ಕಾರು ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ  ಮೂವರು ಅಂತರರಾಜ್ಯ ಖದೀಮರ ಬಂಧನ
ಮೈಸೂರು

ಕಾರು ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ ಮೂವರು ಅಂತರರಾಜ್ಯ ಖದೀಮರ ಬಂಧನ

February 16, 2019

ಮೈಸೂರು,: ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ಕಾರಿನ ಗ್ಲಾಸ್ ಒಡೆದು ಕಳವು ಮಾಡುತ್ತಿದ್ದ ತಮಿಳುನಾಡಿನ ರಾಮ್‍ಜೀನಗರ ಗ್ಯಾಂಗ್‍ನ ಮೂವರು ಅಂತರ ರಾಜ್ಯ ಕಳ್ಳರನ್ನು ದೇವರಾಜ ಪೊಲೀಸರು ಬಂಧಿಸಿದ್ದಾರೆ. ಇವರಿಂದ 4,180 ರೂ. ನಗದು ಹಾಗೂ 6 ಲ್ಯಾಪ್‍ಟಾಪ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಶ್ರೀರಂಗಂ ತಾಲೂಕಿನ ಗಾಂಧಿನಗರದ ನಿವಾಸಿಗಳಾದ ಭಾರತೀರಾಜನ್(38), ಜ್ಞಾನಪ್ರಕಾಶ(35) ಅವರನ್ನು ಫೆ.7 ರಂದು ಟೌನ್‍ಹಾಲ್ ಬಳಿ ಕಾರ್ಯಾಚರಣೆ ನಡೆಸಿ, ಬಂಧಿಸಲಾಗಿತ್ತು. ಇವರ ಸುಳಿವಿನ ಮೇರೆಗೆ ಮತ್ತೋರ್ವ ಆರೋಪಿ ಟೈಲರ್ ಪ್ರಕಾಶ್ ಎಂಬಾತನ್ನು ಬಂಧಿಸಿ, ತೀವ್ರ ವಿಚಾರಣೆ ನಡೆಸಿದ್ದರು. ಈತನ ಸುಳಿವಿನ ಮೇರೆಗೆ ಫೆ.13ರಂದು ತಮಿಳುನಾಡಿನ ರಾಮ್‍ಜೀನಗರದ ನಿವಾಸಿಗಳಾದ ಡೆಲ್ಲಿರಾಜನ್, ಕದರಿವನ್, ಗೋಕುಲ್ ಅವರ ಗ್ಯಾಂಗ್‍ನಲ್ಲಿ ಸೇರಿಕೊಂಡು ಫೆ.5 ರಂದು ಸಯ್ಯಾಜಿರಾವ್ ರಸ್ತೆಯಲ್ಲಿ ನಾಗರಿಕರೊಬ್ಬರಿಂದ ನಗದು ದರೋಡೆ, ದೇವರಾಜ ಠಾಣೆಯ ವಿವಿಧ 5 ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್‍ಗಳನ್ನು ಒಡೆದು ನಗದು, ಲ್ಯಾಪ್‍ಟಾಪ್ ಮತ್ತು ಚಿನ್ನಾಭರಣಗಳಿದ್ದ ಬ್ಯಾಗ್‍ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇವರ ಸುಳಿವಿನ ಮೇರೆಗೆ 4,180 ನಗದು ಹಾಗೂ 6 ಲ್ಯಾಪ್‍ಟಾಪ್ ಬ್ಯಾಗ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಉಳಿದ ಆರೋಪಿಗಳ ಬಲೆಗೆ ಪತ್ತೆ ಕಾರ್ಯ ಮುಂದುವರೆದಿದ್ದು, ಇವರು ಸಿಕ್ಕರೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ದೇವರಾಜ ಠಾಣಾ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Translate »