ಜಮ್ಮುವಿನಲ್ಲಿ ಉಗ್ರರ ದಾಳಿಗೆ ಮೈಸೂರಲ್ಲಿ ತೀವ್ರ ಆಕ್ರೋಶ
ಮೈಸೂರು

ಜಮ್ಮುವಿನಲ್ಲಿ ಉಗ್ರರ ದಾಳಿಗೆ ಮೈಸೂರಲ್ಲಿ ತೀವ್ರ ಆಕ್ರೋಶ

February 16, 2019

ವಕೀಲರು, ಹೋಟೆಲ್ ಮಾಲೀಕರು, ಸಂಘ-ಸಂಸ್ಥೆಗಳಿಂದ ಪ್ರತಿಭಟನೆ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಮೈಸೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ 44 ಮಂದಿ ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡ ಪಾಕ್ ಉಗ್ರರ ಕೃತ್ಯಕ್ಕೆ ಮೈಸೂರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ವಕೀಲರ ಸಂಘ, ವಿಶ್ವ ಹಿಂದೂ ಪರಿಷತ್, ಮೈಸೂರು ಕನ್ನಡ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿ ಕಾರಿಗಳು ಇಂದು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದರಲ್ಲದೆ, ದಾಳಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ತೀವ್ರ ಸಂತಾಪ ಸೂಚಿಸಿದರು.

ಹೋಟೆಲ್ ಮಾಲೀಕರು: ಉಗ್ರರ ಅಟ್ಟಹಾಸ ಖಂಡಿಸಿ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡರ ನೇತೃತ್ವದಲ್ಲಿ ಜಿಲ್ಲಾ ನ್ಯಾಯಾಲಯದ ಮುಂದಿನ ಮಹಾತ್ಮ ಗಾಂಧೀಜಿ ಪುತ್ಥಳಿ ಬಳಿ ಇಂದು ಬೆಳಿಗ್ಗೆ ಜಮಾಯಿಸಿದ ಹೋಟೆಲ್ ಮಾಲೀಕರು, ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಯೋಧರ ಬಲಿದಾನ ಪಡೆದ ಪಾಕಿಸ್ತಾನ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ತೀವ್ರ ಪ್ರತಿಭಟನೆ ನಡೆಸಿದ ಅವರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದರು. ದಾಳಿ ನಡೆಸಿದ ಉಗ್ರರನ್ನು ಬಂಧಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು, ಭಾರತದ ಗಡಿಯಲ್ಲಿ ಸೇವೆ ಸಲ್ಲಿಸು ತ್ತಿರುವ ಭಾರತೀಯ ಯೋಧರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿ ಸಿದರು. ಪ್ರಕಾಶ್ ಶೆಟ್ಟಿ, ಸುಬ್ರಹ್ಮಣ್ಯ ತಂತ್ರಿ, ಉಗ್ರಯ್ಯ, ಪಿ.ಎಸ್. ಕುಂದರ್, ಕಿರಣ್, ರವಿಶಾಸ್ತ್ರಿ, ರಘುಕುಮಾರ್, ಗಿರಿಧರ್, ಎಂ.ಜೆ.ಕುಶಾಲಪ್ಪ, ಪುರಾಣಿಕ್ ರಾಜು, ಹೇಮಂತ, ಚಂದ್ರಶೇಖರ್ ಶೆಟ್ಟಿ, ಅರುಣ್ ಸೇರಿದಂತೆ ಸಂಘದ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಕೀಲರಿಂದ ಶ್ರದ್ಧಾಂಜಲಿ: ಮೈಸೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಒಂಟಿಗೋಡಿ ಅವರ ನೇತೃತ್ವದಲ್ಲಿ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಇಂದು ಭಾರತೀಯ ಹುತಾತ್ಮ ಯೋಧರಿಗೆ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್, ಉಪಾಧ್ಯಕ್ಷ ಶಿವಣ್ಣೇಗೌಡ, ಕಾರ್ಯದರ್ಶಿ ಶಿವಣ್ಣ, ವಕೀಲರುಗಳಾದ ಟಿ.ಎಸ್. ಮಧುಸೂದನ್, ಹೆಚ್. ಅರವಿಂದ್, ನಾಗರಾಜ್, ರಾಮಕೃಷ್ಣ, ರವಿ, ದೇಶಿಕ್, ರಘು, ಪುರುಷೋತ್ತಮ್, ಗಿರಿಜೇಶ್, ಜೋಷಿ, ದಿನೇಶ, ಕೃಷ್ಣ, ಲೋಕೇಶ, ಸುಬ್ಬಯ್ಯ, ನವೀನ್, ಬಸವರಾಜು, ಮಹದೇವ, ಮೋಹನ್, ಹೋಯ್ಸಳ ಸೇರಿದಂತೆ ಹಲವರು ಭಾಗವಹಿಸಿ, ಸಂತಾಪ ಸೂಚಿಸಿದರು.
ವಿಶ್ವ ಹಿಂದೂ ಪರಿಷತ್: ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ಮಾಡಿದ ಪಾಕ್ ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.

ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಭಾರತೀಯ ಸೈನಿಕರ ಬಲಿದಾನಗೈದ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು. ಎಲ್ಲಾ ಉಗ್ರಗಾಮಿ ಸಂಘಟನೆಗಳನ್ನು ನಿರ್ನಾಮಗೊಳಿಸಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು, ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಹೆಚ್‍ಪಿ ಅಧ್ಯಕ್ಷ ರಾಜೇಂದ್ರಬಾಬು, ಕಾರ್ಯದರ್ಶಿ ಪ್ರದೀಪ್‍ಕುಮಾರ್, ವಕೀಲ ಸಿ.ವಿ.ಕೇಶವಮೂರ್ತಿ, ಮೀರಾ ಶೆಣೈ, ಲತಾ, ಮಂಜುನಾಥ, ಶ್ರೀನಿವಾಸ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೈಸೂರು ಕನ್ನಡ ವೇದಿಕೆ: ಪಾಕಿಸ್ತಾನದ ಪೈಶಾಚಿಕ ಕೃತ್ಯವನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ಪದಾಧಿಕಾರಿಗಳು, ಅಗ್ರಹಾರ ಸರ್ಕಲ್‍ನಲ್ಲಿ ಇಂದು ಪ್ರತಿಭಟನೆ ನಡೆಸಿದರು. ಭಯೋತ್ಪಾದಕ ಕೃತ್ಯವನ್ನು ಹತ್ತಿಕ್ಕಬೇಕು. ಭಾರತೀಯ ಹೆಮ್ಮೆಯ ಯೋಧರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ಒತ್ತಾಯಿಸಿದರು.

Translate »