಪಂಚಮುಖಿ ಗಣಪತಿ ದೇವಾಲಯ, ಜಯ ಲಕ್ಷ್ಮೀಪುರಂ, ವಿಜಯನಗರ ಸೇರಿದಂತೆ ಬಹುತೇಕ ಎಲ್ಲಾ ಬಡಾವಣೆ ನಿವಾಸಿಗಳು ಸೈನಿಕರಿಗೆ ಗೌರವ ಸಲ್ಲಿಸಿದರು. ಮೈಸೂರು ಅರಮನೆ ಮಂಡಳಿ ಸೇರಿದಂತೆ ಅನೇಕ ಕಚೇರಿಗಳು, ಶಾಲಾ-ಕಾಲೇಜುಗಳಲ್ಲೂ ನಿಮಿಷ ಕಾಲ ಮೌನಾಚರಣೆ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹಲವೆಡೆ ಮಂಡ್ಯದ ಗುರು ಇನ್ನಿತರ ಹುತಾತ್ಮ ಯೋಧರ ಭಾವಚಿತ್ರವನ್ನು ಅಳವಡಿಸಿ, ಸ್ಮರಿಸಿಕೊಂಡರು.

ಒಟ್ಟಾರೆ ಮೈಸೂರಿನ ಜನತೆ, ಹುತಾತ್ಮ ಯೋಧರನ್ನು ಸ್ಮರಿಸಿ ಕೊಂಡರು. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ದಾಳಿಗೆ ಪ್ರತೀ ಕಾರ ಆಗಲೇಬೇಕೆಂದು ಆಗ್ರಹಿಸಿದರು.

Translate »