ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ
ಮಂಡ್ಯ

ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ

April 18, 2019
  • ಗೃಹಿಣಿ ಸಾವು; ಮೂವರಿಗೆ ಗಾಯ
  • ಮತದಾನಕ್ಕಾಗಿ ಬೆಂಗಳೂರಿನಿಂದ ಕೊಡಗಿಗೆ ತೆರಳುತ್ತಿದ್ದ ಕುಟುಂಬ

ಶ್ರೀರಂಗಪಟ್ಟಣ: ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿ ಣಾಮ ಗೃಹಿಣಿ ಸಾವನ್ನಪ್ಪಿ ಮೂವರು ತೀವ್ರವಾಗಿ ಗಾಯ ಗೊಂಡ ಘಟನೆ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮ ದಲ್ಲಿ ಬುಧವಾರ ಸಂಭವಿಸಿದೆ. ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಆಶಾ (50) ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪತಿ ಅಣ್ಣಯ್ಯ (60) ಮತ್ತು ಅವರ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಸಲುವಾಗಿ ಈ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಮಾರುತಿ ವ್ಯಾನ್‍ನಲ್ಲಿ ಬೆಂಗಳೂರಿನಿಂದ ಕೊಡಗಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಬಾಬುರಾಯನ ಕೊಪ್ಪಲಿನಲ್ಲಿ ಶಿಫ್ಟ್ ಕಾರನ್ನು ಓವರ್‍ಟೇಕ್ ಮಾಡಿದ ವೇಳೆ ರಸ್ತೆ ಬದಿ ನಿಂತಿದ್ದ ಎಂ ಸ್ಯಾಂಡ್ ತುಂಬಿದ್ದ ಟಿಪ್ಪರ್‍ಗೆ ವ್ಯಾನ್ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಮಾರುತಿ ವ್ಯಾನ್ ನಜ್ಜುಗುಜ್ಜಾಗಿ ಟಿಪ್ಪರ್‍ಗೆ ಅಂಟಿಕೊಂಡಿತ್ತು. ತಕ್ಷಣವೇ ರಕ್ಷಣೆಗೆ ಬಂದ ಗ್ರಾಮಸ್ಥರು ವ್ಯಾನ್‍ನ ಕೆಲ ಭಾಗಗಳನ್ನು ಕತ್ತರಿಸಿ ಗಾಯಾಳುಗಳನ್ನು ಹೊರತೆಗೆದು ಆಂಬ್ಯುಲೆನ್ಸ್‍ನಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದರು. ತೀವ್ರವಾಗಿ ಗಾಯಗೊಂಡಿದ್ದ ಆಶಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ವ್ಯಾನ್ ಚಾಲನೆ ಮಾಡುತ್ತಿದ್ದ ಅಣ್ಣಯ್ಯ ತೀವ್ರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಅಪಘಾತದಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ ಉಂಟಾಗಿತ್ತು. ಶ್ರೀರಂಗ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »